CHITRADURGA NEWS | 30 AUGUST 2025
ಚಿತ್ರದುರ್ಗ: ಬೆಳೆ ಕಟಾವು ಪ್ರಯೋಗದಲ್ಲಿ ಲೋಪ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ 2025-26ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ವಿಮೆ ಮೊತ್ತ, ನಷ್ಟ ಪರಿಹಾರ, ಬೆಂಬಲ ಬೆಲೆ ಘೋಷಣೆಗೆ ಬೆಳೆ ಕಟಾವು ಪ್ರಯೋಗಗಳೇ ಆಧಾರವಾಗಿವೆ. ಸಮಯಕ್ಕೆ ಸರಿಯಾಗಿ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ, ರೈತರು ಸಮಸ್ಯೆ ಅನುಭವಿಸುತ್ತಾರೆ. ಆದ್ದರಿಂದ ಬೆಳೆ ಕಟಾವು ಪ್ರಯೋಗ ಮಾಡಲು ನಿಯೋಜಿಸಿದ ಅಧಿಕಾರಿಗಳೇ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ ಪ್ರಯೋಗವನ್ನು ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಬೆಳೆ ಕಟಾವು ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ಬಾಕಿ ಇರುವ ನಮೂನೆ-1 ಅನ್ನು ಕೂಡಲೇ ಭರ್ತಿ ಮಾಡಬೇಕು. ಎಲ್ಲಾ ಅಧಿಕಾರಿಗಳಿಗೆ ಬೆಳೆ ಕಟಾವು ಕುರಿತು ತರಬೇತಿ ನೀಡಲಾಗಿದೆ. ಆದರೂ ಕೆಲ ಅಧಿಕಾರಿಗಳು ತೂಕದ ಯಂತ್ರ ಹಾಗೂ ಬೆಳೆ ಕಾಣದ ರೀತಿಯಲ್ಲಿ ಫೋಟೋಗಳನ್ನು ಸೆರೆ ಹಿಡಿದು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಧರ್ಮಪುರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಮಂಜೂರಾತಿ | ಸಚಿವ ರಾಮಲಿಂಗಾ ರೆಡ್ಡಿ
ಇದರಿಂದ ಪ್ರಯೋಗಗಳು ಅನೂರ್ಜಿತವಾಗುತ್ತವೆ. ತೂಕದ ಯಂತ್ರ, ಬೆಳೆ ಹಾಗೂ ತೂಕ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಫೋಟೋ ಸೆರೆ ಹಿಡಿಯಬೇಕು. ಬೆಳೆ ಹಾಗೂ ಉಪ ಬೆಳೆಗಳನ್ನು ನಿರ್ದಿಷ್ಟ ಕಾಲಂಗಳಲ್ಲಿಯೇ ಭರ್ತಿ ಮಾಡಬೇಕು. ಕಳೆದ ವರ್ಷ ಅನೂರ್ಜಿತಗೊಂಡ ಪ್ರಯೋಗಳನ್ನು ಕೈಗೊಂಡ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3,824 ಬೆಳೆ ಕಟಾವು ಪ್ರಯೋಗ ನಡೆಸಲು ಗುರಿ ನಿಗದಿ ಮಾಡಲಾಗಿದೆ. ಇದರಲ್ಲಿ ಕಂದಾಯ ಇಲಾಖೆಗೆ 1,870, ಗ್ರಾಮೀಣಾಭಿವೃದ್ಧಿ ಇಲಾಖೆಗೆ 1,202, ಕೃಷಿ ಇಲಾಖೆಗೆ 410, ತೋಟಗಾರಿಕೆ ಇಲಾಖೆಗೆ 342 ಪ್ರಯೋಗಳನ್ನು ಹಂಚಿಕೆ ಮಾಡಲಾಗಿದೆ.
ಇದುವರೆಗೆ 1,694 ಪ್ರಯೋಗಳ ನಮೂನೆ-1 ಹಾಗೂ 242 ಪ್ರಯೋಗಗಳ ನಮೂನೆ-2 ಪೂರ್ಣಗೊಂಡಿವೆ. ಬೆಳೆ ಅಂಕಿ ಅಂಶಗಳ ಸುಧಾರಣೆ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ರಾಜ್ಯ ವಲಯದಲ್ಲಿ 32 ಹಾಗೂ ಕೇಂದ್ರ ವಲಯದಲ್ಲಿ 32 ಪ್ರಯೋಗಗಳು ಆಯ್ಕೆಯಾಗಿವೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 30 | ಹತ್ತಿ ರೇಟ್ ಎಷ್ಟಿದೆ?
ಈ ಕುರಿತು ಗ್ರಾಮವಾರು ಬೆಳೆ ಕಟಾವು ಪ್ರಯೋಗಕ್ಕೆ ನಿಯೋಜಿಸಿದ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 2025-26ನೇ ಸಾಲಿನ ಸಕಾಲಿಕ ಬೆಳೆ ಸಮೀಕ್ಷೆ ದತ್ತಾಂಶದ ಶೇ.1% ಪರಿಶೀಲನೆಗೆ ಅಧಿಕಾರಿಗಳನ್ನು ನಿಯೋಜಿಸಿರುವುದಾಗಿ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಮಾಹಿತಿ ನೀಡಿದರು.
ಆರಂಭದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಗಳು ತಡವಾಗಿ ಆರಂಭವಾಗಿವೆ. ಆದ್ದರಿಂದ ಬಹಳಷ್ಟು ಪ್ರಯೋಗಳ ನಮೂನೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ತಿಳಿಸಿದರು.
ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
