
CHITRADURGA NEWS | 24 AUGUST 2026
ಚಿತ್ರದುರ್ಗ: ಓದುಗರಿಗೆ ತಿಳುವಳಿಕೆ ನೀಡುವ ಕಾವ್ಯಕ್ಕೆ ಹಿಂದಿನಿಂದಲೂ ವಿಶೇಷ ಮಾನ್ಯತೆ ಇದೆ. ಕಾವ್ಯ ಬರೆಯುವುದು ಹಾಗೂ ಕಟ್ಟುವುದು ಹೃದಯಕ್ಕೆ ಸಂಬಂಧಿಸಿದ ಕೆಲಸ ಎಂದು ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಹೇಳಿದರು.
ಇದನ್ನೂ ಓದಿ: ಪೌರ ಕಾರ್ಮಿಕರ ನೋವು ಅರ್ಥಮಾಡಿಕೊಂಡಿದ್ದೇನೆ | ಪಿ.ರಘು
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಡಾ. ಹೇಮಂತರಾಜು ಎಸ್.ಎನ್. ಅವರ ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಡಾ. ಹೇಮಂತರಾಜು ಅವರಲ್ಲಿ ಕಾವ್ಯದ ಬಗ್ಗೆ ಗಂಭೀರವಾದ ಕಳಕಳಿ ಇದೆ. ವಿದ್ಯಾರ್ಥಿ ದೆಸೆಯಿಂದಲೂ ಅವರ ಸಾಹಿತ್ಯಾಸಕ್ತಿಯನ್ನು ಗಮನಿಸುತ್ತಿದ್ದೇನೆ. ಕಾವ್ಯ ಬೇರೆ, ಪದ್ಯ ಬೇರೆ ಎಂದು ಕುವೆಂಪು ಹೇಳಿದ್ದಾರೆ. ಎಲ್ಲ ಪದ್ಯಗಳೂ ಕಾವ್ಯವಾಗುವುದಿಲ್ಲ; ಎಲ್ಲ ಕಾವ್ಯಗಳೂ ಪದ್ಯವಾಗಬೇಕಿಲ್ಲ. ಗದ್ಯವೂ ಕಾವ್ಯವಾಗಬಹುದು. ಸುಂದರ ಹಾಗೂ ರಮ್ಯ ಪದಗಳ ನೇಯ್ಗೆಯೊಂದಿಗೆ ಹೊಸ ರೀತಿಯ ಚಿಂತನೆ ಮೂಡಿಸಿ ಮನಸ್ಸಿಗೆ ಆನಂದ ನೀಡುವುದೇ ಕಾವ್ಯ ಎಂದು ಅವರು ತಿಳಿಸಿದರು.
ಹೊಸಗನ್ನಡ, ಹಳೆಗನ್ನಡ, ನವ್ಯ ಹಾಗೂ ಬಂಡಾಯ ಕಾವ್ಯ ಸೇರಿದಂತೆ ಹಲವು ಪ್ರಕಾರಗಳಿವೆ. ಡಾ. ಹೇಮಂತರಾಜು ಅವರ ಕವನಗಳಲ್ಲಿ ಮೃದುತ್ವವಿದೆ. ಕಠೋರವಾದ ಚಿತ್ರಣ, ಹೋಲಿಕೆ ಅಥವಾ ಭಾಷೆಯ ಬಳಕೆ ಇಲ್ಲ. ಇಂತಹ ಕವನ ಸಂಕಲನವನ್ನು ಹೊರತರುವುದು ಸುಲಭದ ಕೆಲಸವಲ್ಲ. ಪ್ರಜಾಪ್ರಭುತ್ವದ ವೈಫಲ್ಯವನ್ನು ಕಣ್ಣಿಗೆ ಕಟ್ಟುವಂತಹ ಸಾಲುಗಳು ಸಂಕಲನದಲ್ಲಿದ್ದು, ಓದುಗರು ಇಂತಹ ಕವನಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಇದನ್ನೂ ಓದಿ: ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
ಪ್ರಾಧ್ಯಾಪಕಿ ಡಾ. ತಾರಿಣಿ ಶುಭದಾಯಿನಿ ಮಾತನಾಡಿ, ಅಸಡ್ಡೆ ಹಾಗೂ ಅನಾದರದ ನಡುವೆ ಕಾವ್ಯ ಏಕೆ ಬರೆಯಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಕವಿಗಳನ್ನು ಕಾಡುತ್ತದೆ. ನಾಡು, ನುಡಿ ಹಾಗೂ ಅಸ್ತಿತ್ವದ ಬಗ್ಗೆ ನಿರಾಸೆಯ ಮಾತುಗಳನ್ನಾಡುವವರು ಒಂದೆಡೆಯಾದರೆ, ಕವಿಗಳು ಕವಿತೆಗಳ ಮೂಲಕ ಬದುಕನ್ನು ರಮ್ಯವಾಗಿ ಕಟ್ಟಿಕೊಡುತ್ತಾರೆ. ಹೃದಯ ಸಂಬಂಧಿ ಮಾತುಗಳನ್ನು ಹೇಳಬೇಕಾದರೆ ಕವಿತೆಗಳನ್ನು ಬರೆಯಬೇಕು ಎಂದರು.
ಪ್ರತಿಯೊಬ್ಬರಲ್ಲಿಯೂ ಒಂದೊಂದು ಬಗೆಯ ಕಾವ್ಯ ಇದ್ದೇ ಇರುತ್ತದೆ. ಡಾ. ಹೇಮಂತರಾಜು ಅವರ ಕವನ ಸಂಕಲನದಲ್ಲಿ ಬುದ್ಧಿ ಹಾಗೂ ಭಾವನೆಗಳ ಸಮನ್ವಯವಿದೆ. ಕವಿತೆ ನಮ್ಮೊಳಗಿನ ಮಾತು. ಪ್ರತಿ ಕವಿತೆಯೂ ಒಂದು ಪ್ರಾರ್ಥನೆ ಎಂದು ಅಡಿಗರು ಹೇಳಿದ್ದಾರೆ. ಬದುಕಿನ ಸಮಸ್ಯೆಗಳಿಗೆ ಉಪಾಯಗಳನ್ನು ಹುಡುಕಿಕೊಳ್ಳುವುದು ಕವಿತೆಗಳ ಕೆಲಸವಾಗಬೇಕು ಎಂದು ಹೇಳಿದರು.
ದೇಶದಲ್ಲಿ ಸಾಲು ಸಾಲು ಅತ್ಯಾಚಾರಗಳು ನಡೆಯುತ್ತಿರುವ ಸಂದರ್ಭದಲ್ಲಿ ಕವಿತೆ ವಾಸ್ತವಿಕತೆಗೆ ಕೆಲವೊಮ್ಮೆ ಉಲ್ಟಾಪಲ್ಟಾ ಪ್ರತಿಕ್ರಿಯೆಯನ್ನೂ ನೀಡುತ್ತದೆ. ಭ್ರಮೆಯ ಜಗತ್ತಿನಲ್ಲಿ ಮುಳುಗುವುದನ್ನು ಬಿಟ್ಟು ಕವಿ ಸೂಕ್ಷ್ಮವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಕವನ ಸಂಕಲನದಲ್ಲಿ ಉತ್ತಮವಾದ ಸಾಲುಗಳಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೊಳಕಾಲ್ಮೂರಿನಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪಣೆ | ಬಸ್‍ಗಳ ಕಾರ್ಯಾಚರಣೆಗೆ ಸಚಿವ ಟಿ.ರಘುಮೂರ್ತಿ ಚಾಲನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಡಾ. ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿ, ಕಾವ್ಯ ಹೊರಬಂದ ಬಳಿಕ ಕವಿ ಮೌನವಾಗಿರಬೇಕಾಗುತ್ತದೆ. ಹಣ ಮತ್ತು ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ಕಾಲದಲ್ಲಿ ಡಾ. ಹೇಮಂತರಾಜು ಅವರು ಕಾವ್ಯದ ಮೂಲಕ ಭ್ರಷ್ಟರು ಹಾಗೂ ಅತ್ಯಾಚಾರಿಗಳಿಗೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ. ಕಾವ್ಯ ಸಮಾಜಮುಖಿ ಆಶಯ ಹೊಂದಿರಬೇಕು. ಈ ಕವನ ಸಂಕಲನ ನಾಟ್ಯ, ಭಂಗಿ ಹಾಗೂ ಕಾಲ್ಗೆಜ್ಜೆಯ ಧ್ವನಿಯಂತಿದೆ ಎಂದು ಪ್ರಶಂಸಿಸಿದರು.
ಕೃತಿಕಾರ ಡಾ. ಹೇಮಂತರಾಜು ಮಾತನಾಡಿ, ಸಾಹಿತ್ಯದ ಬಗ್ಗೆ ಯೋಚಿಸುವುದನ್ನು ಕಲಿಸಿದ್ದು ತಮ್ಮ ವಿದ್ಯಾಗುರುಗಳು. ತಮ್ಮ ಕಾಲದ ಪಠ್ಯಗಳೇ ಆಲೋಚನೆಗಳನ್ನು ರೂಪಿಸುವಂತಿದ್ದವು. ಸಮಾಜವನ್ನು ಬದಲಿಸುವ ಶಕ್ತಿ ಗುರುಗಳಿಗೆ ಮಾತ್ರವಿದೆ. ಶಿಕ್ಷಕರ ಶಕ್ತಿ ಕುಂದಿದರೆ ಸಮಾಜ ನಾಶವಾಗುತ್ತದೆ. ಪುಸ್ತಕಗಳು ಮನಸ್ಸನ್ನು ರೂಪಿಸಿದರೆ ಸಾಹಿತ್ಯ ಮನಸ್ಸನ್ನು ಶುದ್ಧೀಕರಿಸುತ್ತದೆ. ಓದು ಮುಖ್ಯವಾದರೂ ಯಾವುದನ್ನು ಓದುತ್ತೇವೆ ಎಂಬುದು ಇನ್ನಷ್ಟು ಮುಖ್ಯ. ಕವನಗಳೆಂದರೆ ನನಗೆ ತುಂಬಾ ಇಷ್ಟ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್, ಡಿಎಸ್‌ಇಆರ್‌ಟಿ ಉಪ ನಿರ್ದೇಶಕ ಡಾ. ಜಿ.ವಿ. ಹರಿಪ್ರಸಾದ್ ಹಾಗೂ ಶಿವಮೊಗ್ಗದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್‌ನ ಕೆ. ಕಿರಣ್‌ಕುಮಾರ್ ಮಾತನಾಡಿದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೊಡ್ಡಪ್ಪ ಎನ್. ವೇದಿಕೆಯಲ್ಲಿದ್ದರು.
ಇದನ್ನೂ ಓದಿ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಡಾ. ಹೇಮಂತರಾಜು ಎಸ್.ಎನ್. ಅವರ ಕುಟುಂಬದವರು, ಸಹಪಾಠಿಗಳು ಹಾಗೂ ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

