ಮುಖ್ಯ ಸುದ್ದಿ
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ | ವೈ.ಎ.ನಾರಾಯಣಸ್ವಾಮಿ

CHITRADURGA NEWS | 15 MAY 2024
ಚಿತ್ರದುರ್ಗ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ. ಪ್ರತಿ ದಿನ ಒಂದೊಂದು ಆದೇಶ ಮಾಡುವ ಮೂಲಕ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ: ರಾಜವೀರ ಮದಕರಿ ನಾಯಕರ ಪುಣ್ಯಸ್ಮರಣೆ | ಅದ್ದೂರಿ ಪಟ್ಟಾಭಿಷೇಕಕ್ಕೆ ನಿರ್ಧಾರ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಸರಿಯಾಗಿ ಓದಲು ಬಾರದವರನ್ನು ಶಿಕ್ಷಣ ಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಶಿಕ್ಷಕರು ಮತ್ತು ಮಕ್ಕಳಿಗೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಶಿಕ್ಷಣದಲ್ಲಿ ನುರಿತವರನ್ನು ಇಲಾಖೆಯ ಮಂತ್ರಿಯನ್ನಾಗಿ ಮಾಡಲಾಗಿತ್ತು ಎಂದು ವಿವರಿಸಿದರು.
ಬಿಜೆಪಿ ವಿಧಾನ ಪರಿಷತ್ತಿನಿಂದಲೇ ತನ್ನ ಸದಸ್ಯತ್ವ ಪ್ರಾರಂಭಿಸಿತ್ತು. ಈಗ ಪರಿಷತ್ತಿನಲ್ಲಿ ನಮ್ಮ ಪಕ್ಷದ ಬಲ ಹೆಚ್ಚಾಗಿದೆ. ಇದು ಮುಂದುವರೆಯಬೇಕಿದೆ. ಇಲ್ಲದಿದ್ದರೆ ಕಾಂಗ್ರೆಸ್ ತನಗೆ ಬೇಕಾದ ಮಸೂದೆಗಳನ್ನು ಮಾಡಿಕೊಂಡು ಅದನ್ನು ಪರಿಷತ್‍ನಲ್ಲಿ ಪಾಸು ಮಾಡಿಕೊಳ್ಳುತ್ತಾರೆ ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ತೊಂದರೆಯಾಗಲಿದೆ ಎಂದರು.
ಈಗ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಎಲ್ಲಾ ಸ್ಥಾನಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಗೆಲ್ಲಬೇಕಿದೆ. ರಾಜ್ಯ ಸರ್ಕಾರ ಈಗ ಇರುವ ಎರಡು ಪರೀಕ್ಷೆಯನ್ನು ಬಿಟ್ಟು ಮೂರು ಪರೀಕ್ಷೆ ಮಾಡುತ್ತಿದೆ. ಆದರೆ, ಇದರ ಫಲಿತಾಂಶ ಸೊನ್ನೆಯಾಗಿದೆ.
ಇದು ಮಕ್ಕಳು ಮತ್ತು ಶಿಕ್ಷಕರು ಇಬ್ಬರಿಗೂ ಹೊರೆಯಾಗಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳಲ್ಲಿ ಆತಂಕ ಸೃಷ್ಟಿಸಲಾಗಿತ್ತು. ಸಿ.ಸಿ.ಕ್ಯಾಮರಾ, ವೆಬ್‍ಕಾಸ್ಟಿಂಗ್ ಮಾಡಿ ಪರೀಕ್ಷೆ ನಡೆಸಿದ ಪರಿಣಾಮ ಮಕ್ಕಳು ಹೆದರಿಕೊಂಡಿದ್ದಾರೆ. ಶಿಕ್ಷಣ ಸಚಿವರು ಸರ್ವಾಧಿಕಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ
ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದರೆ ಅಂತಹ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಅಂತಹ ಶಿಕ್ಷಕರ ಬಡ್ತಿಯನ್ನು ಕಡಿತ ಮಾಡಲಾಗುತ್ತಿದೆ ಶಾಲೆಯ ಅನುದಾನವನ್ನು ಕಡಿತ ಮಾಡಲು ಸರ್ಕಾರ ಮುಂದಾಗಿರುವುದು ದುರಂತವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದಾಗಲೆಲ್ಲಾ ಶಿಕ್ಷಣ ಇಲಾಖೆ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರ ಬಹಳ ದೊಡ್ಡದಿದೆ. 34 ಶಾಸಕರು, 5 ಸಂಸದರು ಇದ್ದಾರೆ. 466 ಕಿ.ಮೀ ಸುತ್ತಳತೆ ಇದೆ. ಇಲ್ಲಿ ಎಲ್ಲರು ನಾವೇ ಅಭ್ಯರ್ಥಿ ಎಂದು ಮತದಾರರನ್ನು ಬೇಟಿ ಮಾಡಿ ಮತಯಾಚನೆ ಮಾಡುವಂತೆ ಪಕ್ಷದ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಚುನಾವಣೆಯಲ್ಲಿ ಹಿಂದೆ ನಮ್ಮ ಪಕ್ಷಕ್ಕೆ ದ್ರೋಹ ಮಾಡಿದವರು ಸ್ಪರ್ಧಿಸಿದ್ದಾರೆ. ಆವರಿಗೆ ತಕ್ಕಪಾಠ ಕಲಿಸಲು ಈ ಚುನಾವಣೆ ಸರಿಯಾದ ವೇದಿಕೆಯಾಗಿದೆ. ಇಲ್ಲಿ ಜಾತಿ, ಹಣ, ದೌರ್ಜನ್ಯ, ದಬ್ಬಾಳಿಕೆ, ಕುತಂತ್ರ ನಡೆಯುವುದಿಲ್ಲ ಪ್ರೀತಿ, ವಿಶ್ವಾಸ, ಮಾನವೀಯತೆಯಿಂದ ಮಾತ್ರ ಗೆಲುವು ಸಾಧ್ಯ ಎಂದು ನಾರಾಯಣಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆರು ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿದೆ, ಇದರಲ್ಲಿ ಗೆಲುವು ಸಾಧಿಸಬೇಕಿದೆ, ಇದಕ್ಕೆ ಎಲ್ಲರ ಸಹಾಯ, ಸಹಕಾರ ಅಗತ್ಯವಿದೆ. ಇದು ಬೇರೆ ಚುನಾವಣೆಯಂತಲ್ಲ. ಬುದ್ದಿವಂತ ಮತದಾರರು ಇಲ್ಲಿದ್ದಾರೆ ಅವರ ಮನವೂಲಿಸಿ ಮತ ಕೇಳಬೇಕಿದೆ ಎಂದರು.
ಕಾಂಗ್ರೆಸ್ ತನ್ನ ಪ್ರನಾಳಿಕೆಯಲ್ಲಿ ಶಿಕ್ಷಕರಿಗೆ ವಿವಿಧ ಭರವಸೆಗಳನ್ನು ನೀಡಿತ್ತು. ಆದರೆ, ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಇದರಿಂದ ಶಿಕ್ಷಕರು, ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಟೀಕೇಟ್ ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆ ಬಿಜೆಪಿಯಲ್ಲಿದ್ದು ಅಧಿಕಾರ ಅನುಭವಿಸಿ ಈಗ ಮತ್ತೇ ಅಧಿಕಾರಕ್ಕಾಗಿ ಬೇರೆ ಪಕ್ಷ ಸೇರಿದ್ದಾರೆ ಇಂಥವರಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ | ಸರ್ವಧರ್ಮಿಯ ವಧು, ವರರು ಭಾಗವಹಿಸಲು ಅವಕಾಶ
ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಜಿಪಂ ಮಾಜಿ ಸದಸ್ಯ ಅಜ್ಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮತ್ತಿತರರಿದ್ದರು.
