
ಚಿತ್ರದುರ್ಗ: ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ದೇಶದಲ್ಲಿ ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ತಿಳಿಸಿದರು.
ಇಲ್ಲಿನ ಬುದ್ದನಗರ ಆರೋಗ್ಯ ಕೇಂದ್ರ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಡಿಹೆಚ್‍ಒ ಡಾ. ಜಿ.ಪಿ.ರೇಣುಪ್ರಸಾದ್ ಮತ್ತು ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜನಸಂಖ್ಯೆ ಹೆಚ್ಚಾದಂತೆ ಬಡತನ, ಅರಣ್ಯನಾಶ, ಮೂಲಭೂತ ಸೌಕರ್ಯಗಳ ಕೊರತೆ, ಆಹಾರದ ಕೊರತೆ, ಶಿಕ್ಷಣದ ಕೊರತೆ, ನೀರು, ಜಲ, ವಾಯುಮಾಲಿನ್ಯ ಉಂಟಾಗಿ ಪರಿಸರ ಕಲ್ಮಶವಾಗಿ ಸಾಂಕ್ರಾಮಿಕ ರೋಗಗಳು ತಲೆದೋರಬಹುದು. ಗ್ರಾಮಾಂತರ ಪ್ರದೇಶದಿಂದ ಜನರು ಉದ್ಯೋಗಕ್ಕಾಗಿ ನಗರದತ್ತ ಸಾಗುತ್ತಿದ್ದು, ನಗರೀಕರಣ ಉಂಟಾಗುವುದರ ಜೊತೆಗೆ ನಗರ ಪ್ರದೇಶದಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ ಎಂದರು.

ಭೂಮಿಯ ಗಾತ್ರ ಇದ್ದಷ್ಟೇ ಇದೆ. ಆದರೆ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತದೆ. ಪ್ರಯುಕ್ತ ಜನಸಂಖ್ಯಾ ಸ್ಥಿರತೆ ಕಾಪಾಡಿಕೊಂಡು ಪರಿಸರ ಸಂರಕ್ಷಣೆಯ ಜೊತೆಗೆ ಜಲ ಮಾಲಿನ್ಯವಾಗದಂತೆ ನಿಗಾವಹಿಸಿ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ ಮಾತನಾಡಿ, ಕರ್ನಾಟಕದಲ್ಲಿ ಫಲವತ್ತತೆ ದರ 1.7 ಇದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ 1.8 ಇದೆ. ಅಂದರೆ ಕುಟುಂಬದಲ್ಲಿ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದವರಾಗಿದ್ದು, ಜನಸಂಖ್ಯಾ ಸ್ಥಿರತೆ ಕಾಪಾಡಿಕೊಳ್ಳುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಿಗಿಂತ ಆಧುನಿಕ ತಾತ್ಕಾಲಿಕ ವಿಧಾನಗಳ ಕಡೆ ಹೆಚ್ಚು ಒತ್ತು ಕೊಡಬೇಕಾಗಿದೆ. ಹೆಣ್ಣು ಮಕ್ಕಳಿಗೆ ಮೂರು ತಿಂಗಳಿಗೊಮ್ಮೆ ದಿಮ್ಪಾ ಇಂಜಕ್ಷನ್ ಅಥವಾ ವಾರಕ್ಕೊಮ್ಮೆ ಛಾಯಾ ಮಾತ್ರೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಇದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಪ್ರಚಾರ ಮಾಡುವುದರ ಮುಖಾಂತರ ಜನಸಂಖ್ಯಾ ಸ್ಥಿರತೆ ಕಾಪಾಡಬೇಕಾಗಿದೆ ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಎರಡು ಮಕ್ಕಳನ್ನು ಹೊಂದಿದ ದಂಪತಿಗಳು ಕುಟುಂಬ ಕಲ್ಯಾಣ ಆಧುನಿಕ ತಾತ್ಕಾಲಿಕ ವಿಧಾನವಾದ ಕಾಪರ್ ಟಿ 380-ಎ ಹತ್ತು ವರ್ಷಗಳ ತನಕ ಗರ್ಭಧಾರಣೆಯನ್ನು ತಡೆಯುವ ಆಧುನಿಕ ವಿಧಾನವನ್ನು ಅನುಸರಿಸಬಹುದು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಮಹಿಳೆಯರಿಗೆ ಹೆರಿಗೆಯ ನಂತರ ಪಿಪಿಐಯುಸಿಡಿ ಒಂದು ಉತ್ತಮ ವಿಧಾನವಾಗಿದೆ. ಇವುಗಳ ಸದುಪಯೋಗಪಡಿಸಿಕೊಂಡು ಜನಸಂಖ್ಯಾ ಸ್ಥಿರತೆಗೆ ಶ್ರಮಿಸಬೇಕಾಗಿದೆ ಎಂದರು.
ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜನಸಂಖ್ಯಾಸ್ಪೋಟದ ಬಗ್ಗೆ ಮತ್ತು ಜನಸಂಖ್ಯಾ ಸ್ಥಿರತೆ ಕಾಪಾಡುವ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಾಗೃತಿ ಜಾಥಾದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ಮತ್ತು ಬಿ.ಜಾನಕಿ ಅವರು “ಚಿಕ್ಕ ಕುಟುಂಬ ಸುಖೀ ಕುಟುಂಬ” “ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ” “ಅಪಾರ ಪರಿವಾರ ದೇಶಕ್ಕೆ ಬಲು ಭಾರ” “ಮನೆಗೊಂದು ಮಗುವಿರಲಿ ಮನೆ ತುಂಬಾ ನಗುವಿರಲಿ” “ಕುಟುಂಬ ಕಲ್ಯಾಣ ವಿಧಾನಗಳ ಬಳಸಿ ಜನಸಂಖ್ಯಾ ಸ್ಥಿರತೆ ಕಾಪಾಡಿ” “ಎನ್ ಎಸ್ ವಿ ಒಂದು ಸೂಕ್ತ ಸರಳ ವಿಧಾನ” ಎಂಬುದಾಗಿ ಜನಸಂಖ್ಯಾ ಸ್ಥಿರತೆ ಕಾಪಾಡಲು ಘೋಷಣೆಗಳನ್ನು ಹಾಕಿದರು.
ಚಿತ್ರದುರ್ಗ ನಗರದ ಬುದ್ಧ ನಗರ ಆರೋಗ್ಯ ಕೇಂದ್ರದಿಂದ ಪ್ರಾರಂಭವಾದ ಜನಸಂಖ್ಯಾ ದಿನಾಚರಣೆಯ ಜಾಥಾ ಕಾರ್ಯಕ್ರಮವು ಪರಿಸರ ಬಿಲ್ಡಿಂಗ್ ಮುಖಾಂತರ ಪ್ರಶಾಂತ್ ನಗರ, ಜೋಗಿಮಟ್ಟಿ ರಸ್ತೆ 5ನೇ ಕ್ರಾಸ್‍ನಿಂದ ಒನಕೆ ಓಬವ್ವ ಸ್ಟೇಡಿಯಂನಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ. ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ. ಡಾ. ಅಕ್ಷತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಪ್ರವೀಣ್ ಕುಮಾರ್, ಸಿರೀಶ್, ರುದ್ರಮುನಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಮತ್ತು ಸರ್ಕಾರಿ ಬಿಎಸ್‍ಸಿ ನಸಿರ್ಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
