Connect with us

    ವಿವಿ ಸಾಗರಕ್ಕೆ ನೀರು | ದಾವಣಗೆರೆ ರೈತರ ನಿಲುವಿಗೆ ಹೋರಾಟ ಸಮಿತಿ ಗರಂ

    ಮುಖ್ಯ ಸುದ್ದಿ

    ವಿವಿ ಸಾಗರಕ್ಕೆ ನೀರು | ದಾವಣಗೆರೆ ರೈತರ ನಿಲುವಿಗೆ ಹೋರಾಟ ಸಮಿತಿ ಗರಂ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 JANUARY 2025

    ಚಿತ್ರದುರ್ಗ: ಭಾರತೀಯ ರೈತ ಒಕ್ಕೂಟದ ದಾವಣಗೆರೆ ಜಿಲ್ಲೆ ಪದಾಧಿಕಾರಿಗಳು ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

    ರಾಜಕೀಯ ಹೇಳಿಕೆಗಳ ನೀಡಿ ರೈತರ ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸ ಯಾರೂ ಮಾಡಬಾರದೆಂದು ಸಮಿತಿ ವಿನಂತಿಸುತ್ತದೆ.

    Also Read: ವಿವಿ ಸಾಗರ ಕೋಡಿ ಬಿದ್ದರೂ ಭದ್ರಾ ನೀರು ಹರಿಸುವುದೇಕೆ | ದಾವಣಗೆರೆ ರೈತರ ಅಸಮಧಾನ

    ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಭದ್ರಾ ಜಲಾಶಯದಲ್ಲಿ ನಮ್ಮ ಪಾಲಿನ ನೀರು ಪಡೆಯಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದಿದ್ದಾರೆ

    ಭದ್ರಾ ಮತ್ತು ತುಂಗಾ ನದಿಯಲ್ಲಿ ಬಯಲು ಸೀಮೆ ಪ್ರದೇಶಗಳಿಗೆ 29.90 ಟಿಎಂಸಿ ನೀರು ಹಂಚಿಕೆಯಾಗಿ ಎರಡು ದಶಕಗಳು ಕಳೆದಿವೆ. 17.4 ಟಿಎಂಸಿ ತುಂಗಾ ನದಿ ಹಾಗೂ 12.5 ಟಿಎಂಸಿ ಯಷ್ಟು ಭದ್ರಾ ನದಿಯಲ್ಲಿ ಪಾಲು ನೀಡಲಾಗಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಶೇ.50 ರಷ್ಟು ಪೂರ್ಣಗೊಂಡಿದೆ.

    ಇಂತಹ ಸಂದರ್ಭದಲ್ಲಿ ಖ್ಯಾತೆ ತೆಗೆಯುವುದು ಬಯಲು ಸೀಮೆ ರೈತರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಭದ್ರಾ ಮೇಲ್ದಂಡೆಯಡಿ ತುಂಗಾದಲ್ಲಿ ಅತಿಹೆಚ್ಚು ನೀರಿನ ಪಾಲು ಇದೆ. ಜಗಳೂರಿಗೂ ಯೋಜನೆಯಡಿ ನೀರು ಪೂರೈಕೆಯಾಗುತ್ತಿದ್ದು ದಾವಣಗೆರೆ ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆ ರೈತರ ಹೋರಾಟಕ್ಕೆ ದನಿ ಗೂಡಿಸಬೇಕೇ ವಿನಹ ಅಪಸ್ವರ ಎತ್ತಬಾರದು ಎಂದರು.

    Also Read: ಜಿಲ್ಲಾಸ್ಪತ್ರೆಯಲ್ಲಿ ಕಡ್ಡಾಯವಾಗಿ ರಸೀದಿ ಪಡೆಯಿರಿ | ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮನವಿ

      ಲಭ್ಯತೆ ಆಧಾರದ ಮೇಲೆ ಸರ್ಕಾರ ಬಯಲು ಸೀಮೆಗೆ ನದಿ ನೀರು ಹಂಚಿಕೆ ಮಾಡಿದೆ. ಕೃಷ್ಣಾ ಟ್ರಿಬ್ಯುನಲ್ ನಲ್ಲಿ 21.5 ಟಿಎಂಸಿ, ಗೋದಾವರಿ ಜಲ ಹಂಚಿಕೆಯಲ್ಲಿ 2.40 ಟಿಎಂಸಿ, ವಿಜಯನಗರ ಕಾಲುವೆ ಆಧುನೀಕರಣ ಸೇರಿದಂತೆ ಇತರೆ ಸಣ್ಣ ನೀರಾವರಿ ಯೋಜನೆಗಳಿಂದ ಲಭ್ಯವಾದ 6 ಟಿಎಂಸಿ ನೀರು ಸೇರಿದಂತೆ ಒಟ್ಟು 29.90 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕಾಯ್ದಿರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2.25 ಲಕ್ಷ ಹೆಕ್ಟೇರು ಪ್ರದೇಶಗಳಿಗೆ ನೀರುಣಿಸಲಾಗುತ್ತಿದೆ.

     ಭದ್ರಾ ಮೇಲ್ದಂಡೆ ಯೋಜನೆಯಡಿ ಲಭ್ಯವಾಗುವ ನೀರನ್ನ ಕೆರೆ ತುಂಬಿಸಲು, ಹಾಗೂ ಮೈ ಕ್ರೋ ಇರಿಗೇಷನ್ ಮೂಲಕ ರೈತರ ಜಮೀನುಗಳಿಗೆ ಹರಿಸಲಾಗುತ್ತಿದೆ. ಮೈಕ್ರೋ ಇರಿಗೇಶನ್ ಗೆ 21.90 ಟಿಎಂಸಿ, 367 ಕೆರೆ ತುಂಬಿಸಲು 6 ಟಿಎಂಸಿ, ವಾಣಿ ವಿಲಾಸ ಸಾಗರಕ್ಕೆ ಎರಡು ಟಿಎಂಸಿ ನೀರು ಮೀಸಲಿಡಲಾಗಿದೆ.

    ಯೋಜನೆಯಡಿ ಭತ್ತ ಬೆಳೆಯಲು ಜಮೀನುಗಳಲ್ಲಿ ಮನಸೋ ಇಚ್ಚೆ ನೀರು ನಿಲುಗಡೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಳ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಪ್ಲೋರೈಡ್ ನೀರು ಕುಡಿಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಜನರು ಶುದ್ದ ನೀರು ಕುಡಿಯಲು ಪೂರಕ ವಾತಾವರಣ ಸೃಷ್ಟಿಸಲಾಗುತ್ತಿದೆ.

    Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

    ವಿವಿ ಸಾಗರ ಜಲಾಶಯದಿಂದ ಈಗಾಗಲೇ ಹೊಳಲ್ಕೆರೆ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ತಾಲೂಕಿನ ಸೈನ್ಸ್ ಸಿಟಿಗೂ ನೀರು ಒಯ್ಯಲಾಗಿದೆ.ನೀರು ರಾಷ್ಟ್ರೀಯ ಆಸ್ತಿ ಎಂಬುದ ಎಲ್ಲರೂ ಅರಿಯುವುದು ಒಳಿತು ಎಂದು ಸಲಹೆ ಮಾಡಿದೆ.

     ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾತಿ ಹಾಗೂ ಕಾಮಗಾರಿ ಮುನ್ನಡೆಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲಕ್ಕೆ ನಿಂತಿವೆ.ಈ ವಿಚಾರದಲ್ಲಿ ರಾಜಕೀಯದ ಮಾತುಗಳು ಬೇಡ. ಆಯಾ ಸಂದರ್ಭದ ಅಧಿಕಾರದ ವೇಳೆ ಕಾಮಗಾರಿಗೆ ಅಗತ್ಯ ಹಣಕಾಸು ನೆರವು ನೀಡಿದ್ದಾರೆ.ಕಾಮಗಾರಿ ಶೇಕಡಾ 50ರಷ್ಡು ಪೂರ್ಣಗೊಂಡಿದ್ದು ಬೇಗನೆ ಪೂರ್ಣಗೊಳ್ಳಲು ಅನುದಾನದ ಅಗತ್ಯ ಇದೆ. ಕೇಂದ್ರ ಸರ್ಕಾರ ತನ್ನ ಬಜೆಟ್ ಘೋಷಿತ 5300 ಕೊಟಿ ರು ಕೊಡ್ತಿಲ್ಲ, ರಾಜ್ಯ ಸರ್ಕಾರ ಕೂಡಾ ಸೂಕ್ತವಾಗಿ ಸ್ಪಂದಿಸದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿ್ದೆ.

     ಭದ್ರಾ ಮೇಲ್ದಂಡೆ ಯಡಿ ಜಗಳೂರು ತಾಲೂಕಿಗೂ ನೀರುಣಿಸಲಾಗುತ್ತಿದೆ. ಜಗಳೂರು ದಾವಣಗೆರೆ ಜಿಲ್ಲೆಯಲ್ಲಿದೆ ಎಂಬ ಸಂಗತಿ ಅಲ್ಲಿನ ಹೋರಾಟಗಾರರಿಗೆ ಅರಿವಿದ್ದರೆ ಒಳಿತು. ಜಗಳೂರು ತಾಲೂಕಿನ ಕಾಮಗಾರಿ ಇದುವರೆಗೂ ಆರಂಭವಾಗಿಲ್ಲ. ಈ ಬಗ್ಗೆ ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಹೋರಾಟ ನಡೆಸಿ ತಮ್ಮ ಜಿಲ್ಲೆಯ ಬರಡು ಪ್ರದೇಶವಾದ ಜಗಳೂರು ತಾಲೂಕಿಗೆ ನ್ಯಾಯ ಸಲ್ಲಿಸಬೇಕಾಗಿದೆ. ಈ ವಿಚಾರದಲ್ಲಿ ದುರ್ಗದ ಹೋರಾಟಗಾರರ ಜೊತೆ ದನಿಗೂಡಿಸಲಿ ಎಂದು ಸಮಿತಿ ಮನವಿ ಮಾಡಿದೆ.

    Also Read: ನಟ ದರ್ಶನ್ ಕಡೆಯಿಂದ ನಯಾಪೈಸೆ ಪಡೆದಿಲ್ಲ | ರೇಣುಕಸ್ವಾಮಿ ಕುಟುಂಬ

    ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ತುಂಗಾದಿಂದ ನೀರು ಒಯ್ಯಲಿ ಎಂದಿದ್ದಾರೆ. ಭದ್ರಾ ಮೇಲ್ದಂಡೆಗೆ ತುಂಗಾದಿಂದಲೇ ಅತಿ ಹೆಚ್ಚು ನೀರಿನ ಪಾಲು ಇದೆ. ಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಅಲ್ಲಿರುವ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ರೈತ ಒಕ್ಕೂಟದ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ರೈತರು ಕೂಡಾ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರಲಿದ್ದಾರೆ ಎಂಬ ವಾಸ್ತವ ಅರಿಯಲಿ. ಈ ಬಗ್ಗೆ ಒಕ್ಕೂಟದ ಪದಾಧಿಕಾರಿಗಳಿಗೆ ಅವರರವರ ಮನೆ ದೇವರು ಸನ್ಮಾರ್ಗ ದಯಪಾಲಿಸಲಿ ಎಂದು ಸಮಿತಿ ಪ್ರಾರ್ಥಿಸಿದೆ.

     ನೀರಾವರಿ ಅನುಷ್ಟಾನ ಹೋರಾಟ ಸಮಿತಿಯ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜೆ.ಯಾದವರೆಡ್ಡಿ, ಕೆ.ಸಿ.ಹೊರಕೇರಪ್ಪ, ಹಂಪಯ್ಯನ ಮಾಳಿಗೆ ಧನಂಜಯ, ಆರ್.ಬಿ.ನಿಜಲಿಂಗಪ್ಪ, ಕಬ್ಬಿಗೆರೆ ನಾಗರಾಜ್, ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಮುಖಂಡರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಚಂದ್ರಶೇಖರ ನಾಯ್ಕ, ಬಾಗೇನಹಾಳು ಕೊಟ್ರಬಸಪ್ಪ, ಹಳಿಯೂರು ಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top