
CHITRADURGA NEWS | 22 MARCH 2024
ಚಿತ್ರದುರ್ಗ: ಭೂಮಿಯ ಮೇಲೆ ವಾಸಿಸುವ ಮನುಷ್ಯ ಸೇರಿ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಜೀವನಾಧಾರವಾಗಿದೆ. ಅಮೂಲ್ಯವಾಗಿರುವ ಜಲಸಂಪತ್ತನ್ನು ಉಳಿಸಿಕೊಳ್ಳುವ ಹಾಗೂ ಮಿತವಾಗಿ ಬಳಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಗೀತಾ ಕೆ.ಬಿ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಗರಸಭೆ, ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ನೀರು ಒಂದು ಸಂಪನ್ಮೂಲ ಮಾತ್ರವಲ್ಲ ಅದು ಇಡೀ ಜೀವಸಂಕುಲದ ಜೀವಾಮೃತ ಎಂದರು.
ನೀರು ಸಕಲ ಜೀವಿಗಳ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಜಾಗತಿಕ ಹವಾಮಾನ ಬದಲಾವಣೆ, ಕೈಗಾರಿಕೀಕರಣದಿಂದಾಗಿ ಕುಡಿಯುವ ನೀರಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ನೀರಿನ ಪ್ರಾಮುಖ್ಯತೆ ಹಾಗೂ ಮಿತಬಳಕೆಯ ಕುರಿತು ಎಲ್ಲರಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಭೂಮಿಯ ಮೇಲೆ ವಾಸಿಸುವ ಮನುಷ್ಯ ಸೇರಿ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಜೀವನಾಧಾರವಾಗಿದೆ. ಅಮೂಲ್ಯವಾಗಿರುವ ಜಲಸಂಪತ್ತನ್ನು ಉಳಿಸಿಕೊಳ್ಳುವ ಹಾಗೂ ಮಿತವಾಗಿ ಬಳಸುವ ಅಗತ್ಯವಿದೆ. ಮಳೆಗಾಲದಲ್ಲಿ ಬರುವ ಮಳೆಯ ಪ್ರತಿಹನಿ ನೀರೂ ಕೂಡ ವ್ಯರ್ಥವಾಗದಂತೆ, ಸಮುದ್ರಕ್ಕೆ ಸೇರದಂತೆ ನೋಡಿಕೊಳ್ಳುವ, ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ನೆಲದಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಿಕೊಳ್ಳುವ ಅನಿವಾರ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.
ಕ್ಲಿಕ್ ಮಾಡಿ ಓದಿ: ಒಂದೇ ದಿನಕ್ಕೆ ಲಕ್ಷಾಂತರ ಹಣ ಸೀಜ್ | ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಕಣ್ಗಾವಲು
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ, ಮಳೆಕೊಯ್ಲು ಮುಂತಾದ ಕಾರ್ಯಗಳು ಪ್ರತಿ ಮನೆಯಿಂದಲೂ ಆರಂಭವಾಗಬೇಕು. ಈ ವಿಷಯವನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದ ಅವರು, ಭೂಮಿಯ ಒಡಲು ನಿರಂತರ ಬರಿದಾಗುತ್ತಿದ್ದರೆ ಮುಂದೊಂದು ದಿನ ಇಡೀ ವಿಶ್ವವೇ ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.
ಪ್ರಸ್ತುತ ಸಂದರ್ಭದಲ್ಲಿ ವಿಶ್ವದ ಅನೇಕ ಮಹಾನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು, ಅಲ್ಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಕಣ್ಣೆದುರಿಗೆ ಇವೆ. ಆದ್ದರಿಂದ ಜೀವಜಲಕ್ಕೆ ಕಂಟಕ ಎದುರಾಗದಂತೆ ಅಗತ್ಯ ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು. ನೀರನ್ನು ಸಂರಕ್ಷಿಸುವ ವಿಷಯದಲ್ಲಿ ಸುಸ್ಥಿರ ಗುರಿ ಸಾಧಿಸಲು ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಸರ್ಕಾರದೊಂದಿಗೆ ಕೈಜೋಡಿಸಬೇಕು. ಇದರೊಂದಿಗೆ ಪರಿಸರ ಹಾನಿಯನ್ನು ತಡೆಯುವಲ್ಲಿ ವಿಶೇಷ ಗಮನಹರಿಸಬೇಕು. ಗಿಡ-ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಅವರು ಕರೆ ನೀಡಿದರು.
ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಆರಂಭಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂತಿಮವಾಗಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಪನ್ನಗೊಂಡಿತು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಪೌರಾಯುಕ್ತೆ ಶ್ರೀಮತಿ ಎಂ.ರೇಣುಕಾ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
