
ಚಿತ್ರದುರ್ಗನ್ಯೂಸ್.ಕಾಂ
ಕುಸ್ತಿ ಅಖಾಡ, ಜಗಜಟ್ಟಿಗಳಿಗೆ ಹೆಸರಾಗಿದ್ದ ಕೋಟೆನಾಡು ಚಿತ್ರದುರ್ಗ ಮೈಸೂರಿಂತೆಯೇ ಪೈಲ್ವಾನ್‍ಗಳ ತವರು. ರಾಜರು, ಪಾಳೇಗಾರರ ಆಳ್ವಿಕೆಯ ಕಾಲದಿಂದಲೂ ಇಲ್ಲಿ ಪೈಲ್ವಾನ್‍ಗಳಿಗೆ ವಿಶೇಷ ಮನ್ನಣೆ ಇತ್ತು. ಪೈಲ್ವಾನರು ಸಾಮು ತೆಗೆದು ದೇಹ ದಂಡಿಸಲು ಊರ ತುಂಬೆಲ್ಲಾ ಗರಡಿ ಮನೆಗಳೂ ಇದ್ದವು. ಇದಕ್ಕೆ ವಿಶೇಷ ನಿದರ್ಶನ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದಲ್ಲೂ ಗರಡಿ ಮನೆಯನ್ನು ಕಾಣಬಹುದು.
ಹೀಗೆ ಕುಸ್ತಿಪಟುಗಳು, ಕುಸ್ತಿ ಪಂದ್ಯ ಹಾಗೂ ಗರಡಿ ಮನೆಗಳನ್ನು ಇಂದಿಗೂ ಚಿತ್ರದುರ್ಗದ ಸಂಪ್ರದಾಯವೆಂಬಂತೆ ಉಳಿಸಿಕೊಂಡಿದ್ದು, ಇಲ್ಲಿ ಇಂದಿಗೂ ಅನೇಕ ಯುವಕರು ತರಬೇತಿ ಪಡೆಯುತ್ತಾರೆ. ಹೀಗೆ ಸಾಮು ತೆಗೆಯುವ ಗರಡಿ ಮನೆಗಳಲ್ಲಿ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವುದು ವಾಡಿಕೆ.
ಗರಡಿ ಮನೆಯ ವೈಭವದ ದಿನಗಳಲ್ಲಿ ವರ್ಷಕ್ಕೊಮ್ಮೆ ನೂಲು ಹುಣ್ಣಿಮೆ ಸಂದರ್ಭದಲ್ಲಿ ಮಟ್ಟಿ ಪೂಜೆ ನಡೆಯುತ್ತಿತ್ತು. ಇಂದಿಗೂ ಈ ಆಚರಣೆಯನ್ನು ದುರ್ಗದ ಯುವಕರು ಉಳಿಸಿಕೊಂಡು ಬಂದಿದ್ದಾರೆ. ಸೆಪ್ಟಂಬರ್ 2 ಶನಿವಾರ ಮತ್ತು ಭಾನುವಾರ ಈ ಪೂಜೆಯ ಆಚರಣೆಗ ಬುರುಜನಹಟ್ಟಿಯ ಗರಡಿ ಮನೆಯಲ್ಲಿ ವಿಶೇಷವಾಗಿ ನಡೆಯುತ್ತಿದೆ.
ನೂಲು ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಬುರುಜನಹಟ್ಟಿ ಗರಡಿ ಮನೆಯಲ್ಲಿ ಬುರುಜನಹಟ್ಟಿ ಗರಡಿ ಯುವಕರ ಸಂಘದಿಂದ ವಿಜೃಂಭಣೆ ಹಾಗೂ ಅದ್ಧೂರಿಯಾಗಿ ಮಟ್ಟಿ ಪೂಜಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಗರಡಿಯ ಅಖಾಡದ ಮಣ್ಣಿಗೆ ಹರಿಶಿಣ, ಕುಂಕುಮ, ಹಾಲು, ತುಪ್ಪ ಹಾಕಿ ಹದ ಮಾಡಿ ಶಾಸ್ತ್ರಬದ್ಧವಾಗಿ ಸಿದ್ದಪಡಿಸಿದ್ದ ಮಟ್ಟಿಗೆ ಕೊಳಲು ನುಡಿಸುತ್ತಿರುವ ಶ್ರೀಕೃಷ್ಣ, ಮಧ್ಯ ಭಾಗದಲ್ಲಿ ಶ್ರೀ ಆಂಜನೇಯ, ಶ್ರೀಕೃಷ್ಣನ ತಲೆಯ ಮೇಲೆ ಐದು ಹೆಡೆಯ ಸರ್ಪದ ಮಾದರಿಯನ್ನು ರಚಿಸಿ ಆಕರ್ಷಕವಾಗಿ ಮಟ್ಟಿಯನ್ನು ಅಲಂಕರಿಸಲಾಗಿತ್ತು. ಮಟ್ಟಿ ಪೂಜಾ ಮಹೋತ್ಸವದ ಪ್ರಯುಕ್ತ ಗರಡಿ ಮನೆಯಲ್ಲಿನ ಶ್ರೀ ಗೋಪಾಲ ಕೃಷ್ಣಸ್ವಾಮಿ, ಶ್ರೀ ಆಂಜನೇಯಸ್ವಾಮಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲದೇ ಜಟ್ಟಿಗಳು ವ್ಯಾಯಾಮಕ್ಕೆ ಬಳಸುವ ಎಲ್ಲಾ ರೀತಿಯ ಉಪಕರಣಗಳಿಗೂ ಅಲಂಕಾರ ಮಾಡಲಾಗಿತ್ತು. ಸಂಜೆ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಪ್ರಸಾದ ವಿನಿಯೋಗಿಸಲಾಯಿತು.
ಗರಡಿ ಮನೆಯನ್ನು ಸುಣ್ಣ ಬಣ್ಣ, ವಿದ್ಯುತ್ ದೀಪಗಳಿಂದ ಝಗಮಗ ಎನ್ನುವಂತೆ ಮಾಡಲಾಗಿತ್ತು. ಗರಡಿ ಮನೆ ರಸ್ತೆಯನ್ನು ಕೂಡ ವಿದ್ಯುತ್ ಸರ ಮಾಲೆಗಳಿಂದ ಅಲಂಕರಿಸಲಾಗಿತ್ತು. ಬುರುಜನಹಟ್ಟಿ ಗರಡಿ ಮನೆ ಯುವಕರ ಸಂಘದ ಪದಾಧಿಕಾರಿಗಳು, ಗರಡಿಮನೆ ಯುವಕರು ಉಪಸ್ಥಿತರಿದ್ದರು. ಯುವಕರು ಸೇರಿದಂತೆ ಸ್ಥಳೀಯರು ಗರಡಿ ಮನೆಗೆ ಭೇಟಿ ನೀಡಿ ಮಟ್ಟಿಯ ದರ್ಶನ ಪಡೆದು ಅತ್ಯಾಕರ್ಷಕ ಅಲಂಕಾರವನ್ನು ಕಣ್ತುಂಬಿಕೊಂಡರು.
ತೆಂಗಿನ ಕಾಯಿ ಹುಡುಕಿದವರಿಗೆ ವರ್ಷದ ಪೈಲ್ವಾನ ಪಟ್ಟ:
ಇನ್ನೂ ಮಟ್ಟಿ ಒಳಗೆ ತೆಂಗಿನ ಕಾಯಿ ಇರಿಸಿದ್ದು, ಭಾನುವಾರ ಮುಂಜಾನೆ ಪೈಲ್ವಾನರು ಅಖಾಡಕ್ಕೆ ಇಳಿದು ಯಾವುದೇ ಆಯುಧ ಅಥವಾ ಉಪಕರಣ ಬಳಸದೆ ಕೇವಲ ಕೈಯಿಂದಲೇ ಮಟ್ಟಿ ಒಡೆಯಡಲಾಗುತ್ತದೆ. ಈ ರೀತಿ ಮಟ್ಟಿ ಒಡೆದು ಒಳಗಿನಿಂದ ತೆಂಗಿನ ಕಾಯಿ ತೆಗೆಯುವವರನ್ನು ವರ್ಷದ ಪೈಲ್ವಾನ ಎಂಬ ಪಟ್ಟ ಕಟ್ಟಲಾಗುತ್ತದೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
