
CHITRADURGA NEWS | 20 NOVEMBER 2025
ಚಿತ್ರದುರ್ಗ: ಪಡೆದ ಸಾಲ ಹಿಂದಿರುಗಿಸುವಲ್ಲಿ ಜಿಲ್ಲೆಯ ಸ್ವ ಸಹಾಯ ಗುಂಪುಗಳು ಮಾದರಿಯಾಗಿವೆ. ಆದರೆ ಇಲ್ಲಸಲ್ಲದ ಕಾರಣ ಹೇಳಿ ಸ್ವ ಸಹಾಯ ಗುಂಪುಗಳಿಗೆ ಸಾಲ ನಿರಾಕರಣೆ ಮಾಡುವ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿ.ಪಂ. ಸಿಇಓ ಡಾ.ಆಕಾಶ್ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ರಾಘವೇಂದ್ರ ಅವರಿಗೆ ಸೂಚಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ನ.20 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್

ನಗರದ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪ-ಸಹಾಯ ಗುಂಪುಗಳ ಸಾಲ ಅರ್ಜಿ ಪ್ರಕ್ರಿಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಹಾಗೂ ಸರಿಯಾದ ರೀತಿಯಲ್ಲಿ ಸ್ಪಂದಿಸದ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಹಿರಿಯೂರು, ಅರೆಹಳ್ಳಿ ಹಾಗೂ ತಾಳಿಕಟ್ಟೆ ಬ್ರಾಂಚ್‍ಗಳ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಬೇಕು.
2025-26ನೇ ಸಾಲಿಗೆ ಎನ್.ಆರ್.ಎಲ್.ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಅಡಿ 6,766 ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿಪಡಿಸಲಾಗದೆ. ಒಟ್ಟು 2,405 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 2177 ಎಸ್.ಹೆಚ್.ಜಿ ಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. 141 ಅರ್ಜಿಗಳು ಬಾಕಿದ್ದು, 87 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್‍ಗಳು ಬಾಕಿ ಇರುವ ಹಾಗೂ ಆಫ್‍ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸಿಇಓ ಡಾ.ಆಕಾಶ್ ಹೇಳಿದರು.
ಇದನ್ನೂ ಓದಿ: ನ.26 ರಂದು ವಾಹನಗಳ ಬಹಿರಂಗ ಹರಾಜು
ನಾಗರಿಕರಿಂದ ಸಂಗ್ರಹಿಸಿದ ಠೇವಣಿಗೆ ಸಂವಾದಿಯಾಗಿ ಬ್ಯಾಂಕುಗಳು ಸಾಲ ನೀಡುವ ಅನುಪಾತ ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿದೆ. ಆದರೆ ಕೆಲ ಬ್ಯಾಂಕುಗಳು ಶೇ.60 ಸಾಲ ನೀಡುವ ಅನುಪಾತವನ್ನು ನಿರ್ವಹಣೆ ಮಾಡುತ್ತಿಲ್ಲ. ಇನ್ನೂ ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಸೇರಿದಂತೆ ಆದ್ಯತಾ ವಲಯಗಳಿಗೆ ನೀಡುವ ಸಾಲದ ಗುರಿಯ ಪ್ರಮಾಣವನ್ನು ಬ್ಯಾಂಕುಗಳು ಪೂರ್ಣಗೊಳಿಸಬೇಕು.
ಕೇವಲ ಶೇ.50 ಹೆಚ್ಚಿನ ಸಾಧನೆ ಆದರೆ ಸಾಕು ಎನ್ನುವ ಧೋರಣೆಯನ್ನು ಕೈಬಿಡಬೇಕು. ಪಿ.ಎಂ. ಸ್ವನಿಧಿ ಯೋಜನೆಯಡಿ ಎರಡನೇ ಹಾಗೂ ಮೂರನೇ ಹಂತದ ಸಾಲ ನೀಡುವ ಪ್ರಮಾಣ ಹೆಚ್ಚಾಗಬೇಕು ಎಂದು ಸಿಇಓ ಡಾ.ಆಕಾಶ್ ತಿಳಿಸಿದರು.
ಸಭೆಗೆ ಪ್ರಮುಖ ಬ್ಯಾಂಕ್ ಅಧಿಕಾರಿಗಳು ಗೈರು ಹಾಜರಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಿಇಓ ಡಾ.ಆಕಾಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ನಿರ್ದೇಶನ ನೀಡಿದರು. ಸಭೆ ನಡಾವಳಿಯಲ್ಲಿ ಗೈರು ಹಾಜರಾದ ಬ್ಯಾಂಕ್ ಅಧಿಕಾರಿಗಳು ಸ್ವತಃ ಸಿಇಓ ಅವರ ಸಮ್ಮುಖದಲ್ಲಿ ಹಾಜರಾಗಿ ಸ್ಪಷ್ಟೀಕರಣ ನೀಡವಂತೆ ದಾಖಲಿಸಲಾಯಿತು.
ಇದನ್ನೂ ಓದಿ: ಹಾಸ್ಟೆಲ್‍ಗಳಲ್ಲಿನ ಹೊರಗುತ್ತಿಗೆ ನೌಕರರಿಗೆ ನಿಯಮಾನುಸಾರ ವೇತನ ನೀಡಿ | ADC ಸೂಚನೆ
ಡಿಸೆಂಬರ್ ಅಂತ್ಯದವರೆಗೆ ಎಲ್ಲಾ ಬ್ಯಾಂಕುಗಳಲ್ಲಿನ ಖಾತೆಗಳಲ್ಲಿ ಇತ್ಯರ್ಥವಾಗದೆ ಉಳಿದ ಹಣದ ವಿಲೇವಾರಿಗೆ ಅಭಿಯಾನ ನಡೆಸಲಾಗುತ್ತಿದೆ. ನಿಷ್ಕ್ರಿಯ ಖಾತೆಯಲ್ಲಿ ಅತ್ಯಂತ ಹೆಚ್ಚು ಹಣ ಹೊಂದಿರುವವರು, ಹಕ್ಕು ಪಡೆಯದ ಠೇವಣಿಗಳು, 60 ವರ್ಷ ಮೇಲ್ಪಟ್ಟವರು, ನಿಷ್ಕ್ರಿಯಗೊಂಡ ಖಾತೆಯಲ್ಲಿರುವ ಸರ್ಕಾರಿ ಠೇವಣಿಗಳನ್ನು ಗುರುತಿಸಿ ಇತ್ಯರ್ಥ ಪಡಿಸಲು ಬ್ಯಾಂಕ್ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಆರ್.ಬಿ.ಐ ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಬುಬಲ್ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 258 ಬ್ಯಾಂಕ್ ಶಾಖೆಗಳು ಇದ್ದು, ಒಟ್ಟು ರೂ.11,190.83 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು ರೂ.13,261.17 ಕೋಟಿ ಸಾಲ ನೀಡಲಾಗಿದೆ. ಜಿಲ್ಲೆಯ ಒಟ್ಟಾರೆ ಠೇವಣಿ ಹಾಗೂ ಸಾಲ ಅನುಪಾತ ಶೇ.118.5 ರಷ್ಟಿದೆ. ಪ್ರಸಕ್ತ ವರ್ಷದಲ್ಲಿ ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಸೇರಿದಂತೆ ಆದ್ಯತಾ ವಲಯಗಳಿಗೆ ರೂ.9783.59 ಕೋಟಿ ಸಾಲ ನೀಡುವ ಗುರಿಯ ಪೈಕಿ ರೂ.5599.37 ಕೋಟಿ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ.ಎಂ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿ.ಎಂ.ಎಫ್.ಎಂ.ಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 65 ಅರ್ಜಿಗಳು ಸ್ವೀಕೃತವಾಗಿವೆ. ಇದುವರೆಗೆ 28 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ GSJB ರಾಷ್ಟ್ರ ಪ್ರಶಸ್ತಿ
28 ಅರ್ಜಿಗಳು ಬಾಕಿಯಿವೆ. 9 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಬ್ಯಾಂಕ್‍ಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಬಾಕಿ ಇರುವ 28 ಅರ್ಜಿಗಳ ಪೈಕಿ ಕೆನರಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಲಾ 9 ಅರ್ಜಿಗಳು ಬಾಕಿಯಿವೆ. ಉಳಿದಂತೆ ಇತರೆ ಬ್ಯಾಂಕ್‍ಗಳಲ್ಲಿ ಒಂದು ಅಥವಾ ಎರೆಡು ಅರ್ಜಿಗಳು ಬಾಕಿಯಿವೆ ಎಂದು ಹೇಳಿದರು.
ಜಿ.ಪಂ. ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್.ಕೆ, ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು, ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
