ಹೊಸದುರ್ಗ
ವೇದಗಳಷ್ಟೇ ಪ್ರಾಮುಖ್ಯತೆ ಶ್ರೀರಾಮಾಯಣಕ್ಕಿದೆ | ಬೆಲಗೂರು ಮಾರುತಿ ವಿಜಯ ಶರ್ಮಾ ಸ್ವಾಮೀಜಿ

ಚಿತ್ರದುರ್ಗ ನ್ಯೂಸ್.ಕಾಂ: ಶ್ರೀರಾಮ ಧರ್ಮದ ಸಾಕಾರ ಮೂರ್ತಿ. ರಾಮನೇ ಧರ್ಮ ಎಂದು ಮಹರ್ಷಿ ವಾಲ್ಮೀಕಿ ಹೇಳಿದ್ದಾರೆ ಎಂದು ಬೆಲಗೂರು ಮಾರುತಿ ಪೀಠದ ಶ್ರೀ ಮಾರುತಿ ವಿಜಯಶರ್ಮಾ ಶ್ರೀಗಳು ಹೇಳಿದರು.
ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಹೊಸದುರ್ಗ ತಾಲೂಕಿನ ತಂಡಗ ಗ್ರಾಮದಲ್ಲಿ ಚಾಲನೆ ನೀಡಿ ಆಶೀರ್ವಚನ ನೀಡಿದರು.
ನಾರಾಯಣ ಸಮಸ್ತ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಮಾವತಾರದಲ್ಲಿ ನಮಗೆಲ್ಲಾ ದರ್ಶನ ಮಾಡಿದ್ದಾರೆ ಎಂದರು.

ವಾಲ್ಮೀಕಿ ರಾಮಾಯಣದಲ್ಲಿರುವ ಶ್ಲೋಕದಂತೆ ವೇದ ಮತ್ತು ವೇದ ಪುರುಷ ನಾರಾಯಣ ಧರ್ಮ ಉಳಿಸಲು ಭೂಮಿಯಲ್ಲಿ ಅವತಾರವೆತ್ತುವ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಶ್ರೀ ನಾರಾಯಣ ರಾಮನ ಅವತಾರದಲ್ಲಿ ಬಂದರೆ, ವೇದವು ಸ್ವಯಂ ವಾಲ್ಮೀಕಿಗಳ ಮೂಲಕ ರಾಮಾಯಣದ ಅವತಾರ ತಾಳಿತು ಎನ್ನುವ ಮಾತಿದೆ ಎಂದು ಹೇಳಿದರು.
ಇದನ್ನೂ ಓದಿ: ಅಯೋಧ್ಯೆಯ ಮಂತ್ರಾಕ್ಷತೆ ದುರ್ಗದ ಮನೆ ಮನೆಗೆ | ಗಣ್ಯರ ಪ್ರತಿಕ್ರಿಯೆ ಹೇಗಿತ್ತು

ವೇದಗಳು ಎಷ್ಟು ಪ್ರಾಧಾನ್ಯವೋ ಅಷ್ಟೇ ಸರಿಸಮಾನವಾದ ಪ್ರಾಮುಖ್ಯತೆಯನ್ನು ವಾಲ್ಮೀಕಿ ರಾಮಾಯಣಕ್ಕೆ ಕೊಟ್ಟಿದ್ದೇವೆ. ಇಂತಹ ಭಾರತೀಯರ ಆದರ್ಶವಾಗಿರುವ ರಾಮಾಯಣದಲ್ಲಿ ಪ್ರಮುಖವಾದವರು ಶ್ರೀರಾಮಚಂದ್ರ ಎಂದರು.
ಪಾವನವಾಗಿರುವ ಭರತವರ್ಷದಲ್ಲಿ ಸರಯು ನದಿ ತಟದಲ್ಲಿರುವ ಅಯೋಧ್ಯೆ ಪುಣ್ಯನಗರಿಯಲ್ಲಿ ತ್ರೇತಾಯುಗದಲ್ಲಿ ಶ್ರೀಮನ್ ನಾರಾಯಣ ರಾಮನಾಗಿ ಜನಿಸಿದ್ದರು.

ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಹೊಸದುರ್ಗ ತಾಲೂಕಿನ ತಂಡಗದಲ್ಲಿ ಚಾಲನೆ
ಅವರನ್ನು ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿ ಆರಾಧಿಸಬೇಕು. ಸೇವೆ ಮಾಡಬೇಕು ಎನ್ನುವುದು ಭಾರತೀಯರ ಶತಮಾನಗಳ ಆಸೆಯಾಗಿತ್ತು ಎಂದು ಸ್ಮರಿಸಿದರು.
ನಮ್ಮ ಗುರುಗಳಾದ ಶ್ರೀ ಬಿಂಧು ಮಾಧವರು ಸದಾ ಹೇಳುವ ಮಾತೊಂದಿತ್ತು, ಭಗವಂತ ಮನುಷ್ಯ ಜನ್ಮದಲ್ಲಿ ಅನೇಕ ಪರೀಕ್ಷೆಗಳು, ಸುಖ ದುಃಖವನ್ನು ಕೊಡುತ್ತಾನೆ. ಆದರೆ, ನಾವೆಲ್ಲಾ ಮನುಷ್ಯ ಜನ್ಮ ನೀರಸವಾದುದು. ಸತ್ವ ಇಲ್ಲ ಎಂದು ಕಡೆಗಣಿಸುತ್ತೇವೆ. ಆದರೆ, ಸಿಕ್ಕಿರುವ ಮನುಷ್ಯ ಜನ್ಮವನ್ನು ನಾವೆಲ್ಲಾ ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ನಾನು ಸೋಮನಹಳ್ಳಿ ಮಠದ ಶ್ರೀಶೈಲ ಆರಾಧ್ಯ ಅಂತಾ..
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ ಮಾತನಾಡಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಎಚ್‍ಪಿ ಸಂಕಲ್ಪದಂತೆ ದೇಶದ ಪ್ರತಿ ಮನೆಗೂ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ತಲುಪಿಸುತ್ತಿದ್ದೇವೆ. ಅದರಂತೆ ತಂಡಗ ಗ್ರಾಮದಲ್ಲಿ ಕೂಡಾ ವಿತರಣೆ ಮಾಡಲಾಗುತ್ತಿದೆ ಎಂದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಆ ದಿನ ದೇವಸ್ಥಾನದ ಆವರಣದಲಿ ಎಲ್‍ಇಡಿ ಸ್ಕ್ರೀನ್ ಹಾಕಿಸಿ ಕಾರ್ಯಕ್ರಮವನ್ನು ಸಾಮೂಹಿಕವಾಗಿ ವೀಕ್ಷಣೆ ಮಾಡುವಂತೆ ವ್ಯವಸ್ಥೆ ಮಾಡೋಣ ಎಂದರು.
ಅದೇ ದಿನ ಸಂಜೆ ಉತ್ತರ ದಿಕ್ಕಿಗೆ ಮುಖ ಮಾಡಿ ಅಯೋಧ್ಯೆ ಕಡೆಗೆ 5 ದೀಪಗಳನ್ನು ಬೆಳಗಿಸಿ ಆರತಿ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಲ್ಲೇಶಣ್ಣ, ಸೇರಿದಂತೆ ಸಂಘ ಪರಿವಾರದ ಪ್ರಮುಖರು, ತಂಡಗ ಗ್ರಾಮಸ್ಥರು ಹಾಜರಿದ್ದರು.
