
CHITRADURGA NEWS | 04 NOVEMBER 2025
ಚಿತ್ರದುರ್ಗ: ಎಸ್.ಜೆ.ಎಂ.ವಿದ್ಯಾಪೀಠ, ರಂಗಸೌರಭ ಕಲಾ ಸಂಘ, ದೀವಿಗೆ ಎಜುಕೇಷನ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ನೀನಾಸಂ ತಿರುಗಾಟದ ನಾಟಕಗಳು ನವಂಬರ್ 07 ಮತ್ತು 08 ರಂದು ಶ್ರೀ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿವೆ.
ಇದನ್ನೂ ಓದಿ: ವಲ್ಲಭಬಾಯಿ ಪಟೇಲ್‍ರವರ 150 ನೇ ಜನ್ಮದಿನಾಚರಣೆ | ನ.12 ರಂದು ಏಕತಾ ನಡಿಗೆ ಅಂದೋಲನ

ನ.7 ರಂದು ಸಂಜೆ 6.30 ಗಂಟೆಗೆ ಅಂತರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ವಿರಚಿತ ಕಥೆಯನ್ನು ಆಧರಿಸಿದ ರಂಗಪ್ರಸ್ತುತಿ. ರಂಗ ನಿರ್ದೇಶಕ ಡಾ.ಎಂ.ಗಣೇಶ್ ರಂಗರೂಪ ಮತ್ತು ನಿರ್ದೇಶನದ ನೀನಾಸಂ ತಿರುಗಾಟದ ನಾಟಕ ಹೃದಯದ ತೀರ್ಪು ಪ್ರದರ್ಶನಗೊಳ್ಳಲಿದೆ.
ಹೃದಯದ ತೀರ್ಪು :
ಒಂದು ವಿಶಿಷ್ಟ ಸಾಂಸಾರಿಕ ವೃತ್ತಾಂತ. ಹಣ್ಣಿನಂಗಡಿ ನಡೆಸುತ್ತಿರುವ ಯೂಸುಫ್ ತಾಯಿ ಮೆಹಬೂಬೀ ಮತ್ತು ಹೆಂಡತಿ ಅಖಿಲಾಳೊಂದಿಗೆ ಸಾಕಷ್ಟು ಅನುಕೂಲವಾಗಿಯೇ ಇದ್ದರೂ ಒಂದು ಸಮಸ್ಯೆ ಅವನ ಬೆನ್ನು ಹತ್ತಿದೆ. ಅವನ ಹೆಂಡತಿಗೆ ತನ್ನ ಗಂಡನು ತಾಯಿಗೆ ಕೊಡುವ ಗಮನವು ಮತ್ಸರಕ್ಕೆ ಕಾರಣವಾಗಿದೆ.
ಈ ಕಾರಣಕ್ಕಾಗಿ ಯೂಸುಫ್ ತಾಯಿಯನ್ನು ಬೇರೆ ಮನೆಯಲ್ಲಿರಿಸುತ್ತಾನೆ. ತಾಯಿಗೆ ತರುವ ವಸ್ತುಗಳನ್ನೆಲ್ಲ ಹೆಂಡತಿಗೂ ತರುತ್ತಾನೆ. ಹಾಗಿದ್ದರೂ ಸಮಸ್ಯೆ ಪರಿಹಾರವಾಗದೆ ಗಂಡ ಹೆಂಡಿರ ನಡುವೆ ಜಗಳಗಳು ನಡೆಯುತ್ತವೆ. ಅಂಥ ಒಂದು ಜಗಳದ ಉತ್ತುಂಗದಲ್ಲಿ ತನ್ನ ತಾಯಿಗೆ ಬೇರೊಂದು ಮದುವೆ ಮಾಡಿಸುವುದಾಗಿ ಯೂಸುಫನ ಬಾಯಲ್ಲಿ ಬಂದ ಅಚಾನಕ್ ಮಾತು ಆಮೇಲೆ ಆಹಾದಿಯಲ್ಲಿ ಆತ ಮುನ್ನಡೆಯಲು ಪ್ರೇರಕವಾಗುತ್ತದೆ.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 3 | ಯಾವ ಅಡಿಕೆಗೆ ಎಷ್ಟು ರೇಟ್
ಆದರೆ ಅದರಿಂದ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿ, ಸ್ವತಃ ಯೂಸುಫನ ಹೆಂಡತಿ ಅತ್ತೆಯ ಮದುವೆ ನಿಲ್ಲಿಸಲು ಊರವರಿಂದ ಪಂಚಾಯ್ತಿ ಮಾಡಿಸುತ್ತಾಳೆ. ಆ ಉತ್ತುಂಗದಲ್ಲಿ ತಾಯಿಯೇ ತನ್ನ ಮಗನ ಪ್ರಸ್ತಾಪವನ್ನ ಸಮರ್ಥಿಸುತ್ತಾ, ಮಗ ಸೊಸೆಯನ್ನು ಬಿಟ್ಟು ಸಾಗುವ ಆರ್ದ್ರ ಕ್ಷಣದೊಂದಿಗೆ ಕಥೆ ಮುಗಿಯುತ್ತದೆ.
ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುವತ್ತ ಸಾಗುವ ಈ ಕಥೆಯನ್ನು ರಂಗದ ಮೇಲೆ ಕಟ್ಟುವ ಉತ್ಸಾಹದಿಂದ ಪ್ರಸ್ತುತ ಪ್ರಯೋಗ ಉದ್ಯುಕ್ತವಾಗಿದೆ.
ನ.08 ಸಂಜೆ 6.30 ಗಂಟೆಗೆ ನಾಟಕಕಾರ ಜಿ.ಶಂಕರಪಿಳ್ಳೆ ರಚಿಸಿರುವ ನಾ. ದಾಮೋದರಶೆಟ್ಟಿ ಕನ್ನಡಕ್ಕೆ ಅನುವಾದಿಸಿರುವ ನೀನಾಸಂ ತಿರುಗಾಟದ ಅವತರಣಮ್ ಭ್ರಾಂತಾಲಯಮ್ ನಾಟಕವು ಶಂಕರ ವೆಂಕಟೇಶ್ವರನ್ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಅವತರಣಮ್ ಭ್ರಾಂತಾಲಯಮ್ :
ಹುಚ್ಚಾಸ್ಪತ್ರೆಯ ರೋಗಿಗಳು ಸೇರಿ ಪ್ರಸ್ತುತಪಡಿಸುವ ಒಂದು ನಾಟಕ. ಆದರೆ ಈ ನಾಟಕವು ಹುಚ್ಚರನ್ನು ಕುರಿತದ್ದಲ್ಲ, ನಾಟಕವನ್ನು ಕುರಿತದ್ದು. ಇಲ್ಲಿ ನಟರು ನಿರ್ದೇಶಕನಿಗೇ ಅರಿವಳಿಕೆ ಕೊಟ್ಟು ಮಲಗಿಸುತ್ತಾರೆ. ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ.
ಇದನ್ನೂ ಓದಿ: ಕೇರಳದ ಕಣ್ಣೂರಿನಲ್ಲಿ ಚಿತ್ರದುರ್ಗದ ಮೆಡಿಕಲ್ ವಿದ್ಯಾರ್ಥಿ ಸಾವು
ಈ ಜಗತ್ತಿನ ಅತ್ಯಂತ ದೊಡ್ಡದಾದ ಶಬ್ದವನ್ನು ಕೇಳಬೇಕೆಂದು ಹಂಬಲಿಸುತ್ತಿರುವ ಒಬ್ಬ ರಾಜನ ಕಥೆಯನ್ನು ಹೇಳಲು ಹೊರಟ ಈ ನಾಟಕದೊಳಗೆ ಶಬ್ದಗಳು ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ. ನಟರು ಪಾತ್ರಗಳನ್ನು ಮಿಕ್ಕು ಬೆಳೆಯುತ್ತಾರೆ.
ಕಥೆ ದಿಕ್ಕು ತಪ್ಪಿ ಹರಿಯುತ್ತದೆ. ರಂಗಕ್ರಿಯೆಗಳು ತರ್ಕದ ಗೆರೆ ದಾಟುತ್ತವೆ. ಇದೆಲ್ಲದರ ಫಲವಾಗಿ ಹುಟ್ಟುವ ಹುಚ್ಚಾಟಗಳು ಕೇವಲ ಹುಚ್ಚುತನದ ಪ್ರದರ್ಶನಕ್ಕಾಗಿ ಹುಟ್ಟಿದ್ದಲ್ಲ, ಬದಲು, ರಂಗಭೂಮಿಯ ಅರ್ಥಕ್ಕಾಗಿ ದುಡಿಯಬೇಕೆಂಬ ಅಪೇಕ್ಷೆಯ ವಿರುದ್ಧ ಮತ್ತು ಸದಾ ಗಾಂಭೀರ್ಯವನ್ನು ಧಾರಣೆ ಮಾಡಬೇಕೆಂಬ ಐತಿಹಾಸಿಕ ಆಕಾಂಕ್ಷೆಗಳ ವಿರುದ್ಧ ನಡೆಯುವ ಪ್ರತಿರೋಧ.
ಆದ್ದರಿಂದ ಅರ್ಥಹೀನತೆಯೆಂಬುದು ಇಲ್ಲಿ ಒಂದು ಇತ್ಯಾತ್ಮಕ ಮುದ್ರೆಯಾಗಬೇಕೆಂಬ ಹಂಬಲ ಈ ಪ್ರಯೋಗದ ಹಿಂದಿದೆ. ಆ ಮೂಲಕ ರಂಗಭೂಮಿಯು ಪ್ರಪಂಚದ ವಿವರಣೆಯಾಗಬೇಕೆಂಬ ಒತ್ತಡವನ್ನು ನಿರೋಧಿಸಿ ಆ ಮಾಧ್ಯಮವನ್ನು ಅದರ ಆದಿರೂಪಕ್ಕೆ ಒಯ್ಯಲು ಈ ಪ್ರಯೋಗ ಸಂಕಲ್ಪಿಸುತ್ತದೆ. ಮತ್ತು ತತ್ಫಲವಾಗಿ, ಜೀವಂತವಾಗಿಯೂ ಅನಿಶ್ಚಿತವಾಗಿಯೂ ಅಸಂಬದ್ಧವಾಗಿಯೂ ಇರುವ ಮಾನವ ಪ್ರಾಣಿಯನ್ನು ಕೇಂದ್ರದಲ್ಲಿಟ್ಟು ಕಾಣಿಸಲು ಹವಣಿಸುತ್ತದೆ.
ಇದನ್ನೂ ಓದಿ: ನ.05 ರಂದು ಚಿತ್ರದುರ್ಗದಲ್ಲಿ ಸುವರ್ಣ ಮಹೋತ್ಸವ | ವ್ಯವಸ್ಥಿತ ಆಯೋಜನೆಗೆ ಕ್ರಮ ವಹಿಸಿ | ಡಿಸಿ
ಜಿಲ್ಲೆಯ ನಾಗರೀಕರು, ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ರಂಗಾಸಕ್ತರು, ಕಲಾವಿದರು, ಸಾಹಿತಿಗಳು ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೀನಾಸಂ ತಿರುಗಾಟ 2025 ನಾಟಕ ಪ್ರದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
