CHITRADURGA NEWS | 19 MAY 2024
ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ತೆಂಗಿನ ಮರಗಳು ವಿದ್ಯುತ್ ಶಾಕ್‌ಗೆ ತುತ್ತಾಗಿವೆ. ಹೊಲದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು ರೈತರು ಹೊಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮದ ಬೋರಮ್ಮ ದೊಡ್ಡ ಹುಚ್ಚಮಲ್ಲಯ್ಯ ಅವರ ಜಮೀನಿನ ಮೇಲೆ ಹಾದುಹೋಗಿರುವ ಹೈ ವೋಲ್ಟೇಜ್ ವಿದ್ಯುತ್ ಲೈನ್‌ನಿಂದ ವಿದ್ಯುತ್ ಪ್ರವಹಿಸಿ ಫಲಕ್ಕೆ ಬಂದಿದ್ದ ತೆಂಗಿನ ಮರ ಸುಟ್ಟು ಕರಕಲಾಗಿದೆ.
ಗ್ರಾಮದ ರಿ.ಸ.22/ಪಿ2ರ 7.23 ಎಕರೆ ಜಮೀನಿನಲ್ಲಿ ಅಡಿಕೆ, ಹುಣಸೆ, ಮಾವು, ತೆಂಗಿನ ಮರಗಳನ್ನು ಬೆಳೆಸಲಾಗಿದೆ. 2018ರಲ್ಲಿ ರೈತರ ವಿರೋಧದ ನಡುವೆ ಕೆಪಿಟಿಸಿಎಲ್ ಅಧಿಕಾರಿಗಳು ಹೈ ವೋಲ್ಟೇಜ್ ವಿದ್ಯುತ್ ಮಾರ್ಗವನ್ನು ಇದೇ ಜಮೀನಿನ ಮೇಲೆ ಹಾಕಿದರು. ಅದಕ್ಕಾಗಿ ಅಲ್ಪಸ್ವಲ್ಪ ಪರಿಹಾರ ನೀಡಿ ಸುಮ್ಮನಾದರು. ಇಂದು ಜಮೀನಿನಲ್ಲಿ ಎಲ್ಲ ಗಿಡಗಳು ಬೆಳೆದು ದೊಡ್ಡ ಮರಗಳಾಗಿ ಫಲ ನೀಡಲು ಆರಂಭಿಸಿವೆ.
ಜಮೀನಿನ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿಗಳಿಂದ ನಿರಂತರವಾಗಿ ವಿದ್ಯುತ್ ಪ್ರವಹಿಸುತ್ತಿರುವ ಪರಿಣಾಮ ಗಿಡಮರಗಳು ವಿದ್ಯುತ್ ಶಾಕ್‌ನಿಂದ ನಾಶವಾಗುತ್ತಿವೆ. ರೈತರು ಬೆಳೆಗಳಿಗೆ ನೀರು ಹಾಯಿಸಲು ಜಮೀನಿಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಪಿಟಿಸಿಎಲ್ ದಾವಣಗೆರೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿರುಪಾಕ್ಷಪ್ಪ, ರೈತರಿಗೆ ಎದುರಾಗಿರುವ ಸಮಸ್ಯೆಯನ್ನು ಪರಿಶೀಲಿಸಲಾಗಿದೆ. ರೈತರಿಗಾಗಿರುವ ನಷ್ಟದ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೆಪಿಟಿಸಿಎಲ್ ಚಿತ್ರದುರ್ಗದ ಸಹಾಯಕ ಎಂಜಿನಿಯರ್ ಬಿ.ಹರೀಶ್. ತಳಕು ಉಪವಿಭಾಗೀಯ ಎಂಜಿನಿಯರ್ ಪ್ರಶಾಂತ್, ನಾಯಕನಹಟ್ಟಿ ಬೆಸ್ಕಾಂ ಸಿಬ್ಬಂದಿ ಪಾಲಯ್ಯ, ಸಣ್ಣಪಾಲಯ್ಯ, ಕುಮಾರ, ರಾಮಕೃಷ್ಣ, ಮನೋಹರ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
