CHITRADURGA NEWS | 01 AUGUST 2026
ಚಿತ್ರದುರ್ಗ: ಕುಡಿಯಲು ಬಳಕೆಗಷ್ಟೇ ಜಲಾಶಯಗಳಲ್ಲಿರುವ ನೀರು ಮೀಸಲೆಂಬ ಸರ್ಕಾರದ ಆದೇಶ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಮುಖಂಡರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಆಗಸ್ಟ್ 6 ರಿಂದ ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ | ಎಂ.ಶಂಕರಮೂರ್ತಿ
ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಹಿರಿಯೂರು ತಾಲ್ಲೂಕಿನ ರೈತ ಮುಖಂಡರು, ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಅವರು ನೀರು ಹರಿಸುವ ಅಧಿಕಾರ ನಮಗಿಲ್ಲವೆಂದು ತಿಳಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಲಿಖಿತವಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪತ್ರ ಬರೆದಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಂದೀಪ್ ಗುಂಡಾರ್ಪಿ ಮಾತನಾಡಿ, ಸಕಾಲಕ್ಕೆ ಮಳೆಯಾಗದೆ ಅಂತರ್ಜಲ ಕುಸಿದು ಕೊಳವೆಬಾವಿಗಳಲ್ಲಿ ನೀರು ಬತ್ತಿರುವುದರಿಂದ ಈಗಾಗಲೇ ಎಡ-ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ತೆಂಗು, ಅಡಿಕೆ, ಬಾಳೆ, ಪಪ್ಪಾಯಿ, ದಾಳಿಂಬೆ ಇತ್ಯಾದಿ ತೋಟಗಾರಿಕೆ ಮತ್ತು ಅಲ್ಪಾವಧಿ ಬೆಳೆಗಳು ಒಣಗುತ್ತಿವೆ ಆದ್ದರಿಂದ ನೀರು ಹರಿಸುವಂತೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಅವರು ನೀರು ಹರಿಸುವುದರಿಂದ ಕುಡಿಯುವ ನೀರು ಸೇರಿ ಇತರೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಆದರೆ, ರಾಜ್ಯ ಸರ್ಕಾರ ಜಲಾಶಯದ ನೀರು ಕುಡಿಯುವ ನೀರಿಗೆ ಸೀಮಿತವಾಗಿಡಬೇಕೆಂಬ ಆದೇಶ ಇರುವುದರಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಇದನ್ನೂ ಓದಿ: ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ಅರ್ಜಿ ಅಹ್ವಾನ
ಹಿರಿಯೂರು ತಾಲ್ಲೂಕಲ್ಲಿ ವಿವಿ ಸಾಗರ ಜಲಾಶಯ, ಗಾಯತ್ರಿ ಜಲಾಶಯ ಇದೆ. ಆದರೆ, ದೀಪದ ಕೆಳಗೆ ಕತ್ತಲೆಂಬ ರೀತಿ ಇಲ್ಲಿನ ಅನ್ನದಾತರಿಗೆ ನೀರು ಮರೀಚಿಕೆ ಅಗಿದೆ ವಿವಿ ಸಾಗರದ ತಪ್ಪಲಲ್ಲಿರುವ ವಿವಿ ಪುರ, ಭರಮಗಿರಿ ಸೇರಿ ಅನೇಕ ಗ್ರಾಮಗಳ ಜನರು ಫ್ಲೋರೈಡ್ ನೀರು ಕುಡಿಯುತ್ತಿದ್ದಾರೆ. ಜೊತೆಗೆ ಎಡ-ಬಲ ದಂಡೆ ನಾಲೆಗಳಲ್ಲಿ ಬೆಳೆಗಳು ಒಣಗುತ್ತಿವೆ. ಮುಖ್ಯವಾಗಿ ಬರಗಾಲ ಎದುರಾಗಿದೆ. ಈ ವೇಳೆ ಜಿಲ್ಲಾಡಳಿತ ತಕ್ಷಣವೇ ನೆರವಿಗೆ ಬರಬೇಕು. ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿನ ಬೆಳೆ ಬದುಕಲು ನೀರು ಹರಿಸಬೇಕೆಂದು ಕೋರಿದರು.
ರೈತಸಂಘದ ತಾಲ್ಲೂಕು ಗೌರವಾಧ್ಯಕ್ಷ ಆಲೂರು ಸಿ.ಸಿದ್ದರಾಮಣ್ಣ ಮಾತನಾಡಿ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹರಿಸಲಾಗಿದೆ. ಅದೇ ರೀತಿ ವಿವಿ ಸಾಗರ ಜಲಾಶಯದಿಂದ ನೀರು ಹರಿಸಬೇಕು ಸಣ್ಣ ನೀರಾವರಿ ಇಲಾಖೆ ಕೂಡ ನೀರು ಹರಿಸುವುದರಿಂದ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲವೆಂದು ಸ್ಪಷ್ಟಪಡಿಸಿದೆ. ಆದ್ದರಿಂದ ವಿಳಂಬ ಮಾಡದೆ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನೂರಾರು ಎಕರೆ ತೋಟಗಾರಿಕೆ ಬೆಳೆ ನಾಶಗೊಂಡು ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಅತಂಕ ವ್ಯಕ್ತಪಡಿಸಿದರು.
ಮುಖಂಡ ಹೊರಕೇರಪ್ಪ ಮಾತನಾಡಿ, ಹಿರಿಯೂರಿನಲ್ಲಿ ಅನ್ನದಾತರು ನಿರಂತರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ, ಅಧಿಕಾರಿಗಳು ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರೈತರ ನೆರವಿಗೆ ಬರಬೇಕು. ರಾಜ್ಯದ ಆದೇಶ ಸ್ಥಳೀಯ ಮಟ್ಟದಲ್ಲಿನ ಪರಿಸ್ಥಿತಿ ಅವಲೋಕಿಸಿ ಸಡಿಲಗೊಳಿಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಈ ಮೂಲಕ ತೋಟಗಾರಿಕೆ ಹಾಗೂ ಇತರೆ ಬೆಳೆ ಉಳಿಸಲು ಮುಂದಾಗಕೆಂದು ಕೋರಿದರು.
ಇದನ್ನೂ ಓದಿ: ಮೀನುಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಅಹ್ವಾನ
ಸಣ್ಣ ನೀರಾವರಿ ಇಲಾಖೆ ಇಎ ಕಿರಣ್ಕುಮಾರ್, ಮುಖಂಡರಾದ ಚೇತನ್, ವೀರವ್ವನಾಗ್ತಿಹಳ್ಳಿ ಗೌಡ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

