ಮುಖ್ಯ ಸುದ್ದಿ
ಹೆಚ್ಚಾಗಿದೆ ಬಿಸಿಲು | ಕುರಿ, ಮೇಕೆ, ದನ ಮೇಯಿಸಲು ಸರಿಯಾದ ಸಮಯ ಯಾವುದು ಗೊತ್ತಾ..

CHITRADURGA NEWS | 01 MAY 2024
ಚಿತ್ರದುರ್ಗ: ಬಿಸಿಲು ಹೆಚ್ಚಾಗಿರುವುದರಿಂದ ಕುರಿ, ಮೇಕೆ, ದನಗಳನ್ನು ಬೆಳಿಗ್ಗೆ 11 ಗಂಟೆ ಮೇಲೆ ಹೊರಗಡೆ ಬಿಡದೆ ಮರದ ಕೆಳಗೆ, ಕೊಟ್ಟಿಗೆಯಲ್ಲಿ ಅಥವಾ ತಂಪಾದ ಸ್ಥಳದಲ್ಲಿ ಕಟ್ಟಬೇಕು ಎಂದು ಚಳ್ಳಕೆರೆ ತಾಲ್ಲೂಕು ನೇರ್ಲಗುಂಟೆ ಪಶು ಆಸ್ಪತ್ರೆ ಜಾನುವಾರು ಅಧಿಕಾರಿ ವಿ.ಎ.ಪ್ರಕಾಶ್‍ರೆಡ್ಡಿ ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಸಲಹೆ ನೀಡಿದರು.
ಇದನ್ನೂ ಓದಿ : ಚಿತ್ರದುರ್ಗ ಜಿಲ್ಲೆಯ ಗಡಿ ಭಾಗದಲ್ಲಿ ಮದ್ಯ ಮಾರಾಟ ನಿಷೇಧ
ದಿನಕ್ಕೆ ಮೂರರಿಂದ ನಾಲ್ಕು ಸಾರಿ ಶುದ್ದ ನೀರನ್ನು ಕುಡಿಸಿ, ಕೊಟ್ಟಿಗೆ ಮೇಲ್ಬಾಗದಲ್ಲಿ ತೆಂಗಿನ ಗರಿಗಳನ್ನು ಹರಡುವುದರಿಂದ ಬಿಸಿಲಿನ ತಾಪ ಕಡಿಮೆಯಾಗಲಿದೆ. ನೀರಿನ ಲಭ್ಯತೆಯಿದ್ದರೆ ದಿನಕ್ಕೆ ಒಂದೆರಡು ಸಾರಿ ಜಾನುವಾರುಗಳ ಮೈತೊಳೆಯಬಹುದು.
ಉತ್ತಮ ಎಮ್ಮೆ ಮತ್ತು ಮಿಶ್ರ ತಳಿ ಹಸುಗಳಿಗೆ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹೊದಿಸಿ ಆಗಾಗ ನೀರು ಸಿಂಪಡಿಸುವುದರಿಂದ ಹಾಲಿನ ಇಳುವರಿ ಹೆಚ್ಚುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಬಹುದೆಂದು ತಿಳಿಸಿದರು.
ಇದನ್ನೂ ಓದಿ : ಮೇ.27 ರವರೆಗೆ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನಕ್ಕೆ
1 ಕೆ.ಜಿ. ಕಡಲೆಕಾಯಿ ಹಿಂಡಿಯನ್ನು ಐವತ್ತು ಲೀಟರ್ ನೀರಿನಲ್ಲಿ ನೆನೆಸಿ ನೂರು ಕುರಿಗಳಿಗೆ ಕುಡಿಸಬೇಕು, ಮೂರರಿಂದ ನಾಲ್ಕು ಕೆ.ಜಿ.ಜೋಳ ಅಥವಾ ಮುಸುಕಿನ ಜೋಳದ ಕಾಳುಗಳನ್ನು ತಿನ್ನಿಸುವುದು. ಅಗಸೆ, ನುಗ್ಗೆ, ಸೂಬಾಬುಲ್‍ನಂತಹ ಮೇವನ್ನು ಕೊಡಬೇಕು.
ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಗೆ ಸುಣ್ಣ ಬಳಿದು ಸ್ವಚ್ಚಗೊಳಿಸಬೇಕು. ಹೀಗೆ ಮಾಡುವುದರಿಂದ ಜಾನುವಾರುಗಳನ್ನು ಬಿಸಿಲಿನ ಝಳದಿಂದ ಕಾಪಾಡಬಹುದು ಎಂದು ಜಾನುವಾರುಗಳ ಮಾಲೀಕರುಗಳಿಗೆ ಹೇಳಿದರು.
