ಮುಖ್ಯ ಸುದ್ದಿ
ಕೋಟೆನಾಡಿಗೆ ಮೊದಲ ಮಳೆಯ ಸಿಂಚನ | ಶನಿವಾರ ಎಲ್ಲೆಲ್ಲಿ ಮಳೆ ಸುರಿದಿದೆ ನೋಡಿ..

CHITRADURGA NEWS | 13 APRIL 2024
ಚಿತ್ರದುರ್ಗ: ಭೀಕರ ಬರದಿಂದ ಕಂಗೆಟ್ಟಿದ್ದ ಭೂಮಿಗೆ ಮಳೆ ಸುರಿದು ತಂಪಾಗಿದೆ. ಇಡೀ ಭೂಮಿ ಕಾದು ಕಾವಲಿಯಾಗಿತ್ತು. ಈಗ ಇಳೆಗೆ ಮಳೆ ಸುರಿದು ಜೀವ ಸಂಕುಲ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹೊಸದುರ್ಗ, ಹೊಳಲ್ಕೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಅಂತರ್ಜಲ ಬರಿದಾಗಿ ಬೋರ್‍ವೆಲ್ ಬತ್ತಿ ಹೋಗಿದ್ದವು. ರೈತರು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದರು. ಕಳೆದ ಎರಡು ತಿಂಗಳಿಂದ ಟ್ಯಾಂಕರ್ ನೀರು ಹಾಯಿಸಿ ತೋಟಗಳ ಜೀವ ಉಳಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ರಾಜಾಹುಲಿ ಮತ ಶಿಖಾರಿ | ಒಂದೇ ದಿನ ಮೂರು ಸಮಾವೇಶಗಳಲ್ಲಿ ಭಾಗವಹಿಸಿದ ಬಿಎಸ್‍ವೈ
ಈಗ ಯುಗಾದಿ ನಂತರ ಈ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಮಳೆಯಾಗದ ಕಡೆಯ ರೈತರು ಇಂದಲ್ಲ, ನಾಳೆ ನಮ್ಮೂರಿಗೂ ಮಳೆ ಬರುತ್ತದೆ ಎನ್ನುವ ಭರವಸೆಯೊಂದಿಗೆ ಕಾಯುತ್ತಿದ್ದಾರೆ.
ಶನಿವಾರ ಮಧ್ಯಾಹ್ನ ಹೊಸದುರ್ಗ, ಹೊಳಲ್ಕೆರೆ ತಾಲೂಕಿನ ವಿವಿಧೆಡೆ ಸುಮಾರು 20 ನಿಮಿಷ ಹದ ಮಳೆಯಾಗಿದೆ. ಭರಮಸಾಗರ, ಹೊಳಲ್ಕೆರೆ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳು, ಹೊರಕೆರೆದೇವರಪುರು, ನಾಕೀಕೆರೆ, ಮಾಡದಕೆರೆ, ಹೊಸದುರ್ಗ ಭಾಗಗಳಲ್ಲಿ ಮಳೆಯಾಗಿದೆ.
ಇದನ್ನೂ ಓದಿ: ಭರವಸೆ ಮೂಡಿಸಿದ ವರ್ಷದ ಮೊದಲ ಮಳೆ | ನಿರಾಳರಾದ ಕೃಷಿಕರು
ಶುಕ್ರವಾರ ಸಂಜೆ ಚಿಕ್ಕಜಾಜೂರು ಭಾಗದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದ್ದು, ಕೆಲವೆಡೆ ಅಡಿಕೆ ಮರಗಳು ಮುರಿದು ಬಿದ್ದಿವೆ. ಕೆಲವೆಡೆ ವಿದ್ಯುತ್ ಕಂಬ ಮುರಿದು ಬಿದ್ದಿರುವ ವರದಿಯಾಗಿದೆ.
