
CHITRADURGA NEWS | 31 DECEMBER 2025
ಚಿತ್ರದುರ್ಗ: ಜಿಲ್ಲಾ ಪ್ರವಾಸ ಕೈಗೊಂಡಿರುವ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹಾಗೂ ಸದಸ್ಯರುಗಳ ತಂಡ ಡಿ.30ರಂದು ತಮಟಕಲ್ಲು ರಸ್ತೆಯಲ್ಲಿನ ಮೆದೇಹಳ್ಳಿಯ ಅಲ್ಪಸಂಖ್ಯಾತರ ಬಾಲಕ ಹಾಗೂ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಭೇಟಿ ಪರಿಶೀಲಿಸಿತು. ಈ ವೇಳೆ ಆಹಾರ ಪದಾರ್ಥಗಳ ಸರಬರಾಜಿನ ಅಸಮರ್ಪಕ ನಿರ್ವಹಣೆ ಹಾಗೂ ಮಕ್ಕಳಿಗೆ ಅರೆಹೊಟ್ಟೆಯ ಊಟ ನೀಡುತ್ತಿರುವುದಕ್ಕೆ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹೆಸರಿಗೆ ಮಾತ್ರ ಟೆಂಡರ್:
ವಸತಿ ಶಾಲೆಗೆ ಸರ್ಕಾರದಿಂದ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತಿದೆ. ಗೋದಿ, ತೊಗರಿ, ಎಣ್ಣೆ, ತರಕಾರಿ ಸೇರಿದಂತೆ ಉಳಿದ ಸಾಮಗ್ರಿಗಳನ್ನು ಟೆಂಡರ್ ಮೂಲಕ ಪಡೆದುಕೊಳ್ಳಬೇಕು. ಗುತ್ತಿಗೆ ಪಡೆದವರು ವಾಹನದ ಮೂಲಕ ನೇರವಾಗಿ ವಸತಿ ಶಾಲೆಗೆ ಈ ಸಾಮಗ್ರಿಗಳನ್ನು ಸರಬರಾಜು ಮಾಡಬೇಕು.
ಇದನ್ನೂ ಓದಿ: ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿಗೆ ನಡೆದ ಸಂದರ್ಶನದ ವಿವರ
ನಿಯಮಾನುಸಾರ ಗುತ್ತಿಗೆದಾರರು ನೀಡುವ ಸಾಮಗ್ರಿಗಳನ್ನು ಜಿ.ಪಿ.ಎಸ್. ಫೋಟೋ ಹಾಗೂ ತೂಕವನ್ನು ಪರಿಶೀಲಿಸಿ ವಾರ್ಡ್ನ್ ಪಡೆದುಕೊಳ್ಳಬೇಕು. ಈ ನಿಯಮ ವಸತಿ ಶಾಲೆಯಲ್ಲಿ ಪಾಲನೆಯಾಗುತ್ತಿಲ್ಲ. ಹೆಸರಿಗೆ ಮಾತ್ರ ಟೆಂಡರ್ ಕರೆಯಲಾಗಿದೆ.
ಅಡುಗೆ ತಯಾರಿಕೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಾರ್ಡ್ನ್ಗಳು ಸ್ವಃತ ಖರೀದಿ ಮಾಡಿಕೊಂಡು ಬರುತ್ತಾರೆ. ಹೀಗೆ ತಂದ ಸಾಮಗ್ರಿಗಳಿಗೆ ಯಾವುದೇ ತೂಕ, ಅಳತೆಯ ನಿಖರತೆಯಿಲ್ಲ. ಜಿ.ಪಿ.ಎಸ್ ಫೋಟೋ ಇಲ್ಲದಯೇ ಅಧಿಕಾರಿಗಳು ಟೆಂಡರ್ದಾರರಿಗೆ ಬಿಲ್ ಪಾವತಿಸಿದ್ದಾರೆ. ಆಯೋಗದ ಭೇಟಿಯ ವೇಳೆ ಈ ಲೋಪ ಕಂಡು ಬಂದಿದೆ.
ಮಕ್ಕಳಿಗೆ ಅರೆಹೊಟ್ಟೆ ಊಟ:
ವಸತಿ ಶಾಲೆಯಲ್ಲಿನ ಮಕ್ಕಳಿಗೆ ಅರೆಹೊಟ್ಟೆ ಊಟ ಹಾಕಲಾಗುತ್ತಿದೆ. 2 ಚಪಾತಿ ಎನ್ನುವ ನಿಯಮ ಹೇರಲಾಗಿದೆ. ಮಕ್ಕಳು ಹೆಚ್ಚಿನ ಚಪಾತಿ ಕೇಳಿದರೆ ವಾರ್ಡ್ನ್ ಹಾಗೂ ಅಡುಗೆ ಸಿಬ್ಬಂದಿ ನೀಡುತ್ತಿಲ್ಲ. ಮಕ್ಕಳಿಗೆ ಕಡಿಮೆ ಪ್ರಮಾಣದ ಊಟ ನೀಡಲಾಗುತ್ತಿದೆ.
ಇದನ್ನೂ ಓದಿ: ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಆಹಾರ ಸಿದ್ಧಪಡಿಸುವಲ್ಲಿ ಯಾವುದೇ ಗುಣಮಟ್ಟ ಹಾಗೂ ಶುಚಿತ್ವನ್ನು ಕಾಪಾಡಿಕೊಂಡಿಲ್ಲ. ವಸತಿ ಶಾಲೆಗೆ ನವೆಂಬರ್ 26 ರಂದು 237 ಕ್ವಿಂಟಾಲ್ ಅಕ್ಕಿ ಸರಬರಾಜು ಆಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಕ್ಕಿ ಬಳಸಬೇಕು.
ತಿಂಗಳಿಗೆ 35 ರಿಂದ 40 ಕ್ವಿಂಟಾಲ್ ಅಕ್ಕಿ ಖರ್ಚಾಗಬೇಕು. ಈ ಲೆಕ್ಕದ ಪ್ರಕಾರ ಡಿ.30ಕ್ಕೆ ಗೋದಾಮಿನಲ್ಲಿ 187 ಕ್ವಿಂಟಾಲ್ ಅಕ್ಕಿ ಉಳಿದಿರಬೇಕಿತ್ತು, ಆದರೆ 225 ಕ್ವಿಂಟಾಲ್ ಅಕ್ಕಿ ಉಳಿದಿದೆ. ಇದರ ಅರ್ಥ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿದ್ದಪಡಿಸಿಲ್ಲ.
ಬೇಳೆ,ಗೋಧಿ,ಬೆಲ್ಲ,ಎಣ್ಣೆ, ತರಕಾರಿ ಸೇರಿದಂತೆ ಯಾವುದನ್ನು ಸಹ ನಿಗಿದತ ಪ್ರಮಾಣದಲ್ಲಿ ಬಳಸುತ್ತಿಲ್ಲ. ವಾರದ ಕೆಲವು ದಿನ ಮಕ್ಕಳಿಗೆ 100 ಗ್ರಾಂ ಚಿಕನ್ ನೀಡಬೇಕು. ಬರಿ ಎರಡರಿಂದ ಮೂರು ಸಣ್ಣ ಪೀಸು ಚಿಕನ್ ನೀಡುತ್ತಿದ್ದಾರೆ. ಅರೆಹೊಟ್ಟೆ ಊಟ ನೀಡುತ್ತಿರುವುದನ್ನು ಮಕ್ಕಳು ಆಯೋಗದ ಮುಂದೆ ತೆರದಿಟ್ಟಿದ್ದಾರೆ.
ಭೇಟಿ ನೀಡದ ಜಿಲ್ಲಾ ಮಟ್ಟದ ಅಧಿಕಾರಿ:
ಜಿಲ್ಲಾಮಟ್ಟದ ಅಧಿಕಾರಿ ತಿಂಗಳಿಗೊಮ್ಮೆ ತಾಲ್ಲೂಕು ಮಟ್ಟದ ಅಧಿಕಾರಿ ಎರಡು ಬಾರಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ಆದರೆ ನಗರಕ್ಕೆ ಸಮೀಪವಿರುವ ಶಾಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗೆ ಒಮ್ಮೆಯೂ ಭೇಟಿ ನೀಡಿಲ್ಲ.
ಇದನ್ನೂ ಓದಿ: ಸಿರಿಧಾನ್ಯ ಪಾಕ ಸ್ಪರ್ಧೆ | ಯಾವ್ಯಾವ ಸಿಹಿ, ಖಾರ ತಿನಿಸುಗಳನ್ನು ಪ್ರದರ್ಶಿಸಿದರು | ಇಲ್ಲಿದೆ ಮಾಹಿತಿ…
ವಸತಿ ಶಾಲೆಯಲ್ಲಿ ಅಧಿಕಾರಿಗಳ ಭೇಟಿ ವಹಿಯನ್ನೇ ನಿರ್ವಹಣೆ ಮಾಡಿಲ್ಲ. ಶಾಲೆಯಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ವಿತರಿಸಿಲ್ಲ. ಮಕ್ಕಳ ಆರೋಗ್ಯ ತಪಾಸಣೆ ಸಹ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಆಯೋಗದ ಸದಸ್ಯ ಮಾರುತಿ ಎಂ.ದೊಡ್ಡಲಿಂಗಣ್ಣವರ ತಿಳಿಸಿದರು.
ಅಧಿಕಾರಿಗಳ ಸ್ಪಷ್ಟನೆ ಕೋರಿದ ಆಯೋಗ:
ಮಕ್ಕಳಿಗೆ ಎರಡು ಚಪಾತಿ ಮಾತ್ರ ನೀಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ಹೆಚ್ಚುವರಿಯಾಗಿ ಮಕ್ಕಳ ಚಪಾತಿ ಹೇಳಿದರೆ ತಪ್ಪದೇ ನೀಡಬೇಕು. ಮಕ್ಕಳಿಗೆ ಅರೆಹೊಟ್ಟೆ ಊಟ ನೀಡಬಾರದು. ಆಹಾರ ಪದಾರ್ಥಗಳನ್ನು ಟೆಂಡರ್ದಾರಿಂದಲೇ ಪಡೆದುಕೊಳ್ಳಬೇಕು.
ಜಿ.ಪಿ.ಎಸ್ ಫೋಟೋ ಆಧರಿಸಿಯೇ ಗುತ್ತಿಗೆದಾರರ ಬಿಲ್ ಪಾವತಿ ಮಾಡಬೇಕು ಎಂದು ಆಯೋಗದಿಂದ ನಿರ್ದೇಶನ ನೀಡಲಾಗಿದೆ. ನ್ಯೂನ್ಯತೆಗಳ ಬಗ್ಗೆ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರೇಖಾ ಸ್ಪಷ್ಟನೆ ಕೋರಲಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಅಂತಿಮ | ಬಿಜೆಪಿಯಿಂದ ಯಾರು ? | ಆಗ್ನೇಯ ಪದವೀದರರ ಕ್ಷೇತ್ರದ ಫೈಟ್
ಭೇಟಿ ವೇಳೆ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಕೆ.ಎಸ್.ವಿಜಯಲಕ್ಷ್ಮೀ ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
