ಚಿತ್ರದುರ್ಗ ನ್ಯೂಸ್.ಕಾಂ: ವೇದಾಂತ ಮೈನಿಂಗ್ ಕಂಪನಿ ಮೂಲಕ ಅದಿರು ಸಾಗಾಣೆ ಮಾಡುವ ಗೇಟ್ ನಂ.3 ಬಂದ್ ಮಾಡಿರುವ ಕ್ರಮದ ವಿರುದ್ಧ ಲಾರಿ ಚಾಲಕರು ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ತಲುಪಿದೆ.
ಚಿತ್ರದುರ್ಗ ಅದಿರು ಮತ್ತು ಸರಕು ಸಾಮಾಗ್ರಿಗಳ ಸಾಗಾಣಿಕೆ ಲಾರಿ ಮಾಲೀಕರ ಮುಷ್ಕರದಲ್ಲಿ ಗುರುವಾರ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಸಾಥ್ ನೀಡಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೆಟ್ಟಿಲ ಮೇಲೆ ಸುಮಾರು ಒಂದು ಗಂಟೆಗಳ ಕಾಲ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.
ಬಿದಿರು ಬೊಮ್ಮೇನಹಳ್ಳಿಯಲ್ಲಿ ಅರ್ಧ ಕಿ.ಮೀ ನಷ್ಟು ಅರಣ್ಯ ಇಲಾಖೆ ದಾರಿಯಲ್ಲಿ ಲಾರಿಗಳು ಸಂಚರಿಸುತ್ತಿದ್ದು, ಇದನ್ನು ಇಲಾಖೆಯಿಂದ ತಡೆ ಹಿಡಿಯಲಾಗಿದೆ. ಲಾರಿಗಳ ಸಂಚಾರ ತಡೆ ಹಿಂದೆ ಇರುವ ಸಂಚು, ಹುನ್ನಾರ ಮಾಡಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸಿ.ನವೀನ್ ರೆಡ್ಡಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳಿಂದಲೂ ಅದಿರು ಸಾಗಾಣಿಕೆ ಮಾಡುತ್ತಿದ್ದ ಒಂದು ಸಾವಿರಕ್ಕೂ ಹೆಚ್ಚು ಲಾರಿಗಳ ಸಂಚಾರವನ್ನು ದಿಢೀರನೆ ಸ್ಥಗಿತಗೊಳಿಸಿರುವುದರಿಂದ ಇದನ್ನೆ ನಂಬಿಕೊಂಡಿರುವ ಲಾರಿ ಮಾಲೀಕರು, ಚಾಲಕರು, ಕ್ಲೀನರ್, ಪಂಕ್ಷರ್ ಅಂಗಡಿಗಳು, ಮೆಕ್ಯಾನಿಕ್‍ಗಳು ಆಟೋಮೊಬೈಲ್, ಟೈರ್ ಉದ್ದಿಮೆದಾರರು, ಲೋಡಿಂಗ್, ಅನ್ಲೋಡಿಂಗ್ ಹಮಾಲರು ಹೀಗೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಬೀದಿಗೆ ಬಿದ್ದಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ವೇದಾಂತ ಮೈನಿಂಗ್ ಗೇಟ್ ನಂ.3 ಬಂದ್ | ಬೀದಿಗೆ ಬಿದ್ದ ಲಾರಿ ಮಾಲಿಕರು, ಕಾರ್ಮಿಕರು, ಮೆಕ್ಯಾನಿಕ್‍ಗಳು
ಫೈನಾನ್ಸ್ ಮೂಲಕ ಲಾರಿಗಳನ್ನು ಖರೀಧಿಸಿರುವವರು ಪ್ರತಿ ತಿಂಗಳು ಕಂತು ಹಣ ಪಾವತಿಸುವುದಲ್ಲದೆ ರೋಡ್ ಟ್ಯಾಕ್ಸ್ ಕಟ್ಟಬೇಕು. ಇದನ್ನೆ ನಂಬಿಕೊಂಡಿರುವವರು ಈಗ ಜೀವನಕ್ಕೆ ದಾರಿ ಕಾಣದೆ ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಲಾರಿ ಮಾಲೀಕರ ಹಾಗೂ ಚಾಲಕರ ಮನವಿ ಆಲಿಸಿದ ಜಿಲ್ಲಾಧಿಕಾರಿ ಅದಿರು ಸಾಗಾಣಿಕೆ ಲಾರಿಗಳ ಸಂಚಾರವನ್ನು ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಾಗೂ ವೇದಾಂತ ಗಣಿ ಗುತ್ತಿಗೆ ಕಂಪನಿಯವರೊಡನೆ ಚರ್ಚಿಸಿ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎನ್.ಶ್ರೀನಿವಾಸ ರಾವ್, ಚಿತ್ರದುರ್ಗ ಅದಿರು ಮತ್ತು ಸರಕು ಸಾಮಾಗ್ರಿಗಳ ಸಾಗಾಣಿಕೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಮನ್ಸೂರ್ ಅಹಮದ್, ಉಪಾಧ್ಯಕ್ಷ ಸಿ.ರಮೇಶ್, ಕಾರ್ಯದರ್ಶಿ ಮಹಮದ್ ಇಮ್ರಾನ್, ಖಜಾಂಚಿ ಹೆಚ್.ಕೊಟ್ರೇಶ್, ಮುಬೀನ್ ಶರೀಫ್, ವಿಶ್ವನಾಥ್, ನಿಜಾಮುದ್ದಿನ್, ತಿಪ್ಪೇಸ್ವಾಮಿ ಮತ್ತಿತರರಿದ್ದರು.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
