CHITRADURGA NEWS | 11 MARCH 2026
ಚಿತ್ರದುರ್ಗ: ದೇಶದ ಅಭಿವೃದ್ಧಿ ದೃಷ್ಟಿಯಿಂದ ಜನಗಣತಿ ಅತ್ಯಂತ ಮಹತ್ವದ್ದಾಗಿದ್ದು, ಈ ಬಾರಿ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿರುವುದರಿಂದ ಕ್ಷೇತ್ರಮಟ್ಟದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ತಿಳಿಸಿದರು.
ಇದನ್ನೂ ಓದಿ: ಅಂಬೇಡ್ಕರ್, ಬಾಬು ಜಗಜೀವನ್ ರಾಂ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಭಾರತದ ಜನಗಣತಿ-2027ರ ಸಂಬಂಧ ಕ್ಷೇತ್ರಮಟ್ಟದ ತರಬೇತುದಾರರಿಗಾಗಿ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರಮಟ್ಟದ ತರಬೇತುದಾರರು ಗಣತಿದಾರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿದರೆ ಜನಗಣತಿ ಕಾರ್ಯ ಯಶಸ್ವಿಯಾಗಲಿದೆ ಎಂದು ತಿಳಿಸಿದ ಅವರು, ಈ ಹಿಂದೆ ಮ್ಯಾನುಯಲ್ ಆಗಿ ಜನಗಣತಿ ಮಾಡಲಾಗುತ್ತಿತ್ತು, ಆದರೆ ಈ ಬಾರಿ ಹೊಸದಾಗಿ ಆಪ್ ಮೂಲಕ ಡಿಜಿಟಲ್ ರೂಪದಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. ಇದರಿಂದ ಮಾಹಿತಿಯಲ್ಲಿನ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ 1872ರಲ್ಲಿ ಮೊದಲ ಜನಗಣತಿ ಆರಂಭವಾಯಿತು. ಸ್ವಾತಂತ್ರ್ಯಾನಂತರ 1951 ರಿಂದ ಪ್ರತಿ 10 ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದು, ಇದು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಿದೆ. 2021ರಲ್ಲಿ ನಡೆಯಬೇಕಿದ್ದ ಪ್ರಕ್ರಿಯೆಯು ಕೋವಿಡ್ ಕಾರಣದಿಂದ ವಿಳಂಬವಾಗಿ ಈಗ ನಡೆಯುತ್ತಿದೆ. ಜನಗಣತಿಯಲ್ಲಿ ಸಂಗ್ರಹವಾಗುವ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ, ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿಯು ಸರ್ಕಾರಕ್ಕೆ ಮುಂದಿನ ಯೋಜನೆ ಹಾಗೂ ನೀತಿಗಳನ್ನು ರೂಪಿಸಲು ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ಕಲಾ ಕಾಲೇಜಿನಲ್ಲಿ ಭಾರತೀಯ ಕಲೆ ಮತ್ತು ವಾಸ್ತುಶಿಲ್ಪ ಕುರಿತು ವಿಶೇಷ ಉಪನ್ಯಾಸ
ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಸ್ವಯಂ ಗಣತಿ ಆಯ್ಕೆ ನೀಡಲಾಗಿದ್ದು, ಗಣತಿದಾರರು ಇದರ ಬಗ್ಗೆ ಅರಿವು ಮೂಡಿಸಬೇಕು. ಈ ಹಿಂದೆ ನಡೆದ ಸಾಮಾಜಿಕ ಮತ್ತು ಆರ್ಥಿಕ ಗಣತಿಯಲ್ಲಿ ಆದ ಲೋಪದೋಷಗಳು ಈ ಬಾರಿ ಮರುಕಳಿಸಬಾರದು. ಗಣತಿದಾರರು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಭಾರತದ 16ನೇ ಜನಗಣತಿಯು ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದು, ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿತು ಉತ್ತಮ ಜನಪರ ಯೋಜನೆಗಳನ್ನು ರೂಪಿಸಲು ಭದ್ರ ಬುನಾದಿಯಾಗಲಿದೆ ಎಂದು ತಿಳಿಸಿದರು.
ಭಾರತದಲ್ಲಿ 1872ರಿಂದ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದ್ದು, 2021ರಲ್ಲಿ ನಡೆಯಬೇಕಿದ್ದ 16ನೇ ಜನಗಣತಿಯು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗಿತ್ತು. ಈ ಬಾರಿಯ ಗಣತಿಯು ಡಿಜಿಟಲ್ ಆಗಿರುವುದರಿಂದ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯು ಈ ಹಿಂದೆಗಿಂತಲೂ ಸರಳ ಮತ್ತು ವ್ಯವಸ್ಥಿತವಾಗಿರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 11 | ಮೆಕ್ಕೆಜೋಳ, ಶೇಂಗಾ ರೇಟ್..
ಏಪ್ರಿಲ್ 1 ರಿಂದ 15 ರವರೆಗೆ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದ್ದು, ಏಪ್ರಿಲ್ 15 ರಿಂದ ಮೇ 15 ರವರೆಗೆ ಮನೆಗಳ ಪಟ್ಟಿ ತಯಾರಿಕೆ ಕಾರ್ಯ ನಡೆಯಲಿದೆ. ತದನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜನಸಂಖ್ಯೆ ಗಣತಿ ಕಾರ್ಯ ನಡೆಯಲಿದ್ದು, ಈ ಸಂಪೂರ್ಣ ಪ್ರಕ್ರಿಯೆಯು ಹಂತ ಹಂತವಾಗಿ 2027ರವರೆಗೆ ಮುಂದುವರಿಯಲಿದೆ ಎಂದು ವಿವರಿಸಿದರು.
ಗಣತಿದಾರರು ಮತ್ತು ಮೇಲ್ವಿಚಾರಕರು ಒಟ್ಟು 33 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ಬಳಸಲಿದ್ದು, ಸಾರ್ವಜನಿಕರಿಂದ ನಿಖರ ಮಾಹಿತಿ ಪಡೆಯಲು ಈ ತರಬೇತಿಯನ್ನು ಗಂಭೀರವಾಗಿ ಪಡೆಯಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:
ಕಾರ್ಯಗಾರದಲ್ಲಿ ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮಾ, ಶಿರಸ್ತೆದಾರ್ ಮಲ್ಲಿಕಾರ್ಜುನ ನಾಯಕ, ಮಾಸ್ಟರ್ ಟ್ರೈನರ್‍ಗಳಾದ ರಾಮಚಂದ್ರಪ್ಪ, ರೇವಣ್ಣ ಹಾಗೂ ಕ್ಷೇತ್ರಮಟ್ಟದ ತರಬೇತುದಾರರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
