ಹೊಸದುರ್ಗ
ಬಾಗಿಲುಗಳಿಲ್ಲದ ಸ್ನಾನಗೃಹ…ಹತ್ತು ವಿದ್ಯಾರ್ಥಿನಿಯರಿಗೆ ಒಂದು ಕೊಠಡಿ | ಸರ್…ಹಾಸ್ಟೆಲ್ ಸಮಸ್ಯೆ ಬಗೆಹರಿಸಿ..


CHITRADURGA NEWS | 14 JANUARY 2024
ಚಿತ್ರದುರ್ಗ (CHITRADURGA): ಬಾಗಿಲುಗಳಿಲ್ಲದ ಸ್ನಾನಗೃಹ, ಸ್ನಾನಕ್ಕೆ ಬಿಸಿ ನೀರಿಲ್ಲ, ಓದಲು ಸ್ಥಳವಿಲ್ಲ, ವಿಪರೀತ ಸೊಳ್ಳೆಕಾಟ, ಕಿಟಿಕಿಗಳು ಹಾಳಾಗಿವೆ…ಹೀಗೆ ಸಾಲು ಸಾಲು ಸಮಸ್ಯೆಗಳನ್ನು ನ್ಯಾಯಾಧೀಶರೆ ಮುಂದೆ ತೆರೆದಿಟ್ಟಿದ್ದು ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು.
ಹೊಸದುರ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿರುವ ಹಾಸ್ಟೆಲ್‌ಗಳಿಗೆ ಶುಕ್ರವಾರ ಹೊಸದುರ್ಗ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವರಾಜು ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇದನ್ನೂ ಓದಿ: ಮೊದಲು ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೊಳಿಸಿ| ರಾಜ್ಯ ರೈತ ಆಗ್ರಹ

ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯಕ್ಕೆ ಮಹಿಳಾ ವಕೀಲರೊಂದಿಗೆ ಭೇಟಿ ನೀಡಿದರು. ಸಿಬ್ಬಂದಿಗಳಿದ್ದರೆ ನೈಜ ಪರಿಸ್ಥಿತಿಯನ್ನು ವಿದ್ಯಾರ್ಥಿನಿಯರು ಹೇಳುವುದಿಲ್ಲ ಎಂಬುದನ್ನು ಮನಗಂಡ ನ್ಯಾಯಾಧೀಶರು, ಎಲ್ಲ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿಕೊಂಡು ಮಾತನಾಡಿಸಿದರು. ಈ ವೇಳೆ ಒಂದಾದಾಗಿ ಸಮಸ್ಯೆ ಹೇಳಿದರು.
ಒಂದು ಕೊಠಡಿಯಲ್ಲಿ ಐದರಿಂದ ಹತ್ತು ವಿದ್ಯಾರ್ಥಿನಿಯರು ಇರುವುದರಿಂದ ಕುಳಿತುಕೊಳ್ಳಲು, ಮಲಗಲು ಬಹಳ ಸಮಸ್ಯೆಯಾಗುತ್ತಿದೆ. ಹಾಸ್ಟೆಲ್‌ನಲ್ಲಿ ಸೊಳ್ಳೆಗಳ ಕಾಟ ಬಹಳಷ್ಟಿದೆ. ಕುಳಿತು ಓದುವುದಕ್ಕೆ ವಾಚನಾಲಯ ಮತ್ತು ಗ್ರಂಥಾಲಯ ಬೇಕಿದೆ.
ಇದನ್ನೂ ಓದಿ: ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ ಕೆ.ಗೋಪಾಲ ರೆಡ್ಡಿ ನಿಧನ
ಸ್ನಾನ ಮಾಡಲು ಬಿಸಿ ನೀರು ಬರುವುದಿಲ್ಲ. ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಲು ಆಗುವುದಿಲ್ಲ. ಬಹಳಷ್ಟು ಸ್ನಾನದ ಗೃಹಗಳಿಗೆ ಬಾಗಿಲುಗಳೇ ಇಲ್ಲದಾಗಿದೆ. ಕಿಟಕಿಗಳು ಸರಿ ಇಲ್ಲ. ಸ್ವಿಚ್ ಬೋರ್ಡ್‌ಗಳ ಸಮಸ್ಯೆ ಇದೆ. ಇದರ ಬಗ್ಗೆ ಹಲವಾರು ಬಾರಿ ಹಾಸ್ಟೆಲ್ ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ದಯವಿಟ್ಟು ಓದುವ ಪರಿಸರ ನಿರ್ಮಿಸಿ ಎಂದು ನ್ಯಾಯಾಧೀಶರಿಗೆ ವಿದ್ಯಾರ್ಥಿಗಳು ಕೋರಿದರು.
ಬಳಿಕ ಅಡುಗೆ ಕೊಠಡಿ, ಶೌಚಾಲಯಗಳ ಸ್ವಚ್ಛತೆ ಪರಿಶೀಲಿಸಿದರು. ಶೌಚಾಲಯ ಮತ್ತು ವಿದ್ಯಾರ್ಥಿನಿಯರು ಮಲಗುವ ಕೊಠಡಿಗಳ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು. ಹಾಸ್ಟೆಲ್ ನಿರ್ವಾಹಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ಜ.19ರಂದು ನಿಮ್ಮ ಇಲಾಖೆಯ ಮುಖ್ಯಸ್ಥರೊಂದಿಗೆ ನ್ಯಾಯಾಲಯಕ್ಕೆ ಬನ್ನಿ ಎಂದು ಹಾಸ್ಟೆಲ್ ವಾರ್ಡನ್‌ಗಳಿಗೆ ತಿಳಿಸಿ ಸ್ಥಳದಿಂದ ತೆರಳಿದರು.
