CHITRADURGA NEWS | 09 FEBRUARY 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಮಳೆಗಾಲಕ್ಕೆ ರೈತರ ಜಮೀನಿಗೆ ನೀರು ಹರಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಒತ್ತಾಯಿಸಿದರು.
ಇದನ್ನೂ ಓದಿ: ಗ್ರಾಮ ಪಂಚಾಯತಿ ಕೊನೆಯ ಸಾಮಾನ್ಯ ಸಭೆ | ಕಾಲುವೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಭಾಷಣ
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಾರತಮ್ಯವಿಲ್ಲದೆ ಪ್ರತಿ ರೈತರ ಜಮೀನಿಗೆ ನೀರು ಹರಿಸಲೇಬೇಕು ಎಂದು ಆಗ್ರಹ ಮಾಡಿದರು.
ಸದಾ ಬರಗಾಲ ಪ್ರದೇಶವಾಗಿರುವ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯೇ ಜೀವನಾಡಿ. ಆದರೆ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಯೋಜನೆ ದಶಕಗಳಿಂದ ಕುಂಟುತ್ತಾ ಸಾಗಿದೆ. ಇಷ್ಟೊತ್ತಿಗೆ ಈ ಭಾಗಕ್ಕೆ ನೀರು ಹರಿಯಬೇಕಾಗಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಿಕ್ಕಾಟದಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎಂದರು.
ಇಷ್ಟಾದರೂ ಯೋಜನೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಬೀದಿಗೀಳಿಯಲಿವೆ. ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಮಳೆಗಳು ಕೂಡಾ ಕೈ ಕೊಡುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 09 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಭದ್ರಾ ಮೇಲ್ದಂಡೆ ಯೋಜನೆ 2008 ರಿಂದ ನಡೆದರೂ ಪೂರ್ಣಗೊಳ್ಳುತ್ತಿಲ್ಲ. ಅನೇಕ ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ನೀರು ಹರಿಸುವ ಭರವಸೆ ನೀಡಿದರೂ ಪ್ರಯೋಜನೆವಾಗಿಲ್ಲ. ಜನರಲ್ಲಿ ಸುಳ್ಳು ಭರವಸೆ ಭಿತ್ತಿ ವಂಚಿಸುತ್ತಿದ್ದಾರೆ ಎಂದು ಹರಿಹಾಯ್ದರು.
ರೈತರ ಜಮೀನುಗಳಿಗೆ ನೀರು ಹರಿಸಲು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಕಡೂರು, ಹಿರಿಯೂರು ಮತ್ತು ಹೊಸದುರ್ಗ ತಾಲೂಕಿನ ಜಮೀನುಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಇದನ್ನು ಬಿಟ್ಟರೆ ಬೇರೆಲ್ಲೂ ಕೆಲಸ ನಡೆದಿಲ್. ಹನಿ ನೀರಾವರಿ ಯೋಜನೆಯಲ್ಲಿ ಹೊಳಲ್ಕೆರೆ ತಾಲೂಕು ಕೈ ಬಿಟ್ಟು ಹೋಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನೀರಾವರಿ ಹೋರಾಟವನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಇನ್ನು ನೀರಿನ ಮೋಸದ ಭರವಸೆಗಳಿಗೆ ಮಣಿಯುವುದಿಲ್ಲ ಎಂಬ ಧೃಡ ಸಂಕಲ್ಪದೊಂದಿಗೆ ಎಲ್ಲಾ ಜನಪರ, ನೆಲಜಲ ಪರ, ಜಿಲ್ಲೆಯ ಎಲ್ಲಾ ಅಭಿವೃದ್ಧಿಪರ ಸಂಘಟನೆಗಳು ನಾಗರೀಕರು ಸಮಾನ ಜವಾಬ್ದಾರಿಯಿಂದ ಹೋರಾಟಕ್ಕೆ ಇಳಿಯುತ್ತಿದ್ದೇವೆ ಎಂದರು.
ಇದನ್ನೂ ಓದಿ: ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ | ನಾಲ್ವರು ಪ್ರಧಾನ ಕಾರ್ಯದರ್ಶಿಗಳು | ಕೆ.ಟಿ.ಕುಮಾರಸ್ವಾಮಿ ಪ್ರಕಟಣೆ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಒಂದು ಸಾವಿರ ಅಡಿ ತಲುಪಿದೆ. ಶೇ.144.43 ಅಂತರ್ಜಲ ಅಪಾಯದ ಮಟ್ಟ ಮೀರಿ ನೀರು ಬಳಸುತ್ತಿದ್ದೇವೆ. ಪರಿಣಾಮ ಪ್ಲೋರೈಡ್ ಇನ್ನಿತರೆ ಅಪಾಯಕಾರಿ ಲವಣಾಂಶಗಳು ನೀರಿನಲ್ಲಿ ಸೇರಿ ಕೃಷಿ ಭೂಮಿಯನ್ನು ಕಲುಷಿತಗೊಳಿಸುತ್ತಿವೆ. ಇದು ಜೀವಪರ ಅಪಾಯಕ್ಕೆ ಮುನ್ಸೂಚನೆ. ಈ ಪರಿಸ್ಥಿತಿಯಿಂದ ಭೂಮಿ ರಕ್ಷಿಸಲು ನಾಲೆ ನೀರು ಹರಿಯಲೇಬೇಕು ಎಂದರು.
ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಹಾಗೂ ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಸಕಾಲಕ್ಕೆ ಹಣ ಪೂರೈಸದಿದ್ದರೆ ಜಿಲ್ಲೆಗೆ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ
ಜನರೇ ಕೇಳದಿದ್ದ ಗ್ಯಾರಂಟಿ ಯೋಜನೆಗಳಿಗೆ ಅಧಿಕಾರದ ಆಸೆಗಾಗಿ ಪ್ರತಿ ವರ್ಷ 52,000 ಕೋಟಿ ಖರ್ಚು ಮಾಡುವ ಸರಕಾರ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣವಾದ ಭದ್ರಾ ಮೇಲ್ದಂಡೆ ಯೋಜನೆ 18 ವರ್ಷಗಳಲ್ಲಿ ಕೇವಲ 10 ಸಾವಿರ ಕೋಟಿ ಖರ್ಚು ಮಾಡಿರುವುದು ಯಾವ ನ್ಯಾಯ. ಈಗ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಾಗಿ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಫೆ.10 ರಂದು ನಾಲ್ಕು ತಾಲೂಕು ಬಂದ್:
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ 2022-23 ನೇ ಸಾಲಿನ ಬಜೆಟ್‍ನಲ್ಲಿ ಹೇಳಿದಂತೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿರೂಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಫೆ.10 ರಂದು ಜಿಲ್ಲೆಯ ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ಬಂದ್ ಮಾಡಲಾಗುವುದು ಹಾಗೂ ಫೆ.12.ರಂದು ಚಳ್ಳಕೆರೆ ಬಂದ್ ಮಾಡಲಾಗುವುದು. ಇದರೊಂದಿಗೆ ಇದೇ ದಿನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಪಾದಯಾತ್ರೆ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಎರೇಹಳ್ಳಿ ತಿಪ್ಪೇಸ್ವಾಮಿ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
