
CHITRADURGA NEWS | 21 JULY 2025
ಚಿತ್ರದುರ್ಗ: ಒಳಮೀಸಲಾತಿ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ತಿಂಗಳ ಒಳಗಾಗಿ ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಲಿದ್ದು, ಆಗಸ್ಟ್ ತಿಂಗಳಲ್ಲೇ ಜಾರಿ ಮಾಡಲು ಸರ್ಕಾರ ಸಿದ್ಧವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
ಇದನ್ನೂ ಓದಿ: ಕಾರ್ಮಿಕ ಇಲಾಖೆಯಲ್ಲಿ ಅವ್ಯವಹಾರ | ಸಿಬಿಐ ತನಿಖೆಗೆ MLC ಕೆ.ಎಸ್. ನವೀನ್ ಒತ್ತಾಯ
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುವರೆ ದಶಕಗಳ ಕಾಲ ಹೋರಾಟ ಮಾಡಿ ಒಳಮೀಸಲಾತಿಗಾಗಿ ಕಾದವರು ಇನ್ನು ಒಂದು ತಿಂಗಳು ಕಾಯುವುದರಲ್ಲಿ ತಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಹೋರಾಟ, ಬಂದ್, ಪ್ರತಿಭಟನೆ ಬೇಡ ಎಂದು ದಲಿತ ಸಂಘಟನೆಗಳಿಗೆ ಮನವಿ ಮಾಡಿಕೊಂಡರು.
ನ್ಯಾ.ನಾಗಮೋಹನ್ ದಾಸ್ ಆಯೋಗವು 2011ರ ಜನಗಣತಿ, ನ್ಯಾ.ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ವರದಿ ಗಮನಿಸಿದಾಗ ಆದಿ ಕರ್ನಾಟಕ, ಆದಿ ಆಂದ್ರ ಎಂಬ ವರ್ಗದ ಗೊಂದಲ ಕಂಡುಬಂದಿದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸಲು ಸರ್ಕಾರ ಆದೇಶ ನೀಡಿತ್ತು. ಸಮೀಕ್ಷೆ ಪೂರ್ಣಗೊಂಡಿದ್ದು ಆಯೋಗ ಈ ತಿಂಗಳಲ್ಲೇ ವರದಿ ಸಲ್ಲಿಸಲಿದೆ. ವರದಿ ಕೈ ಸೇರಿದ ತಕ್ಷಣ ಒಳಮೀಸಲಾತಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಜನಸಂಖ್ಯೆಯ ನಿಖರವಾದ ಅಂಕಿ ಅಂಶಗಳು ಬರಬೇಕು. ಮುಂದೆ ಯಾರು ಕೂಡಾ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತೆ ಆಗಬಾರದು ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಪ್ರಕ್ರಿಯೆ ಆಗಿದೆ. ಆದರೆ, ಕೆಲ ಹೋರಾಟಗಾರರು, ಬಿಜೆಪಿಯವರು ವಿಳಂಬ ಆಗಿದೆ ಎಂದು ದೂರುತ್ತಿದ್ದಾರೆ. ಮೊದಲ ಸಂಪುಟದಲ್ಲೇ ಅನುಷ್ಠಾನ ಎಂದು ಭರವಸೆ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಗೊಂದಲದ ಕಾರಣಕ್ಕೆ ಸಮಸ್ಯೆ ಆಗಿದೆ ಎಂದು ಆಂಜನೇಯ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಗಳು ನಾಪತ್ತೆ | ತಂದೆ ಆತ್ಮಹತ್ಯೆ | ಪೋಕ್ಸೋ ಕೇಸ್ ದಾಖಲಿಸದ ಪೊಲೀಸರ ವಿರುದ್ಧ ಆಕ್ರೋಶ
ಬೇಗ ಅನುಷ್ಠಾನ ಮಾಡಿ ಎಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಅಲ್ಲಿಗೆ ಹೋಗಿ ಮುತ್ತಿಗೆ ಹಾಕುವುದರಲ್ಲಿ ಅರ್ಥ ಇಲ್ಲ. ಈ ಹಂತದಲ್ಕಿ ಸರ್ಕಾರಕ್ಕೆ ಮುಜುಗರ ಮಾಡುವುದು ಬೇಡ. ಒಂದು ತಿಂಗಳು ಕಾಯೋಣ. ಆಗಸ್ಟ್ ತಿಂಗಳಲ್ಲಿ ಜಾರಿ ಆಗಲಿದೆ ಎಂದರು.
ಇನ್ನೂ ಒಳಮೀಸಲಾತಿ ಕಾರಣಕ್ಕೆ ಒಂಬತ್ತು ತಿಂಗಳ ಕಾಲ ಎಲ್ಲ ಹಂತದ ಸರ್ಕಾರಿ ಹುದ್ದೆಗಳ ಭರ್ತಿ ಮಾಡದೆ ಖಾಲಿ ಇಡಲಾಗಿದೆ. ಈ ವೇಳೆ ಅನೇಕ ಯುವಕರು ವಯೋಮಿತಿಯ ಆತಂಕ ವ್ಯಕ್ತಪಡಿಸಿದ್ದು, ಸರ್ಕಾರ ವಯೋಮಿತಿ ಸಡಿಲಿಕೆ ಮಾಡಿ ನೇಮಕ ಮಾಡಿಕೊಳ್ಳಬೇಕು ಎಂದು ಎಚ್.ಆಂಜನೇಯ ಮನವಿ ಮಾಡಿದರು.
ಒಳ ಮೀಸಲಾತಿ ಜಾರಿಗಳಿಸುವ ಸಂಬಂಧ ಈವರೆಗೆ ಎಲ್ಲಾ ಸರ್ಕಾರಗಳು ಸಹಕಾರ ನೀಡಿವೆ. ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ದಳ ಎಂದು ರಾಜಕೀಯ ಮಾಡುವುದಿಲ್ಲ. ಆದರೆ, ಅನುಷ್ಠಾನಕ್ಕೆ ತರುವ ಸುವರ್ಣಾವಕಾಶ ಕಾಂಗ್ರೆಸ್ಗೆ ಸಿಕ್ಕಿದೆ. ಕಾಂಗ್ರೆಸ್ ಒಳ ಮೀಸಲಾತಿ ಜಾರಿ ಮಾಡಲಿದೆ ಎಂದು ಮಾದಿಗ ಸಮುದಾಯ ಕಾಂಗ್ರೆಸ್ಗೆ ಬೆಂಬಲಿಸಿವೆ. ಅದರ ಋಣ ತೀರಿಸುವ ಕೆಲಸ ಸಿದ್ಧರಾಮಯ್ಯ ಸರ್ಕಾರ ಮಾಡಲಿದೆ ಎಂದು ಆಂಜನೇಯ ತಿಳಿಸಿದರು.
ಇದನ್ನೂ ಓದಿ: BVA ಪದವಿ ಪ್ರವೇಶ | ಅರ್ಜಿ ಸಲ್ಲಿಸಲು ಜುಲೈ 30 ಕೊನೆ ದಿನ
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಶರಣಪ್ಪ, ರವೀಂದ್ರ, ಲಿಂಗರಾಜು ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
