
CHITRADURGA NEWS | 20 AUGUST 2025
ಚಿತ್ರದುರ್ಗ: ಜಿಲ್ಲೆಯಲ್ಲಿ ಗೋಡಂಬಿ ಬೆಳೆಯಲು ಸೂಕ್ತ ವಾತವರಣವಿದ್ದು, ಇದನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಕಡಿಮೆ ವೆಚ್ಚ, ಕಡಿಮೆ ನೀರು ಮತ್ತು ಕಡಿಮೆ ನಿರ್ವಹಣೆಯಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 20| ಮೆಕ್ಕೆಜೋಳ ರೇಟ್ ಎಷ್ಟಿದೆ?

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಬಬ್ಬೂರು ಫಾರಂನಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಗೋಡಂಬಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮುಖ್ಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಇರುವಕ್ಕಿಯ ವಿಜ್ಞಾನಿಗಳಾದ ಡಾ.ಸದಾಶಿವ ನಡುಕೇರಿ ಮಾತನಾಡಿ, ಗೊಡಂಬಿ ಹಣ್ಣು ಮತ್ತು ಬೀಜ ಒಳ್ಳೆಯ ಸತ್ವಯುತ ಆಹಾರವಾಗಿದ್ದು, ಇದರ ಹಣ್ಣು ಅಧಿಕ ಪ್ರಮಾಣದ ಶರ್ಕರಗಳು ಹಾಗೂ ಸಿ ಜೀವಸತ್ವಗಳಿಂದ ಕೂಡಿದ್ದು, ಗೋಡಂಬಿ ಬೀಜದ ಹೆಚ್ಚಿನ ಜಿಡ್ಡು, ಪ್ರೋಟೀನ್, ಖನಿಜ ಹಾಗೂ ಜೀವಸತ್ವಗಳನ್ನು ಒಳಗೊಂಡಿರುತ್ತದೆ ಎಂದರು.
ಇಲ್ಲಿನ ಹವಾಗುಣಕ್ಕೆ ಹಾಗೂ ಗುಣಮಟ್ಟದ ಗೋಡಂಬಿ ಪಡೆಯಲು ವೆಂಗುರ್ಲಾ-೭ ಮತ್ತು ಭಾಸ್ಕರ ಉತ್ತಮ ತಳಿಯಾಗಿವೆೆ. ಗೋಡಂಬಿ ಬೆಳೆಯನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲೂ ಬೆಳೆಯಬಹುದು. ಆದರೆ ಜೇಡಿ ಮಣ್ಣು ಮತ್ತು ಚೌಳು ಹಾಗೂ ಜೌಗು ಪ್ರದೇಶಗಳಲ್ಲಿ ಈ ಬೆಳೆ ಚೆನ್ನಾಗಿ ಬರುವುದಿಲ್ಲ.
ಇದನ್ನೂ ಓದಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ | ಅರ್ಜಿ ಆಹ್ವಾನ
ನೀರು ಬಸಿದು ಹೋಗುವಂತಹ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣುಗಳು ಈ ಬೆಳೆಗೆ ಹೆಚ್ಚು ಸೂಕ್ತವಾಗಿದೆ. ಗೋಡಂಬಿ ಬೆಳೆ ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಉಷ್ಣಾಂಶವಿರುವ ತೀರ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯಬಹುದು.
ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಬಹುದಾಗಿದೆ. 6 ರಿಂದ 12 ತಿಂಗಳು ವಯಸ್ಸಿನ ಕಸಿ ಗಿಡಗಳನ್ನು 8 ಮೀ, 8 ಮೀ, ಅಥವಾ 4 ಮೀ, 4 ಮೀ ಅಂತರದಲ್ಲಿ 75 * 75 * 75 ಸೆಂ.ಮೀ. ಅಳತೆಯ ಗುಣಿ ತೆಗೆದು, ಈ ಗುಣಿಗಳನ್ನು ಮೇಲ್ಮಣ್ಣು ಮತ್ತು 25 ಕಿ.ಗ್ರಾಂ ಸಾವಯವ ಗೊಬ್ಬರದ ಮಿಶ್ರಣದಿಂದ ತುಂಬಿ, ಮುಂಗಾರಿನ ಸಮಯದಲ್ಲಿ ಗುಣಿಗಳ ಮಧ್ಯದಲ್ಲಿ ಕಸಿಗಿಡ ನಾಟಿ ಮಾಡಬೇಕು.
ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಮೇ-ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಗಿಡಗಳಿಗೆ ಒದಗಿಸಬೇಕು. ನಾಟಿಮಾಡಿದ ನಂತರದ ಪ್ರಾರಂಭಿಕ ವರ್ಷಗಳಲ್ಲಿ ಗಿಡಗಳು ನೇರವಾಗಿ ಬೆಳೆಯಲು ಕೆಳಗಿನ ರೆಂಬೆಗಳನ್ನು ತೆಗೆದು ಸ್ಥಳೀಯ ಹವಾಗುಣ ಮತ್ತು ಭೂಗುಣಗಳಿಗೆ ಸೂಕ್ತವಾದ ತರಕಾರಿ, ದ್ವಿದಳ ಧಾನ್ಯ ಮತ್ತು ಹುಲ್ಲಿನ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು.
ಇದನ್ನೂ ಓದಿ: ಆಗಸ್ಟ್ 25 ರಿಂದ ನೀರು ಮತ್ತು ನೈರ್ಮಲ್ಯದ ಕುರಿತು ಪ್ರಬಂಧ, ಚಿತ್ರಕಲಾ ಸ್ಪರ್ಧೆ
ಗೋಡಂಬಿಯಲ್ಲಿ ಬರುವ ಪ್ರಮುಖ ಕೀಟಗಳಾದ ಕಾಂಡ ಕೊರೆಕ, ಟೀ ಸೊಳ್ಳೆ, ಸುರಂಗ ಕೀಟ ಮತ್ತು ಪ್ರಮುಖ ರೋಗಗಳಾದ ಗಿಡ ಒಣಗುವಿಕೆ ಹಾಗೂ ಎಲೆ ಚುಕ್ಕಿ ರೋಗಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ನಾಟಿ ಮಾಡಿದ ಮೂರನೇ ವರ್ಷದಿಂದ ಇಳುವರಿ ಪ್ರಾರಂಭಗೊಂಡು ಸುಮಾರು 8 ರಿಂದ 10 ವರ್ಷದ ಪ್ರತಿ ಮರದಿಂದ ವರ್ಷವೊಂದಕ್ಕೆ ಸರಾಸರಿ 8 ರಿಂದ 10 ಕಿ.ಗ್ರಾಂ ಗೇರು ಬೀಜವನ್ನು ಪಡೆಯಬಹುದು.
ಪ್ರತಿ ಹೆಕ್ಟೇರಿಗೆ 1.5 ರಿಂದ 1.7 ಟನ್ ಗೋಡಂಬಿ ಬೀಜ ಪಡೆಯಬಹುದು. ಬಿದ್ದ ಹಣ್ಣುಗಳಿಂದ ಬೀಜಗಳನ್ನು ಬಿಡಿಸಿ ಎರಡರಿಂದ ಮೂರು ದಿವಸ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸುಮಾರು 6 ತಿಂಗಳವರೆಗೆ ಸಂಗ್ರಹಣೆ ಮಾಡಬಹುದು ಎಂದರು.
ಚಳ್ಳಕೆರೆ ವಿಭಾಗದ ಉಪಕೃಷಿ ನಿರ್ದೇಶಕ ಡಿ.ಉಮೇಶ್ ಮಾತನಾಡಿ, ಗೋಡಂಬಿ ಬೆಳೆಯು ಬಯಲು ಸೀಮೆ ಪ್ರದೇಶದಲ್ಲಿ ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿಲೂ ಉತ್ತಮ ಇಳುವರಿಯನ್ನು ಕೊಡುವ ಆಶದಾಯಕ ಬೆಳೆ. ಗೋಡಂಬಿ ಬೀಜಗಳನ್ನು ಪಾಯಸ ಮತ್ತಿತರೆ ಸಿಹಿ ತಿನಿಸುಗಳನ್ನು ತಯಾರಿಸಲು ಬಳಸುತ್ತಿದ್ದು, ವಿದೇಶಗಳಲ್ಲಿ ಇದರ ಹಣ್ಣನ್ನು ವೈನ್ ತಯಾರಿಸಲು ಮತ್ತು ಗೋವಾದಲ್ಲಿ ಫೆನ್ನಿ ತಯಾರಿಸಲು ಸಹ ಬಳಸುತ್ತಾರೆ. ರೈತರು ಉತ್ಕೃಷ್ಟವಾಗಿ ಬೆಳೆ ಬೆಳೆಯಲು ನೇರವಾಗಿ ಕೊಟ್ಟಿಗೆ ಗೊಬ್ಬರ ಬಳಸುವ ಬದಲಾಗಿ. ಲಘುಪೋಷಕಾಂಶ ಮತ್ತು ಅಣು ಜೀವಿಗೊಬ್ಬರಗಳಿಂದ ಪುಷ್ಟಿಕರಿಸಿದ ಕೊಟ್ಟಿಗೆ ಗೊಬ್ಬರವನ್ನು ಬಳಸುವುದು ಸೂಕ್ತ ಎಂದರು.
ಇದನ್ನೂ ಓದಿ: ಭರಮಸಾಗರ | 30 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ |ಅರ್ಜಿ ಆಹ್ವಾನ
ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ಗೋಡಂಬಿ ಬೆಳೆಗಾರರಾದ ಬಿ.ಕೆ.ದಯಣ್ಣ ಕನಿಷ್ಟ ನಿರ್ವಹಣೆಯಲ್ಲಿ ತಾವು ಉತ್ತಮ ಇಳುವರಿ ಪಡೆಯುತ್ತಿರುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಹಿರಿಯೂರು ತಾಲ್ಲೂಕಿನ ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ್ ಗೋಡಂಬಿ ಪ್ರದೇಶ ವಿಸ್ತರಣೆ ಯೋಜನೆ ಕುರಿತು ಮಾಹಿತಿ ನೀಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ರಘುನಾಥ ಮಾತನಾಡಿದರು. ಚಿಕ್ಕಚೆಲ್ಲೂರು ಗ್ರಾಮದ ಕೃಷಿಕರಾದ ಎನ್.ತಿಪ್ಪೇಸ್ವಾಮಿ ಗೋಡಂಬಿ ಬೆಳೆಯಲ್ಲಿ ಅಂತರ ಬೆಳೆಯಾಗಿ ಸೀತಾಫಲ ಬೆಳೆಯನ್ನು ಯಶಸ್ವಿಯಾಗಿ ಬೆಳೆದಿರುವ ಕುರಿತು ತಿಳಿಸಿದರು.
ಇದನ್ನೂ ಓದಿ: ಹೊಳಲ್ಕೆರೆ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ | ನೇಮಕಾತಿಗೆ ಅರ್ಜಿ ಆಹ್ವಾನ
ತರಬೇತಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಲಕ್ಷ್ಮಿಕಾಂತ್ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಆಸಕ್ತ 80 ಜನ ರೈತರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
