
CHITRADURGA NEWS | 13 DECEMBER 2025
ಚಿತ್ರದುರ್ಗ: ತೀವ್ರ ಕಡೆಗಣನೆಗೆ ಒಳಗಾಗಿರುವ ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆ ಕೇಂದ್ರಿತ ಭದ್ರಾ ಮೇಲ್ದಂಡೆ ಯೋಜನೆ ಕಳೆದ ಎರಡು ದಶಕಗಳಿಂದ ನಡೆಯುತ್ತಿದೆ.
ಕೇಂದ್ರ ಅನುದಾನ ಕೊಡಲಿ ಎಂದು ರಾಜ್ಯ, ರಾಜ್ಯ ಸರ್ಕಾರದ ಯೋಜನೆ ಎಂದು ಕೇಂದ್ರ ಹೀಗೆ ಎರಡೂ ಸರ್ಕಾರಗಳು, ಎರಡೂ ಪಕ್ಷಗಳು ಭದ್ರೆಯನ್ನು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡಿದ್ದೇ ಈ ಎರಡು ದಶಕಗಳ ದೊಡ್ಡ ಸಾಧನೆ.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 12 |ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ರೇಟ್
3 ಸಾವಿರ ಕೋಟಿ ರೂ. ಅಂದಾಜಿನಲ್ಲಿ ಪ್ರಾರಂಭವಾಗ ಭದ್ರಾ ಮೇಲ್ದಂಡೆ ಯೋಜನೆ ಈಗ 21 ಸಾವಿರ ಕೋಟಿ ರೂ.ಗೆ ತಲುಪಿದೆ. ತಕ್ಷಣ ಮುಗಿಯದಿದ್ದರೆ ಇದು ಮೀಟರ್ ಬಡ್ಡಿಯಂತೆ ಏರುತ್ತಲೇ ಇರುತ್ತದೆ. ಆದರೆ, ಯೋಜನೆಯನ್ನು ಮುಗಿಸುವ ಆತುರ ಮಾತ್ರ ಸರ್ಕಾರಗಳಲ್ಲಿ ಕಾಣಿಸುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಬಂದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದರು. ಆನಂತರ ಕೇಂದ್ರದ ಬಜೆಟ್‌ನಲ್ಲೂ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಬಿಡಿಗಾಸು ಬಂದಿಲ್ಲ.
ರಾಜ್ಯ ಸರ್ಕಾರದ್ದೇ ಯೋಜನೆಯಾಗಿದ್ದ ಕಾರಣ ಪ್ರತಿ ವರ್ಷ ಬಜೆಟ್‌ನಲ್ಲಿ ಒಂದಿಷ್ಟು ಅನುದಾನ ಕೊಟ್ಟು ಯೋಜನೆ ಮುನ್ನಡೆಸುವ ಕೆಲಸವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಅಧಿಕಾರಕ್ಕೆ ಬಂದ ಎಲ್ಲರೂ ಮಾಡಿದ್ದಾರೆ.
ಇದನ್ನೂ ಓದಿ: ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
ಆದರೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ನಂತರ ಇದು ಪರಸ್ಪರ ಆರೋಪ-ಪ್ರತ್ಯಾರೋಪದ ಯೋಜನೆಯಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಇದೇ ವಿಚಾರವನ್ನು ಪ್ರಮುಖವಾಗಿಟ್ಟುಕೊಂಡು ಮಾತನಾಡಿದ್ದರು.
ಬೆಳಗಾವಿ ಅಧಿವೇಶನದಲ್ಲೂ ಚರ್ಚೆಗೆ ಬಂತು ಭದ್ರಾ ಮೇಲ್ದಂಡೆ:
ಇನ್ನೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನ ಪರಿಷತ್‌ನಲ್ಲಿ ಚಿತ್ರದುರ್ಗದ ಎಂಎಲ್ಸಿ ಕೆ.ಎಸ್.ನವೀನ್ ಈ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಇದು ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರೈತರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ | ಕೃಷಿ ಅಧಿಕಾರಿಗಳಿಗೆ ಡಿಸಿ ಸೂಚನೆ
ರಾಜ್ಯ ಸರ್ಕಾರ ಬರೀ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿದೆ. ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವ ಬದಲು ಕಾಲಹರಣ ಮಾಡುತ್ತಿದೆ. ಇದರಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೨೩ರಲ್ಲಿ ಪ್ರಧಾನಿ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ದರು. ಅಂದು ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಯೋಜನೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರು.
ಆದರೆ, ತೆಲಂಗಾಣ ಸರ್ಕಾರ ಆಕ್ಷೇಪ ಎತ್ತಿದ್ದರಿಂದ ಅಂತಾರಾಜ್ಯ ಜಲವಿವಾದವಾಗಿ ರಾಷ್ಟ್ರೀಯ ಯೋಜನೆ ಆಗಲಿಲ್ಲ. ಕೇಂದ್ರ ಸರ್ಕಾರ ಭದ್ರಾ ಕಾಲುವೆಯಿಂದ ರೈತರ ಜಮೀನುಗಳಿಗೆ ನೀರು ಹರಿಸುವ ಪೈಪ್‌ಲೈನ್ ಅಳವಡಿಸಲು ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಇದನ್ನೂ ಓದಿ: SSC | ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದರಿಂದ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು ಯೋಜನೆಗೆ ಅನುದಾನ ಕೊಡಿಸುವ ಕಡೆಗೆ ಗಮನಹರಿಸಿ. ಕೇಂದ್ರ ಅನುದಾನ ಘೋಷಿಸಿದ್ದನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಯಿ ತಮ್ಮ ಬಜೆಟ್ ಭಾಷಣದಲ್ಲೇ ಉಲ್ಲೇಖಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಇಷ್ಟಕ್ಕೆ ಸುಮ್ಮನಾಗದ ಕೆ.ಎಸ್.ನವೀನ್, ಯೋಜನೆ ಆರಂಭಿಸುವ ಮೊದಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತಾ, ಇದು ರಾಜ್ಯ ಸರ್ಕಾರದ ಯೋಜನೆಯಲ್ಲವೇ, ರಾಜ್ಯ ಸರ್ಕಾರಕ್ಕೆ ಈ ಯೋಜನೆ ಪೂರ್ಣಗೊಳಿಸುವ ಇಚ್ಚಾಶಕ್ತಿ ಇಲ್ಲವೇ, ಕೇಂದ್ರ ಅನುದಾನ ಕೊಡುತ್ತೇವೆ ಅಂದಾಕ್ಷಣ ಅವರ ಹೆಗಲ ಮೇಲೆ ಕುಳಿತುಕೊಳ್ಳುವುದಾ ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಸದನದಲ್ಲಿದ್ದ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿ, ಹಾಗಾದರೆ, ಕೇಂದ್ರ ಸರ್ಕಾರಕ್ಕೆ ಈ ವಿಚಾರದಲ್ಲಿ ಜವಾಬ್ದಾರಿ ಇಲ್ಲವೇ, ನಾವು ಕೇಂದ್ರಕ್ಕೆ ತೆರಿಗೆ ಕಟ್ಟುವುದಿಲ್ಲವೇ, ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿ ಈಗ ಸುಮ್ಮನಿರುವುದು ಸರಿಯೇ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಪ್ರತಿದಿನ ಕೇವಲ 15 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡಿ ಈ ಆರೋಗ್ಯ ಪ್ರಯೋಜನ ಪಡೆಯಿರಿ
ಈ ಹೊತ್ತಿಗೆ ಮಧ್ಯೆ ಪ್ರವೇಶಿಸಿದ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಎರಡೂ ಪಕ್ಷಗಳ ವಾದ-ಪ್ರತಿವಾದಕ್ಕೆ ತೆರೆ ಎಳೆದಿದ್ದಾರೆ.
ಒಟ್ಟಾರೆ, ಭದ್ರಾ ಮೇಲ್ದಂಡೆ ವಿಚಾರವಂತೂ ಗಂಭೀರವಾಗಿ ಚರ್ಚೆಯಾಗಿದೆ. ಯಾರು ಅನುದಾನ ಕೊಡುತ್ತಾರೆ, ಯಾವಾಗ ಮುಗಿಸುತ್ತಾರೆ ಎನ್ನುವುದನ್ನು ಜಿಲ್ಲೆಯ ಜನ ಕಾದು ನೋಡುತ್ತಿದ್ದಾರೆ. ಇದಕ್ಕೆ ಉತ್ತರವನ್ನು ಮುಂಬರುವ ಚುನಾವಣೆಗಳಲ್ಲಿ ಕೊಡಲಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
