
ಚಿತ್ರದುರ್ಗ ನ್ಯೂಸ್.ಕಾಂ
ಚಿತ್ರದುರ್ಗದ ಹಸಿರ ತೊಟ್ಟಿಲಿನಂತಿರುವ ಜೋಗಿಮಟ್ಟಿಯಲ್ಲಿ ಅಡಗಿರುವ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸತನ ಮನೆ ಮಾಡಿದೆ. ಹೊಸತನಕ್ಕೆ ಕಾರಣ ಇಲ್ಲಿಗೆ ಹೊಸ ಅತಿಥಿಗಳ ಆಗಮನವಾಗಿದೆ.
ಆಡುಮಲ್ಲೇಶ್ವ ಮೃಗಾಲಯದ ನಿವಾಸಿಯಾಗಿದ್ದ ಕರಡಿ ಮರಿಗಳಿಗೆ ಜನ್ಮ ನೀಡಿದೆ. ಅದೂ ಕೂಡಾ ಮುದ್ದಾದ ಅವಳಿ ಮರಿಗಳಿಗೆ. ಕರಡಿಗೆ ಮೀಸಲಾಗಿರುವ ಆವರಣದಲ್ಲಿ ಈ ಮರಿಗಳ ತುಂಟಾಟ ಇಂದಿನಿಂದ ಪ್ರವಾಸಿಗರಿಗೆ ನೋಡಲು ಸಿಗುತ್ತಿದೆ.

ಗೌರಿ ಗಣೇಶ ಹಬ್ಬದ ಕೊಡುಗೆ ಎಂಬಂತೆ ಆಡುಮಲ್ಲೇಶ್ವರ ಕಿರು ಮೃಗಾಲಯದ ಅಧಿಕಾರಿಗಳು ಹಬ್ಬದ ದಿನವೇ ಕರಡಿ ಮತ್ತು ಮರಿಗಳನ್ನು ಹೊರಗೆ ಬಿಟ್ಟಿದ್ದಾರೆ. ಈಗ ಆವರಣದಲ್ಲಿ ತಾಯಿಯೊಂದಿಗೆ ಸ್ವಚ್ಛಂದವಾಗಿ ಆಡಿಕೊಂಡಿರುವ ಮರಿಗಳು ಇಲ್ಲಿಗೆ ಇಲ್ಲಿನ ವಿಶೇಷವಾದ ಹೊಸ ಅತಿಥಿಗಳು.
2022 ಡಿಸೆಂಬರ್ 24 ರಂದು ಕರಡಿ ಅವಳಿ ಮರಿಗಳಿಗೆ ಜನ್ಮ ನೀಡಿತ್ತು. ಅಂದಿನಿಂದ ಕರಿಡಗೆ ಮೀಸಲಾಗಿರುವ ಮನೆಯಲ್ಲೇ ಇಟ್ಟು ಆರೈಕೆ ಮಾಡಲಾಗಿತ್ತು. 8 ತಿಂಗಳ ಬಾಣಂತನದ ನಂತರ ಮರಿಗಳು ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳಲಿ ಎನ್ನುವ ಕಾರಣಕ್ಕೆ ಈಗ ತಾಯಿ ಹಾಗೂ ಎರಡು ಕರಡಿ ಮರಿಗಳನ್ನು ಕರಡಿ ಆವರಣಕ್ಕೆ ಕರೆತರಲಾಗಿದೆ.

ಆಟೋಟ
ಸಾಮಾನ್ಯವಾಗಿ ಕರಡಿಗಳು ಕಾಡಿನ ಕಲ್ಲು ಪೊಟರೆ, ಗುಹೆಗಳಲ್ಲಿ ಮರಿಗಳಿಗೆ ಜನ್ಮ ನೀಡಿ ಬೆಳೆದುಕೊಂಡು ಬಿಡುತ್ತವೆ. ಆದರೆ, ಆಡುಮಲ್ಲೇಶ್ವರ ಮೃಗಾಲಯ ವಾಸಿಯಾಗಿ ಮರಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳು ವಿಶೇಷ ಗಮನ ನೀಡಿ ಆಹಾರ, ಔಷಧಿ ನೀಡಿದ್ದಾರೆ.
ಕರಡಿ ಮರಿಗಳ ಆಟೋಟಕ್ಕೂ ವ್ಯವಸ್ಥೆ:
ಕರಡಿಗಳು ಆಟೋಟ, ಓಡಾಟಕ್ಕಾಗಿ ಕರಡಿ ಆವರಣದಲ್ಲಿ ಸಹಜವಾಗಿರುವಂತೆ ಬಂಡೆಗಳ ರಚನೆ, ಹಳ್ಳ, ಗಿಡ, ಮರಗಳು, ಹೆಬ್ಬಂಡೆಗಳು, ನೀರಿನ ಗುಂಡಿಗಳನ್ನು ರಚನೆ ಮಾಡಲಾಗಿದೆ. ಆದರೆ, ಕರಡಿ ಮರಿಗಳ ಆಗಮನದ ಹಿನ್ನೆಲೆಯಲ್ಲಿ ಈ ಆವರಣದಲ್ಲಿ ವಿಶೇಷವಾಗಿ ಉಯ್ಯಾಲೆ ಹಾಕಲಾಗಿದೆ.
ಇದನ್ನೂ ಓದಿ: ಭೂಲೋಕಕ್ಕೆ ಪಾದ ಸ್ಪರ್ಶಿಸಿದ ಗೌರಿಪುತ್ರ: ಸುದರ್ಶನ ಚಕ್ರ, ಪಾಂಚಜನ್ಯ ಹಿಡಿದು ಬಂದ ಹಿಂದೂ ಮಹಾಗಣಪತಿ
ಆಡುಮಲ್ಲೇಶ್ವರದ ಇತಿಹಾಸದಲ್ಲೇ ಮೊದಲು:
ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯ 1987ರಲ್ಲಿ ಪ್ರಾರಂಭವಾಗಿದೆ. ಅಂದಿನಿಂದ ಇಂದಿನವರೆಗೆ ಅನೇಕ ಕರಡಿಗಳು ಮೃಗಾಲಯಕ್ಕೆ ಬಂದಿವೆ. ಹೋಗಿವೆ. ಸಾಕಷ್ಟು ಮರಿಗಳು ಕೂಡಾ ಈ ಮೃಗಾಲಯದಲ್ಲಿದ್ದವು. ಆದರೆ, ಈವರೆಗೆ ಯಾವ ಕರಡಿಯೂ ಆಡುಮಲ್ಲೇಶ್ವರದಲ್ಲಿ ಮರಿಗಳಿಗೆ ಜನ್ಮ ನೀಡಿರಲಿಲ್ಲ. ಬೇರೆ ಬೇರೆ ಜಾಗಗಳಲ್ಲಿ ಸಿಕ್ಕಿದ ಮರಿಗಳನ್ನು ತಂದು ಮೃಗಾಲಯದಲ್ಲಿ ಸಾಕುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ 2022 ಡಿಸೆಂಬರ್ 24 ರಂದು ಕರಡಿ ಮರಿಗಳ ಜನನವಾಗಿದೆ.

ಕರಡಿ ಮರಿಗಳು ಏನೆಲ್ಲಾ ತಿನ್ನುತ್ತವೆ ಗೊತ್ತಾ..?
ಕರಡಿಗಳು ಸಾಮಾನ್ಯವಾಗಿ ಸಸ್ಯಾಹಾರಿಗಳೇ ಆಗಿರುತ್ತವೆ. ಆಯಾ ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತವೆ. ಕೆಲ ಸಂದರ್ಭಗಳಲ್ಲಿ ಅವು ಇತರೆ ಪ್ರಾಣಿಗಳನ್ನು ಭೇಟೆಯಾಡಿ ತಿನ್ನೂವುದು ಉಂಟು.
ಆದರೆ, ಆಡುಮಲ್ಲೇಶ್ವರ ಮೃಗಾಲಯದಲ್ಲಿ ಮರಿಗಳಿಗೆ ಜನ್ಮ ನೀಡಿರುವ ಕರಡಿ ಹಾಗೂ ಅದರ ಎರಡೂ ಮರಿಗಳಿಗೆ ಮೃಗಾಲಯದ ಸಿಬ್ಬಂದಿಗಳು ಪ್ರತಿ ದಿನ ಹಣ್ಣು, ಹಾಲು, ಜೇನು, ಸೇರಿಸಿದ ಆಹಾರ ನೀಡುತ್ತಿದ್ದಾರೆ.
ಮರಿಗಳಿರುವುದರಿಂದ ತುಸು ಹೆಚ್ಚು ಹಾಲು ನೀಡಲಾಗುತ್ತಿದೆ. ಹಾಲು, ಹಣ್ಣು ಹಾಗೂ ಜೇನು ಸೇರಿಸಿದ ಫ್ರೂಟ್ ಸಲಾಡ್ ಕರಡಿ ಮರಿಗಳಿಗೆ ಇಷ್ಟವಂತೆ. ಇಲ್ಲಿನ ಅಧಿಕಾರಿಗಳು ದಿನದ ಮೂರು ಹೊತ್ತು ಸೇಬು, ಬಾಳೆಹಣ್ಣು, ಪೇರಳೆ ಸೇರಿದಂತೆ ಸಿಹಿಯಾದ ಹಣ್ಣುಗಳಿಂದ ತಯಾರಿಸಿದ ಸಲಾಡ್ ಜೊತೆಗೆ ಗಂಜಿ ನೀಡುತ್ತಿದ್ದಾರೆ.
ದ್ರಾಕ್ಷಿ, ಕಿತ್ತಾಳೆ, ಮೋಸಂಬಿಯಂತಹ ಹಣ್ಣುಗಳನ್ನು ಕರಡಿಗಳು ತಿನ್ನುವುದಿಲ್ಲವಂತೆ. ಹುಳಿಯಾದ ಹಣ್ಣುಗಳನ್ನು ಕರಡಿಗಳು ಹೆಚ್ಚು ಇಷ್ಟಪಡುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಮಾರ್ಚ್ 24 ರಂದು ಕರಡಿ ಮರಿಗಳಿಗೆ ಜನ್ಮ ನೀಡಿತ್ತು. 6 ತಿಂಗಳ ಕಾಲ ಸುರಕ್ಷಿತವಾಗಿಡಲಾಗಿತ್ತು. ಈಗ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಹೊರಗೆ ಬಿಟ್ಟಿದ್ದೇವೆ. ಪ್ರವಾಸಿಗರು ನೋಡಬಹುದಾಗಿದೆ. ಔಷಧೋಪಚಾರ ಹಾಗೂ ದಾಖಲೆಗಾಗಿ ಒಂದೆರಡು ದಿನಗಳಲ್ಲಿ ಈ ಕರಡಿಗಳಿಗೆ ಹೆಸರುಗಳನ್ನು ಇಡಲಾಗುವುದು.
| ಎನ್.ವಾಸುದೇವ, ಆಡುಮಲ್ಲೇಶ್ವರ ಮೃಗಾಲಯ ಆರ್‍ಎಫ್‍ಓ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
