
CHITRAUDRGA NEWS | 23 NOVEMBER 2025
ಚಿತ್ರದುರ್ಗ: ಕನ್ನಡದ ಅಸ್ಮಿತೆಗೆ ಭ್ರಮನಿರಸನವಾಗದಂತೆ ಯುವಜನತೆ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಹೇಳಿದ್ದಾರೆ.
ಇದನ್ನೂ ಓದಿ: ನಾಯಕ ಸಮುದಾಯ ವೋಟ್ ಬ್ಯಾಂಕ್ ಆಗಿದೆ | ವಾಲ್ಮೀಕಿ ಶ್ರೀ ಅಸಮಾಧಾನ
ನಗರದ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಹಾಡುಗಳ ಗೀತ ಗಾಯನ ಮತ್ತು ಚಿತ್ರದುರ್ಗ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ.
ಕುವೆಂಪುರವರು ಬರೆದ ನಾಡಗೀತೆಯಲ್ಲಿ ಕನ್ನಡದ ವಿಶಾಲತೆ ಮತ್ತು ಸಮೃದ್ಧತೆಯನ್ನು ವಿಶೇಷವಾಗಿ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮ ಮತ್ತು ಭಾಷೆಗಳ ನಡುವಿನ ಗೊಂದಲಗಳು ಹೆಚ್ಚಾಗಿವೆ.
2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಮಸ್ಯೆಗಳ ನಿವಾರಣೆಗೆ ಇಂದಿನ ಪೀಳಿಗೆಯ ಯುವಕರು ಕನ್ನಡದ ಬಳಕೆಯನ್ನು ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ.
ಇದನ್ನೂ ಓದಿ: ಒನಕೆ ಓಬವ್ವನಂತಹ ಧಿಟ್ಟ ಮಹಿಳೆ ಸಮಾಜಕ್ಕೆ ಅಗತ್ಯ | ಡಾ.ಎಂ.ಚಂದ್ರಪ್ಪ
ಸಾಮಾಜಿಕ ಜಾಲತಾಣಗಳಿಂದ ವಿಶ್ವದ ಗಾತ್ರ ಕಿರಿದಾಗುತ್ತಿದೆ. ಆದರೆ ಸ್ಥಳೀಯವಾಗಿರುವ ಪ್ರತಿಭೆ, ಸಂಸ್ಕೃತಿ, ಕಲೆಗಳನ್ನು ಕಡೆಗಣಿಸಲಾಗುತ್ತಿದೆ. ಕೋಗಿಲೆ ನಮಗೆ ಹೆಮ್ಮೆಯ ಪಕ್ಷಿಯಾಗಿದೆ. ಆದರೆ ಸ್ಥಳೀಯವಾಗಿರುವ ಪಕ್ಷಿಗಳನ್ನು ನಿರ್ಲಕ್ಷಿಸಲಾಗುತ್ತಿದೆ.
ನಮ್ಮ ದೃಷ್ಟಿ ಕೇವಲ ಗಂಧದ ಮರದ ಕಡೆಗೆ ಇದೆ. ಆದರೆ ಸ್ಥಳೀಯವಾಗಿರುವ ಗಿಡ, ಮರಗಳನ್ನು ಸಂರಕ್ಷಿಸುವುದಕ್ಕೆ ಗಮನ ಹರಿಸಬೇಕಾಗಿದೆ. ವಿಶಾಲ ದೃಷ್ಟಿಯ ನಡುವೆ ನಮ್ಮ ಸುತ್ತಲಿನ ಮತ್ತು ಹತ್ತಿರದ ಪ್ರಪಂಚವನ್ನು ಮರೆಯಬಾರದು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಗೀತೆಗಳು ಸಾಹಿತ್ಯದ ವಿಶೇಷ ಪರಂಪರೆಯನ್ನು ಹೊಂದಿವೆ. ಹಿಂದಿನ ತಲೆಮಾರಿನ ಚಿತ್ರಗೀತೆಗಳು ದೃಶ್ಯಕಾವ್ಯಗಳಾಗಿವೆ. ಗಾಯಕರಿಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಹಾಗೂ ಮಧುರವಾದ ಧ್ವನಿ ಅಗತ್ಯವಾಗಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಪ್ರಮಾಣದ ಕಾರ್ಯಕ್ರಮ ಕೈಗೊಂಡರೆ ಸಹಕಾರ ನೀಡುವುದಾಗಿ ತಿಳಿಸಿದರು.
ಡಿಎಆರ್ ಸಿಬ್ಬಂದಿ ಮನು, ನಿವೃತ್ತ ಎಸ್ಐ ನರೇಂದ್ರಬಾಬು ಮತ್ತು ಪ್ರಾಣೇಶ್, ವಿಶ್ವನಾಥ್ ಸೇರಿದಂತೆ 45 ಕ್ಕೂ ಹೆಚ್ಚು ಗಾಯಕರು ಕನ್ನಡ ನಾಡು, ನುಡಿಯ ಹಾಡುಗಳನ್ನು ಹಾಡಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್ , ಜಿಲ್ಲಾ ಪದಾಧಿಕಾರಿಗಳಾದ ಶ್ರೀನಿವಾಸ ಮಳಲಿ, ಸಿ.ಲೋಕೇಶ್, ಕೆ.ಜಿ.ಅಜಯ್ ಕುಮಾರ್, ವಿಶ್ವನಾಥ್, ತಾಲ್ಲೂಕು ಕಾರ್ಯದರ್ಶಿ ಎಂ.ಕೆ.ಹರೀಶ್ ಮತ್ತಿತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
