CHITRADURGA NEWS | 24 APRIL 2026
ಚಿತ್ರದುರ್ಗ: ಜಿಲ್ಲೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವಸತಿ ಶಾಲೆಗಳು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇ. 99.55ರಷ್ಟು ಫಲಿತಾಂಶ ದಾಖಲಿಸಿವೆ.

ಇದನ್ನೂ ಓದಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಅತ್ಯುತ್ತಮ ಫಲಿತಾಂಶ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಒಟ್ಟು 34 ವಸತಿ ಶಾಲೆಗಳ ಪೈಕಿ 29 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದಿವೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯ 13, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ 12 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 4 ವಸತಿ ಶಾಲೆಗಳು ಸೇರಿವೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 15 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 671 ವಿದ್ಯಾರ್ಥಿಗಳಲ್ಲಿ 198 ಅತ್ಯುನ್ನತ, 387 ಪ್ರಥಮ ದರ್ಜೆ, 67 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 15 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 677 ವಿದ್ಯಾರ್ಥಿಗಳಲ್ಲಿ 178 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 368 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 98 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ: SSLC RESULT | ಚಿತ್ರದುರ್ಗ ಜಿಲ್ಲೆಗೆ ಶೇ.92.25 ರಷ್ಟು ಫಲಿತಾಂಶ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 4 ವಸತಿ ಶಾಲೆಗಳಿಂದ ಪರೀಕ್ಷೆಗೆ ಹಾಜರಾದ 198 ವಿದ್ಯಾರ್ಥಿಗಲ್ಲಿ 80 ಅತ್ಯುನ್ನತ ಶ್ರೇಣಿ ಹಾಗೂ 93 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪ್ರಥಮ ದರ್ಜೆಯಲ್ಲಿ ಹಾಗೂ 19 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂಕಗಳಿಕೆಯಲ್ಲಿ ದೇವರಕೊಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪೂರ್ಣಿಮ ಪ್ರಿಯ ಜೆ 612 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎನ್.ಸಿ ಯಶವಂತ ಪಾಟೀಲ್, ದೇವರಕೊಟ್ಟ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಈ.ಪುಷ್ಪಲತಾ ಹಾಗೂ ಚಳ್ಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಟಿ. ಪೂರ್ಣಿಮಾ ತಲಾ 610 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯ ಟಿ.ರಮೇಶ 609 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳು ಮತ್ತು ವಸತಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೆಚ್.ದಿವಾಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ, ಜಿಲ್ಲಾ ಕ್ರೈಸ್ ಸಮನ್ವಯಾಧಿಕಾರಿ ಆರ್.ರಮೇಶ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
ಕ್ರೈಸ್ ವಸತಿ ಶಾಲೆಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ ವರ್ಗ, ಉಚಿತ ಊಟ-ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್ ಮತ್ತು ಸಂಗೀತ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ವಸತಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
