CHITRADURGA NEWS | 24 AUGUST 2026
ಚಿತ್ರದುರ್ಗ: ಪ್ರಕೃತಿ ವಿಕೋಪ ನಿರ್ವಹಣೆ ವಿಷಯಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ತಹಶೀಲ್ದಾರರು ತಪ್ಪದೇ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಮಗಳಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 24 | ಮೆಕ್ಕೆಜೋಳ, ಶೇಂಗಾ ರೇಟ್…..
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯೂರಿನ ತಾಲ್ಲೂಕಿನ ದಿಂಡಾವರ, ಗಂಜಲಗುಂಟೆ ಹಾಗೂ ಹೊಳಲ್ಕೆರೆಯ ಕೊಳಕಾಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಹಿರಿಯೂರು ತಾಲ್ಲೂಕಿನ ಗ್ರಾಮಸ್ಥರು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದಾರೆ.
ಅಧಿಕಾರಿಗಳು ಕೂಡಲೇ ಎಚ್ಚಿತ್ತು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಬೋರೆವೆಲ್ ಕೊರೆಸುವ ಮೂಲಕ ಸಮಸ್ಯಗೆ ಮುಕ್ತಿ ಹಾಡಬೇಕು. ತಕ್ಷಣಕ್ಕೆ ಖಾಸಗಿ ಬೊರೆವೆಲ್ ಬಾಡಿಗೆ ಪಡೆದು ನೀರು ಸರಬರಾಜಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಇದನ್ನೂ ಓದಿ: ಅಕ್ಟೋಬರ್.12, 13ರಂದು ವೈಭವದ ರಾಜಾ ವೀರ ಮದಕರಿ ನಾಯಕ ಜಯಂತ್ಯೋತ್ಸವ | ಕೃಷ್ಣಮೂರ್ತಿ
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಐಮಂಗಲ ಹಾಗೂ ಹರ್ತಿಕೋಟೆ ಬಹುಗ್ರಾಮ ಕುಡಿಯುವ ನೀರಿನ ಕಾಮಗರಿಯನ್ನು ಆಗಸ್ಟ್ 31ರ ಒಳಗಾಗಿ ಪೂರ್ಣಗೊಳಿಸಬೇಕು. ಇದರೊಂದಿಗೆ ದೇವರ ಎತ್ತುಗಳಿಗೆ ಟ್ರಸ್ಟ್ ರಚಿಸುವ ಕಾರ್ಯವೂ ನಿಗದಿವೇಳೆ ಪೂರ್ಣವಾಗಬೇಕು. ಚಿತ್ರದುರ್ಗ ನಗರದ ಕುಡಿಯುವ ನೀರು ಸರಬಾಜಿಗೆ ಇರುವ ತಾಂತ್ರಿಕ ಅಡಚಣೆಯನ್ನು ಅಧಿಕಾರಿಗಳು ಬಗೆ ಹರಿಸಬೇಕು ಎಂದು ಸೂಚಿಸಿದರು.
ಪ್ರಜಾಸೇವಾ ಶಾಖೆ ಪ್ರಾರಂಭಿಸಲು ಕಟ್ಟುನಿಟ್ಟಿನ ಸೂಚನೆ:
ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಸಾರ್ವಜನಿಕರ ದೂರು ಮತ್ತು ಅಹವಾಲುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆಯ ಶಾಖೆಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳು ಪ್ರಜಾಸೇವಾ ಇಲಾಖೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ಗಳು ಹಾಗೂ ಇಓಗಳು ಈ ಕಾರ್ಯದ ಉಸ್ತುವಾರಿ ವಹಿಸಬೇಕು.
ಇದನ್ನೂ ಓದಿ: ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ | ಬಿ.ಸಿ.ಶಾಂತರಾಜ್
ಕಚೇರಿಗಳಲ್ಲಿ ಪ್ರಜಾಸೇವಾ ವಿಭಾಗ ಸಕ್ರಿಯವಾಗಿರುವ ಬಗ್ಗೆ ಬೋರ್ಡ್ಗಳನ್ನು ಹಾಗೂ ಲಭ್ಯವಿರುವ ಸೇವೆಗಳ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪ್ರಜಾಸೇವಾ ಶಾಖೆಗೆ ಸೂಕ್ತ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಗಣಕೀಕರಿಸಿ, ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಕಳುಹಿಸುವ ವ್ಯವಸ್ಥೆಯಾಗಬೇಕು.
ಸಾರ್ವಜನಿಕರಿಂದ ಸ್ವೀಕರಿಸಲ್ಪಡುವ ಪ್ರತಿಯೊಂದು ಅರ್ಜಿಗೂ ಪ್ರಜಾಸೇವಾ ಇಲಾಖೆಯಿಂದ ಕಡ್ಡಾಯವಾಗಿ ನಂಬರ್ ನೀಡಿ, ಕಡತ ಸಿದ್ಧಪಡಿಸಬೇಕು. ಪ್ರತಿ ಬುಧವಾರದ ವೇಳೆಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಮುಂದಿನ ಬುಧವಾರದೊಳಗೆ ಅವುಗಳನ್ನು ವಿಲೇವಾರಿ ಮಾಡಿ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು.
ಕಚೇರಿಗೆ ನೇರವಾಗಿ ಬರುವ ಅರ್ಜಿಗಳು, ಧರಣಿ ಹಾಗೂ ಪ್ರತಿಭಟನೆಗಳ ಮೂಲಕ ಸಲ್ಲಿಸಿದ ಮನವಿಗಳು ಹಾಗೂ ‘ಜನಸಂಪರ್ಕ’ ಸಭೆಗಳಲ್ಲಿ ಬಂದಂತಹ ಅರ್ಜಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಿ ವಿಲೇವಾರಿಗೆ ಕ್ರಮ ವಹಿಸಬೇಕು. ಅರ್ಜಿ ವಿಲೇವಾರಿ ಕುರಿತು ರಾಜ್ಯಮಟ್ಟದ ಗುಪ್ತಚರ ಇಲಾಖೆ ತಂಡವು ಪ್ರತಿ ತಾಲೂಕಿನಿಂದ ಮಾಹಿತಿ ಕಲೆಹಾಕುತ್ತಿದ್ದು, ನಿರ್ಲಕ್ಷ್ಯ ವಹಿಸುವ ಅಥವಾ ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ಧ ಶಿಸ್ತು ಸಹಿತ ಕಠಿಣ ಕ್ರಮ ಕೈಗೊಳ್ಳಲಾಗುವುದೆ. ಎಲ್ಲಾ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಸಾರ್ವಜನಿಕರ ದೂರುಗಳನ್ನು ಸ್ವತಃ ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಶ್ರಾವಣಮಾಸದ ಪ್ರಯುಕ್ತ ಮುರುಘಾಮಠದಲ್ಲಿ ವಚನಾಭಿಷೇಕ | ಶ್ರೀ ಸಾವಳಗಿ ಗುರುಶಾಂತ ಸ್ವಾಮಿಗಳವರ ಸ್ಮರಣೆ
ಸೆ.3 ರಂದು ಜನಸ್ಪಂದನೆ ಕಾರ್ಯಕ್ರಮ:
ಮುಂಬರುವ ಸೆ.3 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಿರಿಯೂರಿನಲ್ಲಿ ಜನಸ್ಪಂದನೆ ಕಾರ್ಯಕ್ರಮ ಜರುಗಲಿದೆ. ಅಧಿಕಾರಿಗಳು ಇಂದಿನಿಂದಲೇ ಸಭೆ ಆಯೋಜನೆ ಸಿದ್ದತೆ ಕೈಗೊಳ್ಳಬೇಕು. ಸಭೆ ನಡೆಯುವ ಸ್ಥಳದಲ್ಲಿ ಅಹವಾಲುಗಳ ಸ್ವೀಕಾರಕ್ಕೆ ಕೌಂಟರ್ಗಳನ್ನು ತೆರೆಯಬೇಕು. ವಿವಿಧ ಇಲಾಖೆಗಳ ಸೌಲಭ್ಯಗಳ ಕುರಿತು ಸ್ಟಾಲ್ಗಳನ್ನು ಹಾಕುವ ಮೂಲಕ ಯೋಜನೆಗಳ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಜನಸ್ಪಂದನ ಸಭೆ ಆಯೋಜನೆಗೆ ವೇಳಾಪಟ್ಟಿ:
ಜನಸ್ಪಂದನ ಸಭೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಸರ್ಕಾರದ ಸುತ್ತೋಲೆ ಹೊರಡಿಸಿದೆ. ಪ್ರತಿ ತಿಂಗಳ 1 ಮತ್ತು 3 ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. 2 ಮತ್ತು 4 ನೇ ಶನಿವಾರ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ಆಯೋಜಿಸಬೇಕು. ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಡಾ.ಹೇಮಂತರಾಜು ಅವರ ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆ
ತಹಶೀಲ್ದಾರುರು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲುವ ಸ್ಥಳ ಪಟ್ಟಿಯನ್ನು ಸಿದ್ದಪಡಿಸಿ ಕಳುಹಿಸಿಕೊಡಬೇಕು. ಸಭೆ ಆಯೋಜನೆಗೂ ಮುನ್ನ ವಾರ್ತಾ ಇಲಾಖೆ ಮುಖಾಂತರ ಪ್ರಚಾರ ವ್ಯಾಪಕ ಪ್ರಚಾರ ನೀಡಿಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಬೇಕು. ಕಂದಾಯ, ಸಮಾಜ ಕಲ್ಯಾಣ ಹಾಗೂ ನಗರಸಭೆ ವ್ಯಾಪ್ತಿಯ ಖಾತೆ ಬದಲಾವಣೆ, ಪೌತಿ ಖಾತೆ ಮತ್ತು ಪಿಂಚಣಿ ಮುಂತಾದ ಸೇವೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಕ್ರಮವಹಿಸಬೇಕು.
ಜನಸ್ಪಂದನ ಕಾರ್ಯಕ್ರಮದ ದಿನದಂದು ವಿವಿಧ ಇಲಾಖೆಗಳ ಪ್ರತ್ಯೇಕ ಕೌಂಟರ್ಗಳನ್ನು ತೆರೆದು, ಆನ್ಲೈನ್ ಸೇವೆಗಳ ಮೂಲಕ ಸಾಧ್ಯವಿದ್ದಲ್ಲಿ ಸ್ಥಳದಲ್ಲೇ ಪ್ರಮಾಣಪತ್ರ ಅಥವಾ ಆದೇಶ ಪ್ರತಿಗಳನ್ನು ವಿತರಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಎಸ್.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಸಿಪಿಓ ಗಾಯಿತ್ರಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್, ನಗರಸಭೆ ಆಯುಕ್ತೆ ಲಕ್ಷ್ಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಸೇರಿದಂತೆ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

