ಮೊಳಕಾಳ್ಮೂರು
ಜನರ ನೆಮ್ಮದಿ ಕೆಡಿಸಿದ ಚಿರತೆ | ಆಹಾರಕ್ಕೆ ಕುರಿಹಟ್ಟಿಗಳ ಮೇಲೆ ದಾಳಿ

CHITRADURGA NEWS | 15 JANUARY 2024
ಚಿತ್ರದುರ್ಗ (CHITRADURGA): ಗಡಿ ತಾಲ್ಲೂಕು ಮೊಳಕಾಲ್ಮುರಿನಲ್ಲಿ ಚಿರತೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದರಿಂದ ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ತಾಲ್ಲೂಕಿನ ದೇವಸಮುದ್ರ ಬಳಿ ಕೆಲ ದಿನಗಳಿಂದ 2 ಚಿರತೆಗಳು ಕಾಣಿಸಿಕೊಂಡಿವೆ. ಗ್ರಾಮದ ಪರಮೇಶ್ವರಪ್ಪ ತಾತಾ ಮಠದ ಮುಂಭಾಗದಲ್ಲಿರುವ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿವೆ. 15 ಕ್ಕೂ ಹೆಚ್ಚು ದಿನಗಳಿಂದ ಆಗಾಗ ಬೆಟ್ಟದ ತುದಿಯಲ್ಲಿ ಕಾಣಿಕೊಳ್ಳುತ್ತಿವೆ. ಇದರಿಂದ ಕುರಿಗಾಹಿಗಳು, ಜಾನುವಾರುಗಳನ್ನು ಮೇಯಿಸುವವರು ಭಯದಲ್ಲಿ ದಿನ ದೂಡುತ್ತಿದ್ದಾರೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ದೇಗುಲಗಳ ಸ್ವಚ್ಛತೆ ಮಾಡಿದ ಬಿಜೆಪಿ ಕಾರ್ಯಕರ್ತರು

ಈಚೆಗೆ ಕುರಿಗಾಹಿಗಳಾದ ಲಕ್ಷ್ಮಣ, ಭೈರಪ್ಪ ಅವರಿಗೆ ಸೇರಿದ ತಲಾ ಒಂದು ಮೇಕೆ, ಬಸಣ್ಣ ಅವರಿಗೆ ಸೇರಿದ ಒಂದು ಕುರಿ, ಇವರ ಕುರಿಹಟ್ಟಿಗಳ 2 ನಾಯಿಗಳು ಚಿರತೆ ದಾಳಿಗೆ ಬಲಿಯಾಗಿದ್ದವು. ಆಹಾರಕ್ಕಾಗಿ ಬೆಟ್ಟದಿಂದ ಯಾವ ಕ್ಷಣಕ್ಕೆ ಚಿರತೆಗಳು ಬರುತ್ತವೆಯೋ ಎಂಬ ಭಯ ಕೃಷಿ ಕಾರ್ಮಿಕರು, ಜಾನುವಾರು ಪೋಷಕರಲ್ಲಿ ಕಾಡುತ್ತಿದೆ.
ದೇವಸಮುದ್ರದ ಅರಣ್ಯ ಇಲಾಖೆ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ. ಸ್ಥಳಕ್ಕೆ ಸಿಬ್ಬಂದಿ ಕಳಿಸಿ ಕೊಡಲಾಗಿತ್ತು. ಚಿರತೆ ಚಲನವಲನಗಳ ಬಗ್ಗೆ ಸಳೀಯರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, 2 ದಿನಗಳಲ್ಲಿ ಬೋನ್ ಇಟ್ಟು ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ತಾಲ್ಲೂಕು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಡಿ.ಎಲ್. ಶ್ರೀಹರ್ಷ.
ಚಿರತೆಗಳನ್ನು ಬೋನ್ ಇಟ್ಟು ಹಿಡಿದು ಭಯದಿಂದ ಜನರನ್ನು ದೂರ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.
