
ಚಿತ್ರದುರ್ಗ ನ್ಯೂಸ್.ಕಾಂ: ದೇವರು, ಧರ್ಮ, ದೇಗುಲಗಳ ವಿಚಾರಗಳಲ್ಲಿ ಅನೇಕ ಕಟ್ಟುಪಾಡು, ನಿಯಮಗಳಿವೆ. ಆ ನಿಯಮಗಳನ್ನು ಮೀರಿ ಯಾವುದೂ ನಡೆಯುವಂತಿಲ್ಲ. ಇದು ನಂಬಿಕೆಯ ವಿಚಾರವಾಗಿರುತ್ತದೆ.
ಅದೇ ರೀತಿ ನಾಡಿನಲ್ಲಿ ಅನೇಕ ಮಹತ್ವದ ಪುಣ್ಯ ಕ್ಷೇತ್ರಗಳಿವೆ. ಅಲ್ಲಿ ದೇವರು ಬಯಲಲ್ಲೇ ಇದ್ದಾರೆ. ಅಲ್ಲಿಗೆ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತಿದ್ದರೂ, ಭಕ್ತರಿಗೆ ಭವ್ಯ ದೇಗುಲ ನಿರ್ಮಾಣ ಮಾಡುವ ಬಯಕೆ ಇದ್ದರೂ ಅಲ್ಲಿನ ನಿಯಮ ಅಡ್ಡಿಯಾಗಿರುತ್ತದೆ.

ಇದಕ್ಕೆ ಸೂಕ್ತ ನಿದರ್ಶನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ನಡುವೆ ಸಿಗುವ ಸೌತಡ್ಕ ಮಹಾಗಣಪತಿ. ಇಲ್ಲಿ ಗಣಪನಿಗೆ ಬಯಲೇ ಆಲಯ. ಇಲ್ಲಿನ ನಿಯಮ ದೇವಸ್ಥಾನ ನಿರ್ಮಾಣ ಮಾಡುವಂತಿಲ್ಲ ಎಂದಿದೆ.

ಇದನ್ನೂ ಓದಿ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಕಸರತ್ತು
ಕೆಲವೊಮ್ಮೆ ದೇವಸ್ಥಾನ ನಿರ್ಮಾಣ ಆಗಬೇಕು ಎನ್ನುವುದಾದರೆ ಅದು, ದೇವರ ಅನುಮತಿ ಪಡೆದೇ ಆಗಬೇಕಾಗಿರುತ್ತದೆ.
ಹೀಗೆ ದೇಗುಲ ನಿರ್ಮಾಣಕ್ಕೆ ಬರೋಬ್ಬರಿ 750 ವರ್ಷಗಳ ಬಳಿಕ ಅಂದರೆ 8ನೇ ತಲೆಮಾರಿನವರಿಗೆ ದೇವರೇ ಅನುಮತಿ ನೀಡಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸೀಂಗೇನಹಳ್ಳಿಯಲ್ಲಿ ನಡೆದಿದೆ.
ಹೌದು, ಹೊಳಲ್ಕೆರೆ ತಾಲೂಕಿನ ರಾಮಗಿರಿ ಬಳಿಯಿರುವ ಸಿಂಗೇನಹಳ್ಳಿ ಹೊರವಲಯದ ಬೆಟ್ಟದಲ್ಲಿ ನೆಲೆಸಿರುವ ಜೇನುಮಲೈ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಸಾಕ್ಷಾತ್ ರಂಗನಾಥ ಸ್ವಾಮಿಯೇ ಅಪ್ಪಣೆ ನೀಡಿದ್ದಾರೆ.

ಬೆಟ್ಟದ ಮೇಲೆ ಪುಟ್ಟ ಗುಡಿಯಲ್ಲಿ ನೆಲೆಸಿದ್ದ ಶ್ರೀ ರಂಗನಾಥ ಸ್ವಾಮಿಗೆ ದೇವಸ್ಥಾನ ನಿರ್ಮಾಣ ಮಾಡುವ ಆಸೆಯಿಂದ ಈ ಗ್ರಾಮದ ಪೂರ್ವಜರ ಕಾಲದಿಂದಲೂ ದೇವರ ಬಳಿ ಅಪ್ಪಣೆ ಕೇಳುತ್ತಾ ಬರಲಾಗಿತ್ತು. ಆದರೆ, ಎಂದೂ ದೇವರು ಸಮ್ಮತಿಸಲಿಲ್ಲ.
ಇತ್ತೀಚೆಗೆ ಗ್ರಾಮಸ್ಥರು, ಭಕ್ತರು ಶ್ರೀ ರಂಗನಾಥ ಸ್ವಾಮಿಗೆ ಮೊಗಿನ ಮಾಲೆ ಹಾಕಿ ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ದೇವಸ್ಥಾನ ನಿರ್ಮಾಣಕ್ಕೆ ಎಂದಿನಂತೆ ಅಪ್ಪಣೆ ಕೇಳಿದ್ದಾರೆ. ಈ ವೇಳೆ ಸ್ವಾಮಿಯ ಬಲ ಭಾಗದಿಂದ ಮಾಲೆ ಕೆಳಗೆ ಬೀಳುವ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ಅಪ್ಪಣೆಯಾಗಿದೆ.
ಈಗ ಇರುವ ತಲೆಮಾರಿನ ಭಕ್ತರು ಕೂಡಾ ಕಳೆದ 50 ವರ್ಷಗಳಿಂದ ಆಗಾಗ ಅಪ್ಪಣೆ ಕೇಳಿದ್ದರೂ ಎಡ ಭಾಗದಲ್ಲೇ ಅಪ್ಪಣೆಯಾಗಿದೆ. ಆದರೆ, ಈಗ ದೇವರು ದೇಗುಲ ನಿರ್ಮಾನಕ್ಕೆ ಬಲಭಾಗದಲ್ಲಿ ಅಪ್ಪಣೆ ನೀಡಿರುವುದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕಮಾಸ ಸಂಭ್ರಮ
ಸುಲಭವಿಲ್ಲ ದೇವಸ್ಥಾನ ನಿರ್ಮಾಣದ ಕೆಲಸ:
ಜೇನುಮಲೆ ಬೆಟ್ಟದಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿ ದೇಗುಲ ನಿರ್ಮಾನಕ್ಕೆ ರಂಗಪ್ಪನ ಅಪ್ಪಣೆ ದೊರೆತಿದೆ. ಆದರೆ, ಸುಮಾರು 950 ಅಡಿಗಿಂತಲೂ ಹೆಚ್ಚು ಎತ್ತರದ ಬೆಟ್ಟಕ್ಕೆ ಕಲ್ಲು, ಮಣ್ಣು, ಸಿಮೆಂಟ್, ಇಟ್ಟಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ.
ಭಕ್ತರು ನಡೆದು ಹೋಗಲಷ್ಟೇ ಕಾಲುದಾರಿಯಿದೆ. ಯಾವುದೇ ಮೆಟ್ಟಿಲುಗಳಿಲ್ಲ. ಹೀಗಾಗಿ ಬೆಟ್ಟದ ತುದಿಗೆ ಎಲ್ಲ ವಸ್ತುಗಳನ್ನು ಸಾಗಿಸುವ ಸವಾಲು ಗ್ರಾಮಸ್ಥರು, ಭಕ್ತರ ಮೇಲಿದೆ.
ಪ್ರತಿ ಶನಿವಾರ ಹರಿದು ಬರುತ್ತದೆ ಭಕ್ತ ಸಾಗರ:
ಜೇನುಮಲೈ ಶ್ರೀರಂಗನಾಥ ಸ್ವಾಮಿಗೆ ಅಪಾರ ಭಕ್ತರಿದ್ದಾರೆ. ಪ್ರತಿ ಶನಿವಾರ ಇಲ್ಲಿ ನಡೆಯುವ ಪೂಜೆಗೆ ನೂರಾರು ಭಕ್ತರು ಆಗಮಿಸುತ್ತಾರೆ. ಮದುವೆ, ನಾಮಕರಣದಂತಹ ಅನೇಕ ಶುಭ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ. ಬೆಟ್ಟದ ಮೇಲೊಂದು ಪುಟ್ಟ ಹೊಂಡವಿದ್ದು, ಅದರ ನೀರನ್ನು ಪೂಜೆಗೆ ಬಳಕೆ ಮಾಡಲಾಗುತ್ತದೆ.
ಉಳಿದಂತೆ ಇಲ್ಲಿನ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲ ಸೌಲಭ್ಯಗಳ ಕೊರತೆಯಿದೆ. ವಿದ್ಯುತ್, ನೀರಿನ ಸೌಲಭ್ಯ ಹಾಗೂ ಬೆಟ್ಟ ಹತ್ತಲು ಸೂಕ್ತ ಮಾರ್ಗದ ವ್ಯವಸ್ಥೆ ಆಗಬೇಕಿದೆ.

ಭಕ್ತರ ನೆರವಿನಿಂದಲೇ ದೇಗುಲ ನಿರ್ಮಾಣ:
ಜೇನುಮಲೈ ಶ್ರೀ ರಂಗನಾಥ ಸ್ವಾಮಿ ದೇಗುಲ ನಿರ್ಮಾಣಕ್ಕೆ ಸಿಂಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೆರವಾಗುತ್ತಿದ್ದಾರೆ. ಅನೇಕ ಭಕ್ತರು ಕೂಡಾ ಈ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ಸರ್ಕಾರದಿಂದ ಈವರೆಗೆ ಯಾವುದೇ ಅನುದಾನ ದೊರೆತಿಲ್ಲ.
ದೇಗುಲ ನಿರ್ಮಾಣಕ್ಕೆ ಕೈ ಜೋಡಿಸಲು ಆಸಕ್ತಿ ಇರುವ ಭಕ್ತರು ದೇವಸ್ಥಾನ ಸಮಿತಿಯನ್ನು ಸಂಪರ್ಕಿಸಬಹುದು. ಎಸ್.ಮಂಜುನಾಥ್-9902733720, ರೇವಣಸಿದ್ದಪ್ಪ-7349760195, ಸೂರಪ್ಪ-9740763857.
ಬೆಟ್ಟದಲ್ಲಿವೆ ನೂರಾರು ಜೇನುಗೂಡು:
ಹೆಸರೇ ಹೇಳುವಂರೆ ಜೇನುಮಲೈ ರಂಗನಾಥ ಸ್ವಾಮಿ ಬೆಟ್ಟದಲ್ಲಿ ನೂರಾರು ಜೇನು ಗೂಡುಗಳಿವೆ. ಈ ದೇವರಿಗೆ ಜನ ಜಾನಪ್ಪ, ಜಾನೇ ರಂಗನಾಥ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಭಕ್ತರು ತಪ್ಪು ಮಾಡಿದ್ದರೆ ಈ ಜೇನುಗಳೇ ಅವರಿಗೆ ಸೂಕ್ತ ಮುನ್ನೆಚ್ಚರಿಕೆ ಕೊಡುವ ಪದ್ಧತಿಯಿದೆ. ಈಗಲೂ ಇಲ್ಲಿಗೆ ಬರುವ ಭಕ್ತರು ತನು, ಮನ ಶುದ್ಧಿಯಾಗಿ ಮಡಿಯಿಂದ ಬೆಟ್ಟ ಹತ್ತುವುದು ದೇವರ ಮೇಲೆ ಜನರಿಗೆ ಇರುವ ನಂಬಿಕೆಗೆ ಸಾಕ್ಷಿಯಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
