
CHITRADURGA NEWS | 05 SEPTEMBER 2026
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನಲ್ಲಿ ಶೇ.100ರಷ್ಟು ಸಾಲ ಮರುಪಾವತಿ ಹೊಂದಿರುವ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಮುಂದಿನ ದಿನಗಳಲ್ಲಿ ಮೊಳಕಾಲ್ಮೂರು ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ಐದು ತಾಲೂಕುಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಸಶಸ್ತ್ರ ಕಾನ್ಸ್ಟೇಬಲ್ ಪರೀಕ್ಷೆಗೆ ಕಟ್ಟುನಿಟ್ಟಿನ ಭದ್ರತೆ | ಅಕ್ರಮವೆಸಗಿದರೆ ಕಠಿಣ ಕ್ರಮ
ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ವರ್ಷದ ರಜತ ಮಹೋತ್ಸವದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2001ರಲ್ಲಿ ವೀರಶೈವ ಲಿಂಗಾಯತ ಸಮಾಜದ ಬಾಂಧವರ ಸಹಕಾರದೊಂದಿಗೆ 500 ಸದಸ್ಯರ ನೋಂದಣಿಯಿಂದ ಆರಂಭಗೊಂಡ ಸೊಸೈಟಿ, ಇಂದು 1,702 ಸದಸ್ಯರನ್ನು ಹೊಂದಿದೆ. ಸದಸ್ಯರು, ಗ್ರಾಹಕರು ಹಾಗೂ ಠೇವಣಿದಾರರು ಸೊಸೈಟಿಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸದಿಂದಾಗಿ ಸಂಸ್ಥೆ ಪ್ರಗತಿ ಸಾಧಿಸಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್ಗಳ ತೀವ್ರ ಪೈಪೋಟಿಯ ನಡುವೆಯೂ ಸ್ಥಳೀಯ ಜನರ ವಿಶ್ವಾಸವನ್ನು ಉಳಿಸಿಕೊಂಡು ಸೊಸೈಟಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರ ನಿಸ್ವಾರ್ಥ ಸೇವೆ, ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮ ಹಾಗೂ ಸದಸ್ಯರ ಸಹಕಾರದಿಂದ ಆರ್ಥಿಕ ವರ್ಷ 2025-26ರಲ್ಲಿ ಠೇವಣಿ, ಸಾಲ ಮತ್ತು ಮುಂಗಡಗಳಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
15.48 ಕೋಟಿ ರೂ. ಠೇವಣಿ
2026ರ ಮಾರ್ಚ್ 31ರ ವೇಳೆಗೆ ಸೊಸೈಟಿ 1,702 ಸದಸ್ಯರನ್ನು ಹೊಂದಿದ್ದು, ರೂ.83.78 ಲಕ್ಷ ಷೇರು ಬಂಡವಾಳ ಹಾಗೂ ರೂ.15.48 ಕೋಟಿ ಠೇವಣಿ ಹೊಂದಿದೆ. ಕಾಯ್ದಿಟ್ಟ ನಿಧಿ ಮತ್ತು ಇತರೆ ನಿಧಿಗಳು ರೂ.4.89 ಕೋಟಿ, ಹೂಡಿಕೆಗಳು ರೂ.8.62 ಕೋಟಿ, ದುಡಿಯುವ ಬಂಡವಾಳ ರೂ.23.98 ಕೋಟಿ ಹಾಗೂ ಸಾಲ ಮತ್ತು ಮುಂಗಡಗಳು ರೂ.14.05 ಕೋಟಿ ಇದೆ ಎಂದು ಶಿವಕುಮಾರ್ ವಿವರಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ KMERC ಅಡಿ ರೂ.3,574 ಕೋಟಿ ಅನುದಾನ ಅನುಮೋದನೆ | ಟಿ.ವೆಂಕಟೇಶ್
2025-26ನೇ ಸಾಲಿನಲ್ಲಿ ಸೊಸೈಟಿ ರೂ.95.96 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲಾಗುವುದು. ಮರಣೋತ್ತರ ನಿಧಿಯನ್ನು ರೂ.5 ಸಾವಿರದಿಂದ ರೂ.10 ಸಾವಿರಕ್ಕೆ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರವನ್ನು ರೂ.1 ಸಾವಿರದಿಂದ ರೂ.2 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.
ಸೊಸೈಟಿಯ 1,702 ಸದಸ್ಯರಲ್ಲಿ 500ಕ್ಕೂ ಹೆಚ್ಚು ಮಂದಿ ಇನ್ನೂ ಖಾತೆ ತೆರೆದು ವಹಿವಾಟು ನಡೆಸಿಲ್ಲ. ಹಲವು ಸದಸ್ಯರ ವಿಳಾಸಗಳು ಸರಿಯಾಗಿಲ್ಲದ ಕಾರಣ ಅಂಚೆ ಮೂಲಕ ಕಳುಹಿಸಿದ ಪತ್ರಗಳು ವಾಪಸ್ ಬಂದಿವೆ. ಎರಡು ವಾರ್ಷಿಕ ಸಭೆಗಳಿಗೆ ಸತತವಾಗಿ ಗೈರುಹಾಜರಾಗುವುದು ಹಾಗೂ ಸೊಸೈಟಿಯಲ್ಲಿ ಖಾತೆ ತೆರೆದು ವಹಿವಾಟು ನಡೆಸದಿರುವುದರಿಂದ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸದಸ್ಯರಿಗೆ ತಿಳಿಸಿದರು.
ರಜತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಕುರಿತು ಮತ್ತೊಂದು ಸಭೆ ನಡೆಸಿ ಷೇರುದಾರರ ಅಭಿಪ್ರಾಯ ಪಡೆದು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ಸೆಪ್ಟಂಬರ್ 4 | ಯಾವ ಅಡಿಕೆಗೆ ಎಷ್ಟು ರೇಟ್
ಸಭೆಯಲ್ಲಿ ಉಪಾಧ್ಯಕ್ಷ ಸಿ.ಚಂದ್ರಪ್ಪ, ನಿರ್ದೇಶಕರಾದ ಕೆ.ಹೆಚ್.ಮುರುಗೇಂದ್ರಪ್ಪ, ಡಿ.ಎಸ್.ರಾಜೇಶ್, ಜಿ.ಟಿ.ಸುರೇಶ್, ಜಿ.ಎಂ.ಕರಿಬಸವಯ್ಯ, ಜೆ.ಎಸ್.ಪ್ರಸಾದ್, ಡಿ.ಎಸ್.ನೀಲಕಂಠೇಶ್ವರಪ್ಪ, ಎಂ.ಶೈಲಜಾ, ಜಿ.ಆರ್.ನಿವೇದಿತಾ, ರೀನಾ ಕೆ.ಜಿ., ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಜಯಕುಮಾರ್, ಉದ್ಯಮಿ ಕೆ.ವಿ.ಪ್ರಭಾಕರ್, ಮಾಜಿ ನಿರ್ದೇಶಕ ಕೆ.ಇ.ಬಿ.ಷಣ್ಮುಖಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಕುಸುಮ ಜವಳಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸೊಸೈಟಿಯ ಷೇರುದಾರರ ಮಕ್ಕಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

