
CHITRADURGA NEWS | 08 MAY 2024
ಚಿತ್ರದುರ್ಗ: ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ಮತ್ತೊಮ್ಮೆ ಎರಡನೇ ಕಂತಿನ ನೀರು ಹರಿಸಲು ವಾಣಿವಿಲಾಸ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಮೇ.10 ರಿಂದ 25 ದಿನಗಳ ಕಾಲ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ.
ಬರಗಾಲದ ಹಿನ್ನೆಲೆಯಲ್ಲಿ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ಅಚ್ಚುಕಟ್ಟು ಪ್ರದೇಶಕ್ಕೆ ಬರದಲ್ಲೂ ನೀರು ಹರಿಯುವ ಶುಭ ಸುದ್ದಿ ಇದಾಗಿದೆ.
ವಾಣಿವಿಲಾಸ ಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ 2023-24ನೇ ಸಾಲಿನಲ್ಲಿ ಅತೀ ಕಡಿಮೆ ಮಳೆಯಾಗಿರುವುದರಿಂದ, ರೈತರ ಜಮೀನುಗಳಿಗೆ ನೀರು ಹರಿಸುವುದು ಅವಶ್ಯವಿರುತ್ತದೆ. ಈ ಹಿನ್ನಲೆಯಲ್ಲಿ ವಾಣಿವಿಲಾಸ ಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶಕ್ಕೆ ಬೇಸಿಗೆ ಹಂಗಾಮಿಗೆ ಎರಡನೇ ಹಂತದ ನೀರು ಬಿಡುಗಡೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇದನ್ನೂ ಓದಿ: ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಬರಗಾಲ ಹಾಗೂ ಬೇಸಿಗೆಯ ಈ ಸಂದರ್ಭದಲ್ಲಿ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಮುತುವರ್ಜಿವಹಿಸಿ ನೀರು ಸದ್ಭಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡಬಾರದು. ಎಲ್ಲಿ ಅಗತ್ಯ ಹಾಗೂ ಅನಿವಾರ್ಯ ಇರುವ ಕಡೆ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೀಳು ಭೂಮಿಗೆ ಅನಾವಶ್ಯಕವಾಗಿ ನೀರು ಹರಿಸಬಾರದು. ಅನಾವಶ್ಯಕವಾಗಿ ನೀರು ವ್ಯರ್ಥ ಮಾಡುವುದು ಕಂಡು ಬಂದರೆ ನೀರು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಟ್ಯಾಂಕರ್ ಮೂಲಕ ವಾಣಿಜ್ಯ ಉದ್ದೇಶಕ್ಕಾಗಿ ನೀರು ಮಾರಾಟ ಮಾಡಬಾರದು. ಒಂದು ವೇಳೆ ವಾಣಿಜ್ಯ ಬಳಕೆಗಾಗಿ ನೀರು ಬಳಕೆ ಮಾಡುವುದು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನೀರು ಹರಿಸುವ ಮುನ್ನ ಅಚ್ಚುಕಟ್ಟು ಪ್ರದೇಶದಲ್ಲಿನ ಬೋರ್‍ವೆಲ್‍ಗಳಲ್ಲಿ ನೀರಿನ ಮಟ್ಟ ಹಾಗೂ ನೀರು ಹರಿಸಿದ ನಂತರದ ನೀರಿನ ಮಟ್ಟದ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಈಗ ಎಷ್ಟಿದೆ ವಿವಿ ಸಾಗರ ಜಲಾಶಯ ನೀರಿನ ಮಟ್ಟ:
ವಿವಿ ಸಾಗರ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮಥ್ರ್ಯವು 30.422 ಟಿಎಂಸಿಗಳಾಗಿದ್ದು, ಜಲಾಶಯದ ವ್ಯಾಪ್ತಿಯಲ್ಲಿ ಒಟ್ಟು 12135.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ.
ಇದನ್ನೂ ಓದಿ: ಆರ್ಭಟಿಸಿಕೊಂಡು ಬಂದ ಮಳೆರಾಯ | ಹಿರಿಯೂರಿನಲ್ಲಿ ಗಾಳಿ, ಮಳೆ, ಗುಡುಗು, ಸಿಡಿಲು
ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಬಾಳೆ 5557.00 ಹೆಕ್ಟೇರ್ ಆಗಿರುತ್ತದೆ. ಉಳಿದಂತೆ 6578.00 ಹೆಕ್ಟೇರ್ ಖುಷ್ಕಿ ಜಮೀನು ಇರುತ್ತದೆ.

ಮೇ 8ರಂದು ವಿವಿ ಸಾಗರ ಜಲಾಶಯದಲ್ಲಿ 112 ಅಡಿಗಳಷ್ಟಿದ್ದು, ಇದು 16.96 ಟಿಎಂಸಿಗಳಾಗುತ್ತದೆ. ಇದರಲ್ಲಿ 1.87 ಟಿಎಂಸಿ ಬಳಕೆಗೆ ಬಾರದ ಪ್ರಮಾಣವಾಗಿರುತ್ತದೆ ಹಾಗೂ ಬಳಕೆಗೆ ಬರುವ ನೀರಿನ ಪ್ರಮಾಣ 15.09 ಟಿಎಂಸಿ ಇರುತ್ತದೆ.
ಇದನ್ನೂ ಓದಿ: ಮುರುಘಾ ಮಠದಲ್ಲಿ ಎಸ್‍ಜೆಎಂ ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆ
ಹಿರಿಯೂರು ಚಿತ್ರದುರ್ಗ, ಚಳ್ಳಕೆರೆ, ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳ ಕುಡಿಯುವ ನೀರಿಗಾಗಿ ಒಟ್ಟು 0.2115 ಟಿಎಂಸಿ ಅವಶ್ಯಕವಾಗಿರುತ್ತದೆ.
ಹಾಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದಿಂದ ಮಳೆಗಾಲದ ಬೆಳೆ ಹಾಗೂ ತೋಟಗಾರಿಕೆ ಹದ ನೀರನ್ನು 30 ದಿನಕ್ಕೆ ಹರಿಸಲು ಸರಾಸರಿ ನೀರಿನ ಪ್ರಮಾಣ ಸುಮಾರು 1.40 ಟಿಎಂಸಿ ಅಗತ್ಯವಿದೆ.
ಇದನ್ನೂ ಓದಿ: ಇಂದು ಕೂಡಾ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
ಆವಿಯಾಗುವ ನೀರಿನ ಪ್ರಮಾಣ ಸುಮಾರು 0.516 ಟಿಎಂಸಿ, ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 2.127 ಟಿಎಂಸಿ, ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 14.83 ಟಿಎಂಸಿ (111.55 ಅಡಿಗಳು) ಇರಲಿದೆ.
ಮೇಲ್ಮಟ್ಟದ ಕಾಲುವೆ ಅಚ್ಚುಕಟ್ಟು ಪ್ರದೇಶದ 03 ಗ್ರಾಮಗಳು, ಬಲನಾಲ ಅಚ್ಚುಕಟ್ಟು ಪ್ರದೇಶದ 21 ಗ್ರಾಮಗಳು ಹಾಗೂ ಎಡನಾಲ ಅಚ್ಚುಕಟ್ಟು ಪ್ರದೇಶದ 18 ಗ್ರಾಮಗಳು ಹಾಗೂ ನಾಲೆಗಳಲ್ಲಿ ನೀರನ್ನು ಬಿಟ್ಟಾಗ ಹಿರಿಯೂರು ತಾಲ್ಲೂಕಿನ 38 ಗ್ರಾಮಗಳ ಅಂತರ್ಜಲ ಅಭಿವೃದ್ಧಿಯಾಗಿ ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನೂ ಸಹ ಸುಧಾರಿಸಬಹುದಾಗಿದೆ.
ಇದನ್ನೂ ಓದಿ: ಹೊಸದುರ್ಗ ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ರಥೋತ್ಸವ
ಸಭೆಯಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ವಿವಿ ಸಾಗರ ಉಪವಿಭಾಗ ಹಿರಿಯೂರು ಕಾರ್ಯಪಾಲಕ ಇಂಜಿನಿಯರ್ ಬಾರಿಕರ್ ಚಂದ್ರಪ್ಪ, ಸಹಾಯ ಕಾರ್ಯಪಾಲಕ ಇಂಜಿನಿಯರ್ ವಿಜಯಕುಮಾರ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮಂಜುನಾಥ್, ಶಿರಸ್ತೆದಾರ ಸಣ್ಣಪ್ಪ, ವಿವಿ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಸುಂದರೇಶ್, ಅಸಿಲ್ ಆಲಿ, ಅನಿಲ್ ಕುಮಾರ್, ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

