ಮುಖ್ಯ ಸುದ್ದಿ
Health Officers: ಸಮುದಾಯ ಆರೋಗ್ಯಾಧಿಕಾರಿಗಳ ಕಾರ್ಯಾಗಾರ | ಜಿಪಂ ಸಿಇಓ ಎಸ್.ಜೆ.ಸೋಮಶೇಖರ್ ಉದ್ಘಾಟನೆ

CHITRADURGA NEWS | 26 NOVEMBER 2024
ಚಿತ್ರದುರ್ಗ: ಆರೋಗ್ಯ ಇಲಾಖೆಯ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಜಿಲ್ಲೆಯಲ್ಲಿ ತಾಯಿ ಮರಣ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು.
ಕ್ಲಿಕ್ ಮಾಡಿ ಓದಿ: ಗೂಳಯ್ಯನಹಟ್ಟಿ ಮೊರಾರ್ಜಿ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುಣಮಟ್ಟ ಪ್ರಸವ ಪೂರ್ವ ಆರೈಕೆ ಕುರಿತು ಸಮುದಾಯ ಆರೋಗ್ಯಾಧಿಕಾರಿಗಳಿಗೆ(Health Officers) ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇ.100ರಷ್ಟು ಸಾಂಸ್ಥಿಕ ಹೆರಿಗೆಗೆ ಒತ್ತು ನೀಡಬೇಕು. ಲಸಿಕಾ ಕಾರ್ಯಕ್ರಮಗಳು ಹಾಗೂ ಆರೋಗ್ಯ ಇಲಾಖೆಯ ಮಾಹಿತಿ ಶಿಕ್ಷಣ, ಸಂವಹನ ಕಾರ್ಯಕ್ರಮಗಳನ್ನು ಪರಿಣಾಮಕಾಯಾಗಿ ಅನುಷ್ಠಾನ ಮಾಡುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕರಿಗೂ ದೊರೆಯುವಂತಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ಹೆಣ್ಣುಮಕ್ಕಳು ಗರ್ಭಾವಸ್ಥೆಯಲ್ಲಿ ಉತ್ತಮವಾಗಿದ್ದು, ಆರೋಗ್ಯವಂತ ಮಗುವಿಗೆ ಜನ್ಮಕೊಟ್ಟು, ಆದಾದ ನಂತರ ಬಾಣಂತಿತನ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಗುಣಮಟ್ಟ ಪ್ರಸವ ಪೂರ್ವ ಆರೈಕೆ ಬಹಳ ಮುಖ್ಯವಾಗಲಿದೆ.
ಕ್ಲಿಕ್ ಮಾಡಿ ಓದಿ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ | 415ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಕಿಶೋರಿಯರ ಮುಟ್ಟಿನ ಸಮಸ್ಯೆ, ರಕ್ತಹೀನತೆ, ಬಾಲ್ಯವಿವಾಹ ತಡೆಗಟ್ಟುವುದು ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ಒಂದು ಹೆಣ್ಣು, ಮದುವೆಯಾದ ನಂತರ ಉತ್ತಮವಾದ ಗರ್ಭಾವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಗರ್ಭಿಣಿಯರು 12ನೇ ವಾರದೊಳಗೆ ಆರ್‍ಸಿಹೆಚ್ ತಂತ್ರಾಂಶದಲ್ಲಿ ನೋಂದಣಿಯಾಗಬೇಕು. ಇದರಿಂದ ಹೆಚ್‍ಬಿ, ಬಿಪಿ ಎಷ್ಟಿದೆ ಎಂಬುದನ್ನು ಗಮನಿಸಿ, ಪ್ರತಿಯೊಂದು ವಿಚಾರವನ್ನು ಪರಿಶೀಲಿಸಿ, ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಹೈ ರಿಸ್ಕ್ ಪ್ರೆಗ್ನೆನ್ಸಿ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಶಶಿಕಿರಣ, ಡಾ.ಮೇಘನಾ, ಡಾ.ಮೇಘ ಯಾದವ್ ಅವರು ಗುಣಮಟ್ಟ ಪ್ರಸವ ಪೂರ್ವ ಆರೈಕೆ ಕುರಿತು ಸಮುದಾಯ ಆರೋಗ್ಯಾಧಿಕಾರಿಗಳಿಗೆ ತರಬೇತಿ ನೀಡಿದರು.
ಕ್ಲಿಕ್ ಮಾಡಿ ಓದಿ: ವಿದ್ಯುತ್ ಟ್ರಾನ್ಸ್‍ಫಾರ್ಮರ್ ರಿಪೇರಿಗೆ ದುಡ್ಡು ಕೊಡಬೇಡಿ | ಬೆಸ್ಕಾಂ ಸೂಚನೆ
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ ಸೇರಿದಂತೆ ಸಮುದಾಯ ಆರೋಗ್ಯಾಧಿಕಾರಿಗಳು ಇದ್ದರು.
