ಮುಖ್ಯ ಸುದ್ದಿ
ಮಾಯಾವಿ ಸಿನಿಮಾ ಮುಹೂರ್ತ | ದುರ್ಗದ ಯುವ ಪ್ರತಿಭೆ ಬೆಳ್ಳಿ ತೆರೆಗೆ | ಶಾಂತವೀರ ಶ್ರೀ ಭಾಗೀ

CHITRADURGA NEWS | 17 JANUARY 2025
ಚಿತ್ರದುರ್ಗ: ಕೋಟೆನಾಡಿನ ಯುವ ಪ್ರತಿಭೆ ರಘುರಾಮ್ ನಾಯಕರಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ಮಾಯಾವಿ ಚಿತ್ರಕ್ಕೆ ಶುಕ್ರವಾರ ಮುಹೂರ್ತ ನಡೆಯಿತು.
Also Read: ಶಿವಮೊಗ್ಗ ಚಿತ್ರದುರ್ಗ ನಡುವೆ ರೈಲು ಮಾರ್ಗ | ಬಿ.ವೈ.ರಾಘವೇಂದ್ರ ಪ್ರಸ್ತಾವನೆ

ನಗರದ ಬೆಟ್ಟದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಚಿತ್ರತಂಡವು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಾಗೂ ಕುಂಚಿಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಈ ವೇಳೆ ಶ್ರೀ ಶಾಂತವೀರ ಸ್ವಾಮೀಜಿ ಚಿತ್ರ ತಂಡಕ್ಕೆ ಶುಭಾಶಯ ಕೋರಿದ ಮಾತನಾಡಿ, ಹೊಸ ಪ್ರಯತ್ನ, ಹೊಸ ಕಲಾವಿದರು, ಹೊಸ ಚಿಂತನೆಗಳೊಂದಿಗೆ ಹೊಸತನ್ನು ಮಾಡುವ ಹಂಬಲದೊಂದಿಗೆ ಈ ತಂಡ ತನ್ನ ಅನುಭವಗಳನ್ನು ಸಿನಿಮಾ ಮೂಲಕ ಹೇಳುವುದಕ್ಕಾಗಿ ಬಂದಿದೆ.
ವಿಶೇಷವಾಗಿ ಮಠದ ಭಕ್ತರು, ಜಿಲ್ಲೆಯವರೇ ಆದ ಯುವ ಪ್ರತಿಭೆ ರಘುರಾಮ್ ಅವರು ನಾಯಕ ನಟನಾಗಿ ಬೆಳ್ಳಿ ತೆರೆಗೆ ಕಾಲಿಡುತ್ತಿರುವುದು ತುಂಬಾ ಸಂತಸ ತಂದಿದೆ.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್
ಒಂದೊಳ್ಳೆಯ ಪ್ರಯತ್ನದೊಂದಿಗೆ ತಮ್ಮ ಅನುಭವಗಳನ್ನು ಹೇಳಿಕೊಳ್ಳುವ ಹಂಬಲದಲ್ಲಿರುವ ಈ ತಂಡಕ್ಕೆ ಜನರ ಸಹಕಾರವೂ ಬೇಕಿದೆ ಎಂದು ಹೇಳಿದರು.
ಸಿನಿಮಾ ಮಾತ್ರವಲ್ಲ ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲೂ ಹೊಸಬರು ಬರಬೇಕು, ಹೊಸ ಆಲೋಚನೆಗಳು ಹುಟ್ಟಿಕೊಳ್ಳಬೇಕು. ಯಾವುದು ಕೂಡ ನಿಂತ ನೀರಾಗಬಾರದು. ಎಲ್ಲದಕ್ಕೂ ಚಲನಶೀಲತೆ ಬರಬೇಕಾದರೆ ಹೊಸ ಪ್ರಯತ್ನಗಳು, ಹೊಸ ಆಲೋಚನೆಗಳು, ಹೊಸ ಅನುಭಗಳು ಮೇಳೈಸಿಕೊಳ್ಳಬೇಕು, ಆಗ ಮಾತ್ರ ಎಲ್ಲಾ ರಂಗಕ್ಕೂ ಒಂದು ಚಲನಶೀಲತೆ ಬರುತ್ತದೆ.
ಆ ನಿಟ್ಟಿನಲ್ಲಿ ಇವತ್ತು ಸಿನಿಮಾ ರಂಗ ಯುವ ಪ್ರತಿಭೆಗಳ ಮೂಲಕ ಪ್ರಜ್ವಲಿಸುತ್ತಿದೆ. ಆ ಸಾಲಿನಲ್ಲಿ ನಮ್ಮ ಜಿಲ್ಲೆಯವರೇ ಆದ ರಘುರಾಮ್ ಅವರಂತಹ ಯುವ ಪ್ರತಿಭೆ ಪ್ರಜ್ವಲಿಸಬೇಕು ಎಂದರು.
ಹೊಸಬರಿಗೆ ವೇದಿಕೆಗಳು ಅಗತ್ಯ. ಇವತ್ತು ಚಿತ್ರದುರ್ಗದವರೇ ಆದ ಗಿಲ್ಲಿ ಎನ್ನುವ ನಟ ಇವತ್ತು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ದೊಡ್ಡ ದೊಡ್ಡ ನಟರು ಆತನ ಕಲೆಯನ್ನು ಮೆಚ್ಚಿಕೊಂಡು ಮಾತನಾಡುವಂತಹ ವಾತಾವರಣ ನಿರ್ಮಾಣವಾಗಿದೆ.
Also Read: ನಾಳೆ ಮುಖ್ಯಮಂತ್ರಿ ಬರಲ್ಲ | ಬಾಗೀನ ಕಾರ್ಯಕ್ರಮ ಮುಂದೂಡಿಕೆ
ಅದಕ್ಕೆ ಕಾರಣವೇ ಸೂಕ್ತ ವೇದಿಕೆ ಸಿಕ್ಕಿದ್ದು. ಅಂತಹ ಸಾಕಷ್ಟು ಪ್ರತಿಭೆಗಳು ಎಲೆಮರೆಯ ಕಾಯಿಗಳಂತೆ ಗ್ರಾಮೀಣ ಭಾಗದಲ್ಲಿವೆ. ಅವೆಲ್ಲವಕ್ಕೂ ವೇದಿಕೆ ಸಿಗಬೇಕು. ಸಿನಿಮಾವೂ ಒಂದು ವೇದಿಕೆ. ಅಲ್ಲಿ ಒಳ್ಳೆಯ ನಟನಾಗಿ ಗುರುತಿಸಿಕೊಂಡರೆ ಜನಪ್ರಿಯತೆ ಜತೆಗೆ ದುಡಿಮೆಯೂ ಆಗುತ್ತದೆ.
ಹಾಗಂತ ಅಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಸಿನಿಮಾ ಮಾಡಿಯೂ ಹಣ ಮಾಡುತ್ತೇನೆನ್ನುವುದು ಕೂಡ ಅಷ್ಟು ಸರಳ ಇಲ್ಲ, ಒಟಿಟಿ, ಪೈರಸಿ ಬಂದ ಮೇಲೆ ಸಿನಿಮಾ ನಿರ್ಮಾಣ ದೊಡ್ಡ ಸವಾಲಾಗಿ ಏರ್ಪಟ್ಟಿದೆ. ಅವೆಲ್ಲವನ್ನು ಮೀರಿ ಈ ತಂಡ ಸಕ್ಸಸ್ ಕಾಣಲಿ ಎಂದು ಶ್ರೀಗಳು ಹಾರೈಸಿದರು.
ಮಹೇಶ್ವರಪ್ಪ ಚಕ್ರಸಾಲಿ ಮತ್ತು ರೂಪ ನಿರ್ಮಾಣದ ಈ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ಉಗ್ರಾವತಾರ ಎನ್ನುವ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಮಾಯಾವಿ ಮೂಲಕ ಅವರು ಬಡ್ತಿ ಪಡೆದಿದ್ದಾರೆ.
ಕಥೆ, ಚಿತ್ರಕಥೆ ಬರೆಯುವ ಮೂಲಕ ನಿರ್ದೇಶನದ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಗುರುದತ್ತ ಮುಸೂರಿ ಛಾಯಾಗ್ರಹಣ ಮಾಡುತ್ತಿದ್ದು, ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಇನ್ನು ರಘು ರಾಮ್ ನಾಯಕರಾಗಿರುವ ಈ ಚಿತ್ರಕ್ಕೆ ನಿಶ್ಚಿತ ಶೆಟ್ಟಿ ನಾಯಕಿ. ಅವರೊಂದಿಗೆ ಹಿರಿಯ ಕಲಾವಿದ ಎಂ.ಕೆ. ಮಠ, ಸುರೇಶ್ ಬಾಬು ಸೇರಿದಂತೆ ಅನುಭವಿ ಕಲಾವಿದರ ತಂಡವೇ ಇದೆ.
Also Read: ಜಿಲ್ಲಾ ಕೃಷಿಕ ಸಮಾಜದ ಚುನಾವಣೆ | ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಈ ಸಂದರ್ಭದಲ್ಲಿ ಭೋವಿ ಮಹಾಸಂಸ್ಥಾನದ ಆಡಳಿತಾಧಿಕಾರಿ ಗೋವಿಂದಪ್ಪ ಸೇರಿದಂತೆ ಇತರರು ಇದ್ದರು.
“ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳ ಜತೆಗೆ ನವೀರಾದ ಪ್ರೇಮ ಕಥಾ ಹಂದರದ ಈ ಚಿತ್ರಕ್ಕೆ ಒಟ್ಟು 50 ದಿನಗಳ ಕಾಲ ಚಿತ್ರದುರ್ಗ, ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಹೊಸ ಪ್ರಯತ್ನದಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸದಾದ ಒಂದು ಒಳ್ಳೆಯ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ನಮ್ಮನ್ನು ನಾವು ಭಿನ್ನವಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದೇವೆ.”
| ರಘುರಾಮ್, ನಾಯಕ ನಟ
