
ಚಿತ್ರದುರ್ಗ ನ್ಯೂಸ್.ಕಾಂ: ಜಿಲ್ಲೆಯಲ್ಲಿ ದಿನೇ ದಿನೇ ಅಡಿಕೆ ತೋಟಗಳನ್ನು ಕಡಿಯುವುದು, ಬೆಂಕಿ ಹಚ್ಚುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಒಬ್ಬರ ಬೆಳವಣಿಗೆಯನ್ನು ಮತ್ತೊಬ್ಬರು ಸಹಿಸಿಕೊಳ್ಳಲು ಆಗದಂತಹ ದ್ವೇಷದ ವಾತಾವರಣ ಮನೆ ಮಾಡಿದೆ.
ವಿಶೇಷವಾಗಿ ಅಡಿಕೆ ತೋಟ ಕಟ್ಟುವ ರೈತರು ಅಡಿಕೆ ಸಸಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ. ಇಂತಹ ಪ್ರಕರಣಗಳು ಇತ್ತೀಚೆಗೆ ಹಿರಿಯೂರು ತಾಲೂಕಿನಲ್ಲೇ ಹೆಚ್ಚಾಗುತ್ತಿರುವುದು ದುರಂತ.

ಕೆಲ ವರ್ಷಗಳ ಹಿಂದೆ ರೇಷ್ಮೆ ಗೂಡು ಬೆಳೆಯುವ ರೈತರು ಇಂತಹ ಸಂಕಷ್ಟ ಅನುಭವಿಸುತ್ತಿದ್ದರು. ರೇಷ್ಮೆ ಮನೆಗಳ ಬಳಿ ಔಷಧಿ ಸಿಂಪರಣೆ, ಹುಳು ಗೂಡು ಕಟ್ಟದಂತೆ ಮಾಡುವುದು ನಡೆಯುತ್ತಿದ್ದವು.
ಈಗ ಅಡಿಕೆ ಸಸಿಗಳು, ಮರಗಳು, ಕೊಳವೆ ಬಾವಿಗಳು, ಕೇಬಲ್ ವೈಯರ್, ಮೋಟಾರ್ ಪಂಪುಗಳ ಕಳ್ಳತನದಂತಹ ಪ್ರಕರಣಗಳು ಜಿಲ್ಲೆಯ ರೈತರನ್ನು ಕಂಗೆಡಿಸಿವೆ.
ಇದನ್ನೂ ಓದಿ: ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರು
ಇಲ್ಲಿ ಹೇಳ ಹೊರಟಿರುವುದು ಅಂಥದ್ದೇ ಪ್ರಕರಣ. ಹಿರಿಯೂರು ತಾಲೂಕಿನ ಸಲವಮ್ಮನಹಳ್ಳಿಯ ರೈತ ತಿಪ್ಪೇಸ್ವಾಮಿ ಸರೋಜಮ್ಮ ದಂಪತಿಗಳು ಕೂಲಿನಾಲಿ ಮಾಡಿ ಕಷ್ಟಪಟ್ಟು ದುಡಿದು, ಜೊತೆಗೊಂದಿಷ್ಟು ಸಾಲ ಮಾಡಿ ತಮಗಿದ್ದ ಎರಡು ಎಕರೆ ಜಮೀನಿನಲ್ಲಿ ಸುಮಾರು ಒಂದು ಸಾವಿರ ಅಡಿಕೆ ಸಸಿಗಳನ್ನು ಕಟ್ಟಿದ್ದರು. ಇದಕ್ಕೆಲ್ಲಾ ಸುಮಾರು 5 ರಿಂದ 6 ಲಕ್ಷ ರೂ. ವೆಚ್ಚವಾಗಿತ್ತು.

ಆದರೆ, ಇದನ್ನು ಸಹಿಸಿಕೊಳ್ಳಲಾಗದ ಕಿಡಿಗೇಡಿಗಳು, ನ.16 ರಂದು ರಾತ್ರಿ ತೋಟಕ್ಕೆ ಬೆಂಕಿ ಹಚ್ಚಿದ್ದಾರೆ. ಮೊದಲೇ ಸರಿಯಾಗಿ ಮಳೆಯಾಗದೆ ಒಣಗಿ ನಿಂತಿದ್ದ ಹುಲ್ಲಿನ ನಡುವೆ ಬೆಂಕಿಯ ಕೆನ್ನಾಲಿಗೆ ಬೇಗ ಹರಡಿದ್ದು, ಸುಮಾರು 300 ಅಡಿಕೆ ಗಿಡಗಳು, ತೆಂಗಿನ ಸಸಿಗಳು ಬೆಂಕಿಗೆ ಆಹುತಿಯಾಗಿವೆ.
ಇದರೊಟ್ಟಿಗೆ ನೀರಾವರಿಗಾಗಿ ಅಳವಡಿಸಿದ್ದ ಡ್ರಿಪ್ ಲ್ಯಾಟ್ರಲ್‍ಗಳು, ಗೇಟುಗಳು, ಪೈಪುಗಳು ಕೂಡಾ ಬೆಂಕಿಯಿಂದ ಸುಟ್ಟು ಜಿನುಗಿವೆ. ಸುಮಾರು 300 ಕ್ಕಿಂತ ಹೆಚ್ಚು ಅಡಿಕೆ ಗಿಡಗಳು ಬೆಂಕಿಯಿಂದ ಹಾಳಾಗಿವೆ. ಇದರಿಂದ ರೈತ ದಂಪತಿ ದಿಕ್ಕೇ ತೋಚದಂತಾಗಿದ್ದಾರೆ.

ಕಷ್ಟಪಟ್ಟು ಕಟ್ಟಿದ ಸುಮಾರು ಎರಡು ವರ್ಷಗಳ ಅಡಿಕೆ ಗಿಡಗಳನ್ನು ನೋಡಿ ಸಹಿಸಿಕೊಳ್ಳಲಾಗದವರ ಮನಸ್ಥಿತಿಯ ಜನರ ನಡುವೆ ಹೇಗೆ ತೋಟ ಬೆಳೆಸುವುದು, ಇದಕ್ಕೆ ಪರಿಹಾರ ಇಲ್ಲವೇ, ಇಂತಹ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
