
CHITRADURGA NEWS | 08 SEPTEMBER 2025
ಚಿತ್ರದುರ್ಗ: ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರದ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆ ತೀವ್ರ ಅಸಮಧಾನ ವ್ಯಕ್ತವಾಯಿತು. ಸಚಿವ ಡಿ.ಸುಧಾಕರ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಶವ ಪರೀಕ್ಷೆ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ಡಿ.ಹೆಚ್.ಓ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ನೋಟೀಸ್ ನೀಡಿ | ಸಚಿವ ಡಿ.ಸುಧಾಕರ್

ಇದೇ ವೇಳೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸಾಮೂಹಿಕವಾಗಿ ರಜೆಯ ಮೇಲೆ ತೆರಳಿದ ವಿಷಯ ಚರ್ಚೆಗೆ ಗ್ರಾಸವಾಯಿತು. ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಪ್ರಾಥಮಿಕ ವರದಿ ಆಧಾರದಲ್ಲಿ ಕೆಲ ಸಿಬ್ಬಂದಿ ರಜೆ ಅರ್ಜಿ ನೀಡದೆ ಪ್ರವಾಸಕ್ಕೆ ತೆರಳಿದ್ದಾರೆ.
ಆರೋಪ ಕೇಳಿ ಬಂದ ನಂತರ ರಜೆ ಅರ್ಜಿಗಳನ್ನು ಸೃಷ್ಠಿಸಿ ದಾಖಲೆಗಳನ್ನು ತಿದ್ದುವ ಕೆಲಸ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ರಜೆ ಅರ್ಜಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗೆ ಕಳುಹಿಸಿ ಸಹಿ ಹಾಗೂ ಇತರೆ ವಿಷಯಗಳ ಸತ್ಯಾಸತ್ಯೆಯನ್ನು ಪರಿಶೀಲಿಸಲಾಗುವುದು. ಒಂದೊಮ್ಮೆ ರಜೆ ಅರ್ಜಿ ವಿಚಾರದಲ್ಲಿ ಅಕ್ರಮ ಮಾಡಿರುವುದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ತಾವು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಜಿಲ್ಲಾಸ್ಪತ್ರೆ ಸ್ವಚ್ಛತೆ ಹಾಗೂ ಉತ್ತಮ ಸೇವೆಗೆ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಸತತ ಎರೆಡು ಬಾರಿ ಗಿಟ್ಟಿಸಿಕೊಂಡಿತ್ತು. ಆದರೆ ಈಗ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಜಿಲ್ಲಾ ಶಸ್ತ್ರಚಿಕತ್ಸಕರು ಹೊರಗುತ್ತಿಗೆ ನೌಕರರ ವೇತನವನ್ನು ಸರಿಯಾದ ಸಂದರ್ಭಕ್ಕೆ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ ಎಂದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಗಣಿ ಕಂಪನಿಗಳ ಸಿ.ಎಸ್.ಆರ್ ನಿಧಿಯಡಿ ಸಾಕಷ್ಟು ಉಪಕರಣಗಳನ್ನು ಜಿಲ್ಲಾಸ್ಪತ್ರೆಗೆ ನೀಡಲಾಗಿದೆ. ಈ ಉಪಕರಣಗಳಿಗೆ ಬಿಲ್ ಹೊಂದಿಸಿ ಡಿ.ಎಂ.ಎಫ್ ಅನುದಾನದಡಿ ಖರೀದಿಸಲಾಗಿದೆ ಎಂದು ಲೆಕ್ಕ ತೋರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಯುದ್ಧಗಳ ಕಾರಣಕ್ಕೆ ಯೂರಿಯಾ ಪೂರೈಕೆಯಲ್ಲಿ ವ್ಯತ್ಯಯ | ಜಂಟಿ ಕೃಷಿ ನಿರ್ದೇಶಕ ಮಂಜುನಾಥ್
ರಾಜ್ಯ ಸರ್ಕಾರ ಕೋವಿಡ್ ಅಕ್ರಮಗಳ ತನಿಖೆಗೆ ನ್ಯಾಯಮೂರ್ತಿ ಮೈಕಲ್ ಖುನ್ಹಾ ನೇತೃತ್ವದಲ್ಲಿ ತನಿಖಾ ನಿಯೋಗ ನೇಮಿಸಿದೆ. ಈಗಾಗಲೇ ಜಿಲ್ಲಾಸ್ಪತ್ರೆಯ ದಾಸ್ತನು ವಹಿಗಳನ್ನು ನಿಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ಏಪ್ರಿಲ್ ನಿಂದ ಆಗಸ್ಟ್ ಅಂತ್ಯದ ವರೆಗೆ ಸಂಭವಿಸಿದ ತಾಯಿ ಹಾಗೂ ಶಿಶು ಮರಣಗಳ ಕುರಿತು ಚರ್ಚಿಸಲಾಯಿತು. ಈ ಅವಧಿಯಲ್ಲಿ 7 ತಾಯಿ ಮರಣ ಪ್ರಕರಣ ಸಂಭವಿಸಿದ್ದು, 01 ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಸಂಭವಿಸಿದೆ, ಉಳಿದಂತೆ 03 ಖಾಸಗಿ ಆಸ್ಪತ್ರೆಯಲ್ಲಿ ಹಾಗೂ 03 ಮನೆಯಲ್ಲಿ ಸಂಭವಿಸಿದೆ ಎಂದು ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಮಾಹಿತಿ ನೀಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
