
CHITRADURGA NEWS | 20 NOVEMBER 2025
ಚಿತ್ರದುರ್ಗ: ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನಿಯಮಾನುಸಾರ ವೇತನ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಇದನ್ನೂ ಓದಿ: ನವೆಂಬರ್ 20 | ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ನಗರದ ಜಿಲ್ಲಾಧಿಕಾರಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊರಗುತ್ತಿಗೆ ನೌಕರರ ಸೇವೆ ಒದಗಿಸುವ ಏಜೆನ್ಸಿಗಳು ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರಯಬೇಕು. ಸರ್ಕಾರದಿಂದ ಅನುದಾನ ಬರುವುದು ತಡವಾದರೂ ನಿಯಮಗಳಂತೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ನೀಡುವುದು ಏಜೆನ್ಸಿಗಳ ಜವಾಬ್ದಾರಿಯಾಗಿದೆ. ಇವುಗಳನ್ನು ಟೆಂಡರ್ ಬಿಡ್‍ನಲ್ಲಿ ಸಷ್ಟವಾಗಿ ನಮೂದಿಸಲಾಗಿರುತ್ತದೆ. ಒಂದು ವೇಳೆ ವೇತನ ನೀಡುವುದು ವಿಳಂಬವಾದರೆ ಅಂತಹ ಏಜೆನ್ಸಿಗಳಿಗೆ ನೋಟಿಸ್ ನೀಡಿ ನಿಯಮಗಳ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.
ಯಾವ ಕೆಲಸಕ್ಕಾಗಿ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿರುತ್ತದೆಯೋ ಅದೇ ಕೆಲಸಕ್ಕೆ ಮಾತ್ರ ನೌಕರರನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿರಂತರವಾಗಿ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ, ಆಹಾರ ಗುಣಮಟ್ಟ, ಮಕ್ಕಳ ಆರೋಗ್ಯ, ಶೈಕ್ಷಣಿಕ ಸ್ಥಿತಿಗತಿ ಹಾಗೂ ಹೊರಗುತ್ತಿಗೆ ನೌಕರರ ಅಹವಾಲುಗಳನ್ನು ಆಲಿಸಬೇಕು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ GSJB ರಾಷ್ಟ್ರ ಪ್ರಶಸ್ತಿ
ಮಕ್ಕಳು ಹಾಸ್ಟೆಲ್‍ಗಳಲ್ಲಿ ಏಕಾಗ್ರತೆಯಿಂದ ಓದಲು ಅಗತ್ಯವಿರುವ ವಾತಾವರಣ ನಿರ್ಮಿಸಬೇಕು. ಖಾಸಗಿ ಕಟ್ಟಡದಲ್ಲಿರುವ ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೆ, ಒದಗಿಸಲು ತಿಳಿಸಬೇಕು, ಇಲ್ಲವೇ ಕೂಡಲೆ ಕಟ್ಟಡಗಳನ್ನು ಬದಲಿಸಬೇಕು. ಸರ್ಕಾರ ನೀಡಿರುವ ಸವಲತ್ತುಗಳನ್ನು ಮಕ್ಕಳಿಗೆ ತಲುಪಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಹೊರಗುತ್ತಿಗೆ ನೌಕರರ ನೇಮಕಾತಿ ಆದೇಶ ನೀಡುವುದರೊಂದಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಬೇಕು. 50 ಮಕ್ಕಳಿಗೆ ಮೂವರು ನೌಕರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಹೆಚ್ಚುವರಿ ವಿದ್ಯಾರ್ಥಿಗಳು ಇರುವ ಹಾಸ್ಟೆಲ್‍ಗಳಲ್ಲಿ ಸಂಖ್ಯೆಗೆ ಅನುಗುಣವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಬೇಕು. ಹೀಗೆ ನೇಮಿಸಿಕೊಳ್ಳುವಾಗ ಈ ಹಿಂದೆ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸಿ ಅನುಭವ ಇರುವವರಿಗೆ ಆದ್ಯತೆ ನೀಡಬೇಕು. ಅಡುಗೆ ಸಹಾಯಕರನ್ನು ಸ್ವಚ್ಛತೆ ಕಾರ್ಯಕ್ಕೆ ನೇಮಿಸಬಾರದು.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಸಹಾನುಭೂತಿಯಿಂದ ಕಂಡು, ಕಾನೂನಿನ ಚೌಕಟ್ಟಿನ ಒಳಗೆ ಅವರಿಗೆ ಸಹಾಯ ಮಾಡಬೇಕು. ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿಗೆ ಒತ್ತು ನೀಡಬೇಕು. ಕುಂದುಕೊರತೆ ಹಾಗೂ ಪುನಶ್ಚೇತನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.
ಇದನ್ನೂ ಓದಿ: ವಿಕಲಚೇತನರಿಗೆ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ | ಜೆ.ವೈಶಾಲಿ
ಹೊರಗುತ್ತಿಗೆ ನೌಕರರು ನಿಯಮಾನುಸಾರ ಕೆಲಸ ನಿರ್ವಹಿಸಲು ಅಸಹಕಾರ ತೋರುವುದು, ಸಂಘಟನೆಗಳೊಂದಿಗೆ ಸೇರಿ ಇತರೆ ಚಟುವಟಿಕೆಗಳಲ್ಲಿ ತೊಡಗುವುದು ಮಾಡಿದರೆ ಮುಲಾಜು ತೊರದೆ ಅವರ ಸೇವೆಯನ್ನು ಕಡಿತಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಹೊರಗುತ್ತಿಗೆ ನೌಕರರ ಪ್ರತಿನಿಧಿಗಳು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

