CHITRADURGA NEWS | 20 JULY 2026
ಚಿತ್ರದುರ್ಗ: ಭಿಕ್ಷೆಗೆ ಒಂದು ಸಾಮಾಜಿಕ ಮೌಲ್ಯ ತಂದುಕೊಟ್ಟವರು 19ನೇ ಶತಮಾನದ ದೇವನೂರಿನ ಗುರುಮಲ್ಲೇಶ್ವರರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಪರೂಪಕ್ಕೆ ಸುರಿದ ಹದವಾದ ಮಳೆ | ಬಾಡಿ ಹೋಗಿದ್ದ ಬೆಳೆಗಳಿಗೆ ಗುಟುಕು ನೀರು
ಮುರುಘಾ ಮಠದಲ್ಲಿ ಏರ್ಪಡಿಸಿದ್ದ ದೇವನೂರಿನ ತ್ರಿವಿಧ ದಾಸೋಹಿಗಳಾದ ಗುರುಮಲ್ಲೇಶ್ವರರ 199ನೇ ಜಯಂತಿಯಲ್ಲಿ ಮಾತನಾಡಿದರು.
ಕಂತೆಭಿಕ್ಷೆ ಕಾಯಕದ ಮೂಲಕ ಸಮಾಜದ ಹಸಿವು, ಬಡತನ, ಅಸಮಾನತೆ ಹೋಗಲಾಡಿಸುವುದರ ಮೂಲಕ ಬಸವಾದಿ ಶಿವಶರಣರ ಕಾಯಕ ಮತ್ತು ದಾಸೋಹದ ತತ್ವ ಸಿದ್ಧಾಂತಗಳನ್ನು ನಿಜಾಚರಣೆಗೆ ತಂದವರು ಗುರುಮಲ್ಲೇಶ್ವರರು ಎಂದರು.
ಅಂದು ದಾಸೋಹಕ್ಕಾಗಿ ಹಚ್ಚಿದ ಒಲೆ ಈಗಲೂ ನಂದದೆ ಸಮಾಜಕ್ಕಾಗಿ ಸಮರ್ಪಿತಗೊಂಡಿರುವುದು ಅಚ್ಚರಿಯ ಸಂಗತಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾರದೋ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪೂರೈಸಿ, ದೇಶ ಸಂಚಾರ ಮಾಡುತ್ತ ಹಳ್ಳಿಯಿಂದ ಹಳ್ಳಿಗೆ ಹೋಗುತ್ತ, ಯಾವುದೋ ಗುರುವಿನಿಂದ ದೀಕ್ಷೆ ಪಡೆದು, ಪರಿಚಯವಿಲ್ಲದ ಕಡೆ ವಾಸಿಸುತ್ತ ಅಲ್ಲಿರುವವರ ಪಾಲಿಗೆ ಆಶಾಕಿರಣ, ಭರವಸೆಯ ಬೆಳಕಾಗಿ ದೈವಾಂಶ ಸಂಭೂತರಾಗುತ್ತಾರೆ. ಅಂತಹವರು ಆಗೊಮ್ಮೆ ಈಗೊಮ್ಮೆ ಶತಮಾನಕ್ಕೊಬ್ಬರಂತೆ ಉದಯಿಸುತ್ತಾರೆ. ಅಂತಹವರಲ್ಲಿ ಗುರುಮಲ್ಲೇಶ್ವರರೂ ಒಬ್ಬರು ಎಂದು ಸ್ಮರಿಸಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ತಕ್ಷಣ ಮೋಡ ಬಿತ್ತನೆ ಮಾಡಿ | ರೈತ ಸಂಘದಿಂದ ಒತ್ತಾಯ
ಚಿತ್ರದುರ್ಗದ ಮುರುಘಾ ಮಠಕ್ಕೂ ದೇವನೂರಿನ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎನ್ನುವ ದ್ಯೋತಕವಾಗಿ ಇಲ್ಲಿ ನಡೆದಿರುವ ಜಯಂತಿಯೇ ಸಾಕ್ಷಿ. ನಾವು ಗುರುಮಲ್ಲೇಶ್ವರರ ಸ್ಮರಣೆ, ಶ್ರದ್ಧಾಂಜಲಿ ಈ ರೀತಿ ಮಾಡುತ್ತೇವೆ. ಆದರೆ, ಜಯಂತಿ ಆಚರಿಸಿದ್ದಿಲ್ಲ.
ಈ ಮಠಕ್ಕೆ ಈ ದಿನಾಂಕ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ. ಆದರೂ ಈ 20-7-2026 ದಿನಾಂಕವನ್ನು ನಾನು ಕೆಲಪುಸ್ತಕದಲ್ಲಿ ನೋಡಿದೆ. ಇದು ಸರಿಯಾದ ಜಯಂತಿ ದಿನ ಎಂದು ಗೊತ್ತಾಯಿತು. ನಾವು ದೇವನೂರಿನಲ್ಲಿ ಮಾಡಿರುವ ಮಹೋನ್ನತ ಕೆಲಸವನ್ನು ಚಿತ್ರದುರ್ಗದ ಬೃಹನ್ಮಠ ಅದು ಗುರುಮಲ್ಲೇಶ್ವರರ 199ನೇ ಜಯಂತಿ ಆಚರಿಸುತ್ತಿರುವುದು ಯೋಗಾಯೋಗ ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶರಣತತ್ತ್ವಸಿದ್ಧಾಂತದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಎಲ್ಲಿಲ್ಲದ ಮಹತ್ವವಿದೆ. ಅಂತಹ ಶರಣರು ಮಾಡಿದ ಕಾರ್ಯವನ್ನು 19ನೇ ಶತಮಾನದಲ್ಲಿ ಗುರುಮಲ್ಲೇಶ್ವರರು ಮಾಡುತ್ತ ದಾಸೋಹ ಚಕ್ರವರ್ತಿ ಎಂಬ ಬಿರುದು ಪಡೆದ ಮಹಿಮಾಪುರುಷರು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜುಲೈ 20 | ಮೆಕ್ಕೆಜೋಳ, ರಾಗಿ ರೇಟ್…
ಕಂತೆಭಿಕ್ಷೆಯು ಈಗ ಇಲ್ಲ. ಆದರೆ, ಕಾರ್ಯಕರ್ತರು ಮತ್ತು ಅಭಿಮಾನಿ ಭಕ್ತರುಗಳು ವಿವಿಧ ರೀತಿ ಅಡುಗೆ ಪದಾರ್ಥಗಳನ್ನು ಇಂದು ಮಾಡಿಕೊಂಡು ಬಂದಿದ್ದಾರೆ. ಅದು ಗುರುಮಲ್ಲೇಶ್ವರರ ಗುರು ಮುರುಘೇಶರ ಪ್ರಸಾದ ಎಂದೇ ತಿಳಿದು ಸೇವಿಸಬೇಕು. ದುಡಿದ ಹಣದಲ್ಲಿ ದಾಸೋಹಕ್ಕಷ್ಟು ಮೀಸಲಿರಿಸಿ ಸಮಾಜಕ್ಕೆ ಕೊಟ್ಟಾಗ ನಮ್ಮಲ್ಲಿನ ಅಹಂ ಕಡಿಮೆಯಾಗುತ್ತದೆಂದು ನುಡಿದರು.
ಕೆ.ಆರ್.ನಗರ ತಾಲ್ಲೂಕಿನ ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹಮಠದ ಶರಣೆ ಜಯದೇವಿತಾಯಿ, ಚಿನ್ಮಯಿತಾಯಿ, ಬಸವ ಮುರುಘೇಂದ್ರ ಸ್ವಾಮಿಗಳು, ದೇವನೂರಿನ ಶಿವಕುಮಾರ್, ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾ. ನಾಗೇಂದ್ರಗೌಡ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

