
CHITRADURGA NEWS | 20 SEPTEMBER 2025
ಚಿತ್ರದುರ್ಗ: ಹಿರಿಯ ನಾಗರಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಲು ರಾಜ್ಯದ ಮೊದಲ ಹಿರಿಯ ನಾಗರಿಕರ ಸಲಹಾ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಇದನ್ನೂ ಓದಿ: ವರ್ಷಿತಾ ಕೊಲೆ | ಸುಮೋಟೊ ಕೇಸ್ ದಾಖಲಿಸಿಕೊಂಡ ಎಸ್ಸಿ ಕಮಿಷನ್
ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2025ರ ಅಂಗವಾಗಿ ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಲೋಕಾಯುಕ್ತ ಕಚೇರಿ ಹಿಂಭಾಗದಲ್ಲಿ ಸಲಹಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಸಲಹಾ ಕೇಂದ್ರ ಕೆಲಸ ನಿರ್ವಹಿಸಬೇಕು ಎಂದು ನ್ಯಾಯಾಧೀಶ ಎಂ.ವಿಜಯ್ ಹೇಳಿದರು.
ಇಳಿ ವಯಸ್ಸಿನಲ್ಲಿ ಸ್ನೇಹಿತರೊಂದಿಗೆ ಒಡನಾಟ ಇಟ್ಟುಕೊಳ್ಳುವುದರಿಂದ ಒತ್ತಡ ಹಾಗೂ ಆತಂಕದಿಂದ ದೂರವಾಗಿ ಜೀವನ ನಡೆಸಬಹುದು. ಸ್ನೇಹಿತರೊಂದಿಗೆ ಬೆರೆತು ಕಾಲ ಕಳೆಯುವುದರಿಂದ ಒಳ್ಳೆಯ ಜೀವನ ನಿಮ್ಮದಾಗುತ್ತದೆ. ಸರ್ಕಾರ ಹಾಗೂ ನ್ಯಾಯಾಂಗ ಇಲಾಖೆ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿವೆ.
ಇದನ್ನೂ ಓದಿ: ವರ್ಷಿತಾ ಕೊಲೆ | ಸುಮೋಟೊ ಕೇಸ್ ದಾಖಲಿಸಿಕೊಂಡ ಎಸ್ಸಿ ಕಮಿಷನ್
ಹಿರಿಯ ನಾಗರಿಕ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡು ಇತ್ಯರ್ಥ ಪಡಿಸಲಾಗುವುದು. ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ದೂರು ಸಲ್ಲಿಸಲು ಕಷ್ಟವಾದರೆ, ಟೋಲ್ ಫ್ರೀ ಸಂಖ್ಯೆ 15100 ಕರೆ ಅಥವಾ ಸಂದೇಶ ಮೂಲಕ ಮನವಿ ಮಾಡಿಕೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯದಿಂದಲೇ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿರುವುದರಿಂದ ತಕ್ಷಣವೇ ಸ್ಪಂದನೆ ಹಾಗೂ ನೆರವು ದೊರಯಲಿದೆ ಎಂದು ನ್ಯಾ.ಎಂ.ವಿಜಯ್ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಉಪವಿಭಾಗಾಧಿಕಾರಿ, ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಯ ಹೊಣೆ ಹೊತ್ತಿರುತ್ತಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ವೃದ್ಧರೊಬ್ಬರ ಜೀವರಕ್ಷಣೆ ಮಾಡುವಲ್ಲಿ ಉಪವಿಭಾಗಾಧಿಕಾರಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನ್ಯಾಯಾಧೀಶ ಎಂ.ವಿಜಯ್ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ನ್ಯಾಯಾಲಯ, ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ಸದಾ ಬದ್ದ ಇರುವುದಾಗಿ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ ಮಾತನಾಡಿ, ಹಿರಿಯ ನಾಗರಿಕರು ಉತ್ತಮ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನ ಜಂಜಾಟಗಳನ್ನು ತೊರೆದು 60 ವರ್ಷದ ನಂತರದ ನಿವೃತ್ತಿ ಜೀವನವನ್ನು ಸುಖದಿಂದ ಕಳೆಯಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನೂತನ ವಾಲ್ಮೀಕಿ ಭವನದಲ್ಲಿ ಈ ಭಾರಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ | ADC ಕುಮಾರಸ್ವಾಮಿ
ಉಪವಿಭಾಗಾಧಿಕಾರಿ ಹಾಗೂ ಪಾಲಕರ ಪೋಷಣೆ ಸಂರಕ್ಷಣೆ ಹಿರಿಯ ನಾಗರಿಕರ ರಕ್ಷಣಾ ಮಂಡಳಿ ಅಧ್ಯಕ್ಷ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, 60 ವರ್ಷದ ನಂತರ ಮನುಷ್ಯ ಆಲೋಚನೆ ಹಾಗೂ ಜೀವನ ಪದ್ದತಿಗಳು ಬದಲಾಗುತ್ತವೆ.
ಪ್ರಸ್ತುತ ಜೀವನದಲ್ಲಿ ಹಣ ಹಾಗೂ ಸಂಪತ್ತಿನ ಅಭಿಲಾಷೆಯಿಂದ ದೇವರಿಗೆ ಮೊರೆಯಿಡುತ್ತೇವೆ. ಆದರೆ ಇಳಿ ವಯಸ್ಸಿನಲ್ಲಿ ಉತ್ತಮ ಆರೋಗ್ಯ ಬೇಕು ಎಂದು ಕೇಳುವುದಿಲ್ಲ. ದೇವರು ನಮ್ಮ ಐಹಿಕ ಇಚ್ಛೆಗಳನ್ನು ಪೂರೈಸುವುದರೊಂದಿಗೆ ಆರೋಗ್ಯ ತೊಂದರೆಗಳನ್ನು ಸಹ ಕರುಣಿಸುತ್ತಾನೆ. ಆದ್ದರಿಂದ ಸಂಪತ್ತಿನ ಬದಲಿಗೆ ನಾವೆಲ್ಲರೂ ಉತ್ತಮ ಆರೋಗ್ಯವನ್ನು ಬೇಡಿಕೊಳ್ಳಬೇಕು ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್‍ನಲ್ಲಿ ಬಾಲ್ ಎಸೆಯುವುದು, ಗಾಯನ ಸ್ಪರ್ಧೆ, ಏಕ ಪಾತ್ರಾಭಿನಯ ಸ್ಪರ್ಧೆಗಳು ನಡೆದವು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಿಸಲಾಯಿತು.
ಇದನ್ನೂ ಓದಿ: ಸಮೀಕ್ಷೆಯಲ್ಲಿ ನಿಮ್ಮ ಪಂಗಡದ ಹೆಸರು ಬರೆಸಿದರೆ ಮೀಸಲಾತಿ ಸಾಧ್ಯ | ಗೊ.ತಿಪ್ಪೇಶಿ
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯ್ ಕುಮಾರ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ದಿಲ್‍ಶಾದ್ ಉನ್ನೀಸಾ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ಅಧ್ಯಕ್ಷ ಪ್ರೇಮನಾಥ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ ನಿಕಟಪೂರ್ವ ಅಧ್ಯಕ್ಷ ರಂಗಪ್ಪ ರೆಡ್ಡಿ ಸೇರಿದಂತೆ ಹಿರಿಯ ನಾಗರಿಕರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
