
CHITRADURGA NEWS | 27 AUGUST 2026
ಚಿತ್ರದುರ್ಗ: ಮಹಿಳೆಯರು ಕುಟುಂಬ ಹಾಗೂ ಮಕ್ಕಳಿಗೆ ಸ್ಪೂರ್ತಿಯಾಗಬೇಕು. ತಾಯಂದಿರ ನಡವಳಿಕೆಯನ್ನು ನೋಡಿ ಮಕ್ಕಳು ಬೆಳೆಯುವುದರಿಂದ ಮನೆಯಲ್ಲಿ ಶ್ರದ್ಧೆ, ಶಿಸ್ತು ಹಾಗೂ ಉತ್ತಮ ವಾತಾವರಣ ನಿರ್ಮಿಸುವುದು ಅಗತ್ಯ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ರುಕ್ಕಮ್ಮ.ಬಿ ಹೇಳಿದರು.
ಇದನ್ನೂ ಓದಿ: ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ | ಎಸ್.ಜಿ.ಸಿದ್ದರಾಮಯ್ಯ
ನಗರದ ಕರುವಿನಕಟ್ಟೆ ವೃತ್ತದಲ್ಲಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಠದ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಬುದ್ಧಿವಂತಿಕೆ, ಶ್ರಮ ಹಾಗೂ ಛಲದಿಂದ ಉನ್ನತ ಮಟ್ಟಕ್ಕೆ ಬೆಳೆಯಬಹುದು. ಮಕ್ಕಳಿಗೆ ನೀಡಬಹುದಾದ ನಿಜವಾದ ಆಸ್ತಿ ಶಿಕ್ಷಣ. ಆಸ್ತಿ-ಪಾಸ್ತಿಗಳನ್ನು ಕಳೆದುಕೊಳ್ಳಬಹುದು, ಆದರೆ ವಿದ್ಯೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ಮೊಬೈಲ್ ಹಾಗೂ ಟಿ.ವಿ. ವೀಕ್ಷಣೆಯನ್ನು ಕಡಿಮೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಹಿ ಮಾಡುವುದನ್ನು ಕಲಿಯುವುದರ ಜತೆಗೆ ಸ್ವಂತ ದುಡಿಮೆಯಿಂದ ಸ್ವಾವಲಂಬನೆ ಸಾಧಿಸುತ್ತಿರುವುದು ಶ್ಲಾಘನೀಯ. ಗೃಹಹಿಂಸೆ ಸೇರಿದಂತೆ ಯಾವುದೇ ತೊಂದರೆ ಎದುರಾದರೆ ಮಹಿಳೆಯರು ಹೆದರದೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಪೊಲೀಸರು ಆರಂಭದಲ್ಲಿ ಕೌನ್ಸೆಲಿಂಗ್ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಾರೆ. ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸ್ ವಾಹನ ಸ್ಥಳಕ್ಕೆ ತಲುಪಲಿದೆ. ಕರೆ ಮಾಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಗೋಪೂಜೆ, ಧ್ವಜಪೂಜೆ ಮೂಲಕ ಚಾಲನೆ
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ವಿವಾಹ ಮಾಡುವುದು ಕಾನೂನುಬಾಹಿರ. ಬಾಲ್ಯವಿವಾಹ ನಡೆದರೆ ಪೋಕ್ಸೋ ಕಾಯ್ದೆಯಡಿ ಪೋಷಕರು ಸೇರಿದಂತೆ ವಿವಾಹಕ್ಕೆ ಸಹಕರಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಬಹುದು. ಅಪ್ರಾಪ್ತರಿಗೆ ವಾಹನ ನೀಡಬಾರದು ಹಾಗೂ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಮಾಜದಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಮಹಿಳೆಯರಿಗೆ ಸಂವಿಧಾನ ಹಲವು ಹಕ್ಕು ನೀಡಿದೆ
ಮಹಿಳೆಯರ ಹಕ್ಕು ಹಾಗೂ ಕಾನೂನು ಕುರಿತು ಎಸ್.ಜೆ.ಎಂ. ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಮನ ಎಸ್. ಅಂಗಡಿ ಉಪನ್ಯಾಸ ನೀಡಿದರು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಹಾಗೂ ಸಮಾನ ಅವಕಾಶಗಳು ಸೀಮಿತವಾಗಿದ್ದವು. ಸಂವಿಧಾನ ಜಾರಿಯಾದ ನಂತರ ಮಹಿಳೆಯರಿಗೆ ಸಮಾನತೆ, ಮತದಾನದ ಹಕ್ಕು, ಸ್ತ್ರೀ ಸ್ವಾತಂತ್ರ್ಯ, ಸಮಾನ ಕೆಲಸಕ್ಕೆ ಸಮಾನ ವೇತನ, ಹೋರಾಟದ ಹಕ್ಕು ಹಾಗೂ ರಕ್ಷಣೆಯ ಹಕ್ಕು ಸೇರಿದಂತೆ ಹಲವು ಹಕ್ಕುಗಳು ದೊರೆತಿವೆ ಎಂದು ಹೇಳಿದರು.
ಇದನ್ನೂ ಓದಿ: ಸೆ.2ರಂದು ಬಾಪೂಜಿ ಪ್ರಬಂಧ ಸ್ಪರ್ಧೆ | ವಿದ್ಯಾರ್ಥಿಗಳಿಗೆ ಸಿಇಒ ಡಾ.ಆಕಾಶ್ ಕರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮಗಳ ಮಹತ್ವ, ಉದ್ದೇಶ ಹಾಗೂ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಕೇಂದ್ರಗಳಲ್ಲಿ ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮಗಳ ಪ್ರಯೋಜನ ಹಾಗೂ ಸಂಸ್ಥೆಯ ಕಾರ್ಯವೈಖರಿ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ನ ಜಿಲ್ಲಾ ಅಧ್ಯಕ್ಷೆ ರೂಪ ಜನಾರ್ಧನ್ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಕಮಲಾಕ್ಷ, ಯೋಜನಾಧಿಕಾರಿ ರತ್ನ ಚಂದ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಜೃಂಭಣೆಯಿಂದ ನಡೆದ ಈದ್ ಮಿಲಾದ್ ಮೆರವಣಿಗೆ
ಕಾರ್ಯಕ್ರಮದಲ್ಲಿ ರಂಗೋಲಿ ಹಾಗೂ ಪುಷ್ಪಗುಚ್ಛ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರೇಣುಕಮ್ಮ ಪ್ರಾರ್ಥಿಸಿದರು. ಚಂದ್ರಹಾಸ್ ಸ್ವಾಗತಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

