CHITRADURGA NEWS | 18 MARCH 2026
ಚಿತ್ರದುರ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಪಂ ಸಿಇಒಗಳ ನಿಯಂತ್ರಣಕ್ಕೆ ವಹಿಸುವ ಸರ್ಕಾರದ ನಿರ್ಧಾರದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೌಲ್ಯಮಾಪನ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ಮಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 18 | ಮೆಕ್ಕೆಜೋಳ ರೇಟ್…
ಉಪನ್ಯಾಸಕರು ಹಾಗೂ ಪ್ರಾಚಾರ್ಯರ ಎರಡೂ ಸಂಘಗಳ ಜಿಲ್ಲಾಧ್ಯಕ್ಷರ ಜೊತೆಗೆ ಮಾ.18ರಂದು ನಡೆದ ಗೂಗಲ್ ಮೀಟ್‍ನಲ್ಲಿ ಜಿಲ್ಲಾವಾರು ಬಹುಮತದ ಅಭಿಪ್ರಾಯಗಳನ್ನು ಸಂಗ್ರಹಿಸಿ “ತಾತ್ಕಾಲಿಕವಾಗಿ ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆಯಲಾಗಿದೆ.” ಆದ್ದರಿಂದ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ನಿಗಧಿತ ದಿನಾಂಕಗಳಲ್ಲಿ ತಮ್ಮ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸಕಾಲದಲ್ಲಿ ಮೌಲ್ಯಮಾಪನ ಮುಗಿಸಿ ಏಪ್ರಿಲ್ 7 ನೇ ತಾರೀಖು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೆ ಅನುವು ಮಾಡಿಕೊಡುವಂತೆ ಕೋರಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ “ಪಿಯು ಆಡಳಿತ ನಿಯಂತ್ರಣವನ್ನು ಜಿ.ಪಂ ಸಿಇಒ ಗಳಿಗೆ ವಹಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ನಮ್ಮ ಸರ್ಕಾರ ಕೈಬಿಟ್ಟಿದೆ. ಈ ಬಗ್ಗೆ ಉಪನ್ಯಾಸಕರು ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿ ಇತರೇ ರಾಜ್ಯಗಳಿಗೆ ಮಾದರಿಯಾಗಿದೆ. ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಅಧಿಕಾರವನ್ನು ಏಕಾಏಕಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾಪಿತ ಕಡದ ಸಂಖ್ಯೆ ಇಪಿ 10 ಡಿಜಿಡಿ 2026 ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಸರಸ್ವತಿ LAW ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಈ ವಿಚಾರವಾಗಿ ಉಭಯ ಸಂಘಟನೆಗಳು ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ಸೇರಿ ಸರ್ಕಾರದ ಪ್ರಸ್ತಾಪವನ್ನು ಹಿಂಪಡೆಯುವುದು ಸೇರಿದಂತೆ ಇತರೆ ಐದು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 2026 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಹೋರಾಟದ ಒಂದನೇ ಹಂತವಾಗಿ ಮಾ.12 ರ ಗುರುವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಮುಖಾಂತರ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಉಭಯ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ಎಲ್.ಭೋಜೇಗೌಡ, ಎಸ್.ವಿ ಸಂಕನೂರು, ಹನುಮಂತಪ್ಪ ನಿರಾಣಿ, ಕೆ.ವಿವೇಕಾನಂದ, ರಾಮೋಜಿ ಗೌಡ ಹಾಗೂ ಡಿ.ಟಿ.ಶ್ರೀನಿವಾಸ್ ಸಹಕಾರದಿಂದ ವಿಧಾನ ಪರಿಷತ್ತಿನ ಸದನದ ಶೂನ್ಯ ವೇಳೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ನಿಯಂತ್ರಣ ಮತ್ತು ಮೇಲ್ವಿಚಾರಣೆ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಸಿಇಒ ರವರಿಗೆ ವರ್ಗಾಯಿಸುವ ಪ್ರಸ್ತಾಪಿಸಲಾಗಿತ್ತು.
ಇದನ್ನೂ ಓದಿ: ಬಯಲುಸೀಮೆ ಚಿತ್ರದುರ್ಗ ನೆಲ ಗೋಡಂಬಿ ಬೆಳೆಗೆ ಸೂಕ್ತ
ವಿಶೇಷವಾಗಿ ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು 180:1 ಇಳಿಸುವ ವಿಚಾರವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಸರಿದೂಗಿಸಲು ಸರ್ಕಾರಿ ಕಾಲೇಜಿಗೆ ನಿಯೋಜಿಸುವ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ತಿಂಗಳ 24ನೇ ತಾರೀಖಿನ ನಂತರ ಸಭೆ ಕರೆಯವುದಾಗಿ ತಿಳಿಸಿರುತ್ತಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
