ಚಿತ್ರದುರ್ಗ ನ್ಯೂಸ್.ಕಾಂ: ನಗರದ ಅಧಿದೇವತೆ, ದುರ್ಗದ ನವದುರ್ಗೆಯರಲ್ಲಿ ಹಿರಿಯಕ್ಕನಾದ ಶ್ರೀ ಏಕನಾಥೇಶ್ವರಿ ತಾಯಿಗೆ ಬಂಗಾರದ ಮುಖಪದ್ಮ ಲೋಕಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಬುಧವಾರ ನಗರದ ರಾಜ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು.
ನಗರದ ಕೋಟೆ ರಸ್ತೆಯ ಶ್ರೀ ಏಕನಾಥೇಶ್ವರಿ ಪಾದಗುಡಿಯಲ್ಲಿ ವಿವಿಧ ಪುಷ್ಪಗಳಿಂದ ಮನಮೋಹಕವಾಗಿ ಅಲಂಕಾರಗೊಂಡಿದ್ದ ದೇವಿಯ ಉತ್ಸವ ಮೂರ್ತಿಯನ್ನು ಟ್ರ್ಯಾಕ್ಟರ್‍ನಲ್ಲಿ ಕೂರಿಸುತ್ತಿದ್ದಂತೆ ನೆರೆದಿದ್ದ ಅಪಾರ ಭಕ್ತ ಸಮೂಹ ಉದೋ ಉದೋ ಎಂಬ ಉದ್ಘಾರ ಘೋಷಗಳು ಮೊಳಗಿದವು. ಕಹಳೆ, ಉರುಮೆ, ಕರಡಿ ಚಮ್ಮಾಳ, ತಮಟೆ, ಡೊಳ್ಳು ಕುಣಿತ ಸೇರಿದಂತೆ ನಾನಾ ಜನಪದ ಕಲಾ ಮೇಳಗಳು ಮೇಳೈಸಿದವು.
ಕೋಟೆ ರಸ್ತೆಯ ಶ್ರೀ ಏಕನಾಥೇಶ್ವರಿ ಪಾದಗುಡಿ ಮುಂಭಾಗದಿಂದ ಬುಧವಾರ ಬೆಳಗ್ಗೆ ಹೊರಟ ಮೆರವಣಿಗೆ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನ ಮುಂಭಾಗ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಕರುವಿನಕಟ್ಟೆ ವೃತ್ತದ ಮಾರ್ಗವಾಗಿ ಸಂಜೆ ಪುನಃ ಪಾದಗುಡಿಗೆ ತಲುಪಿತು.
ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಸಾರ್ವಜನಿಕರು ತಮ್ಮ ಮನೆಯ ಮುಂಭಾಗ ನೀರು ಹಾಕಿ ರಂಗೋಲಿ ಬಿಡಿಸಿ ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಹೂವು, ಹಣ್ಣು, ಕಾಯಿ ಅರ್ಪಿಸಿ, ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಶ್ರೀ ಏಕನಾಥೇಶ್ವರಿ ಬಂಗಾರದ ಮುಖಪದ್ಮ ಲೋಕಾರ್ಪಣೆಗೆ ಕ್ಷಣಗಣನೆ
ಸುಮಾರು 2-3 ಶತಮಾನಗಳಷ್ಟು ಹಳೆಯದಾದ ದೇವಿಯ ಮುಖ ಪದ್ಮ ಮುಕ್ಕಾಗಿತ್ತು. ಇದನ್ನು ಮನಗಂಡು ಭಕ್ತ ಸಮೂಹ ದೇಣಿಗೆ ರೂಪದಲ್ಲಿ ನೀಡಿದ್ದ ಬಂಗಾರದಿಂದ ಹಾಗೂ ಅಮ್ಮನವರ ಹಳೆಯ ಉತ್ಸವ ಮೂರ್ತಿಯ ಮುಖ ಪದ್ಮವನ್ನು ಬಂಗಾರದ ಲೇಪನದ ಆಕಾರದಲ್ಲಿ ರೂಪುಗೊಳಿಸಲಾಗಿದೆ. ಅಲ್ಲದೇ ದೇವಿಗೆ ವಿಭೂತಿ ರೂಪದಲ್ಲಿ ವಜ್ರದ ಹಣೆ ಪಟ್ಟಿ ಹಾಗೂ ಬಂಗಾರದ ತಾಳಿ ಕೂಡ ಹಾಕಲಾಗಿದೆ. ಇತಿಹಾಸ ಉಳಿಸುವ ನಿಟ್ಟಿನಲ್ಲಿ ಭಕ್ತರ ಸಹಕಾರದಿಂದ ಕಳೆದ ಮೂರು ದಿನಗಳಿಂದ ನಾನಾ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗಿದೆ ಎಂದು ಶ್ರೀ ಏಕನಾಥೇಶ್ವರಿ ದೇವಸ್ಥಾನ ಸಮಿತಿ ನಿರ್ದೇಶಕ ಎಸ್‍ಬಿಎಲ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕ ರಾಮಪ್ಪ ಸೇರಿದಂತೆ ಇತರೆ ನಿರ್ದೇಶಕರು, ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಮಾರ್ಗಮಧ್ಯೆ ದೇವಿಯ ದರ್ಶನ ಪಡೆದ ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್ ರವರನ್ನು ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು.
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ.
https://chat.whatsapp.com/EQUQpKalYFT1fVcJDTDjCk)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
