
CHITRADURGA NEWS | 23 AUGUST 2026
ಚಿತ್ರದುರ್ಗ: ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಸೇವೆ ಸಮಾಜದಲ್ಲಿನ ಎಲ್ಲ ವೃತ್ತಿಗಳಿಗಿಂತಲೂ ಅತ್ಯಂತ ಪವಿತ್ರವಾದುದು. ಪೌರ ಕಾರ್ಮಿಕರ ನೋವು ಹಾಗೂ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದು, ಅವರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಹೇಳಿದರು.
ಇದನ್ನೂ ಓದಿ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ | ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ನಗರದ ಮೆದೆಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಿ, ಅವರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಅವರು ಮಾತನಾಡಿದರು.
ಪೌರ ಕಾರ್ಮಿಕರ ಕೆಲಸ ಅತ್ಯಂತ ಕಷ್ಟಕರವಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. ಹೋರಾಟದ ಮೂಲಕ ಸರ್ಕಾರದಿಂದ ಆಗಬೇಕಾದ ಬದಲಾವಣೆಗಳನ್ನು ಜಾರಿಗೆ ತರಲು ಸದಾ ಸಿದ್ಧನಿದ್ದೇನೆ. ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಪೌರ ಕಾರ್ಮಿಕರೊಂದಿಗೆ ಆಚರಿಸಿಕೊಂಡಿರುವುದು ಸಂತಸ ತಂದಿದೆ ಎಂದರು.
ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರು ಕೀಳರಿಮೆ ಬೆಳೆಸಿಕೊಳ್ಳಬಾರದು. ಅವರ ಹಲವು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪೌರಾಡಳಿತ ಸಚಿವರೊಂದಿಗೆ ಚರ್ಚಿಸಲಾಗುವುದು. ತಾವು ಅಧಿಕಾರದಲ್ಲಿರುವ ಅವಧಿಯಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಪಿ. ರಘು ಭರವಸೆ ನೀಡಿದರು.
ಇದನ್ನೂ ಓದಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ | ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್ ಮಾತನಾಡಿ, ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಪಿ. ರಘು ಅವರು ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಅರ್ಥಪೂರ್ಣವಾಗಿದೆ. ರಾಜ್ಯದ ಜನರಿಗೆ ಇನ್ನಷ್ಟು ಸೇವೆ ಸಲ್ಲಿಸುವ ಶಕ್ತಿ ಹಾಗೂ ಆರೋಗ್ಯವನ್ನು ಭಗವಂತ ಕರುಣಿಸಲಿ ಎಂದು ಹಾರೈಸಿದರು.
ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ಶರಣ್‌ಕುಮಾರ್ ಮಾತನಾಡಿ, ಪಿ. ರಘು ಅವರು ಸದಾ ಜನರೊಂದಿಗೆ ಬೆರೆಯುವ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ಪೌರ ಕಾರ್ಮಿಕರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಅವರ ಪೌರ ಕಾರ್ಮಿಕರ ಮೇಲಿನ ಗೌರವವನ್ನು ತೋರಿಸುತ್ತದೆ ಎಂದರು.
ಪತ್ರಕರ್ತ ರವಿ ಮಲ್ಲಾಪುರ ಮಾತನಾಡಿ, ಪಿ. ರಘು ಅವರು ಪೌರ ಕಾರ್ಮಿಕರೊಂದಿಗೆ ಜನ್ಮದಿನ ಆಚರಿಸಿಕೊಂಡಿರುವುದು ಅವರ ಮೇಲಿನ ಗೌರವ ಹಾಗೂ ಕಾಳಜಿಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಅವರಿಗೆ ದೊರೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ: PHD ಫೆಲೋಶಿಪ್ | ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಭೋವಿ ಸಮಾಜದ ತಿಮ್ಮಣ್ಣ, ಭಾರತೀಯ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬೀರಾವರ ಪ್ರಕಾಶ್, ಆಕಾಶವಾಣಿಯ ನವೀನ್ ಮಸ್ಕಲ್, ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಕೆ.ಟಿ. ಶಿವಕುಮಾರ್ ಅವರ ಕುಟುಂಬದ ಸದಸ್ಯರು ಹಾಗೂ ಪಿ. ರಘು ಅವರ ಅಭಿಮಾನಿಗಳು ಉಪಸ್ಥಿತರಿದ್ದು, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

