
ಚಿತ್ರದುರ್ಗ ನ್ಯೂಸ್.ಕಾಂ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ವಹಿಸಿರುವ ಸರ್ಕಾರದ ಕ್ರಮ ಖಂಡಿಸಿ ಇಂದು ಪದವಿ ಪೂರ್ವ ಕಾಲೇಜುಗಳ ನೂರಾರು ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಬೀದಿಗಿಳಿದು ಪ್ರತಿಭಟಿಸಿ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರಾಚಾರ್ಯರ ಸಂಘ, ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಿಂದ ನೂರಾರು ಮಂದಿ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಎಲ್ಲ ಉಪನ್ಯಾಸಕರು ಕೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಸರ್ಕಾರದ ನಿರ್ಧಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಎಂದು ಹೆಸರು ಬದಲಿಸಲಾಗಿದೆ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿಯು ಹಂತವನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ ಕೈಬಿಟ್ಟು ಪದವಿ ಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಡಿಸಿ ಕಚೇರಿ ಎದುರು ಕುಳಿತಿ ಅತಿಥಿ ಉಪನ್ಯಾಸಕರು
ಪದವಿ ಪೂರ್ವ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಹಂತಗಳ ನಡುವೆ ಒಂದು ಸೇತುವೆಯಾಗಿ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ನೀಡುತ್ತಾ ಬರುತ್ತಿದೆ.
ಸುಪ್ರಸಿದ್ದ ಕೊಠಾರಿ ಆಯೋಗದ ಶಿಫಾರಸ್ಸಿನಂತೆ +2 ಹಂತವನ್ನು ರಾಜ್ಯದಲ್ಲಿ ಅಳವಡಿಸುವ ಸಲುವಾಗಿ ಪಿ.ಮಲ್ಲಿಕಾರ್ಜುನಪ್ಪ ನೇತೃತ್ವದ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ 1971 ಜನವರಿಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಮುಂದೆ, ಮುಖ್ಯಮಂತ್ರಿಗಳಾದ ದಿ. ಎಸ್.ಬಂಗಾರಪ್ಪ ಹಾಗೂ ಶಿಕ್ಷಣ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಅವರ ದೂರದೃಷ್ಟಿ ಹಾಗೂ ಬದ್ಧತೆಯ ಫಲವಾಗಿ 1992 ಜೂನ್ ತಿಂಗಳಲ್ಲಿ ಸ್ವತಂತ್ರ ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪುಗೊಂಡಿದೆ. ದೇಶದಲ್ಲಿಯೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ಇದು ಪಾತ್ರವಾಗಿದೆ ಎಂದು ತಿಳಿಸಿದರು.
ನಮ್ಮ ಸಿಇಟಿ ಗಳಲ್ಲಿ ಯಶಸ್ಸು ಸಾಧಿಸಿದವರು ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳಲ್ಲಿ ಕುಳಿತಿದದಾರೆ. ಹೀಗೆ ತನ್ನದೇ ಆದ ಶೈಕ್ಷಣಿಕ ಮೌಲ್ಯ ಮತ್ತು ಅಸ್ಮಿತೆ ಹೊಂದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಹಂತ ಹಂತವಾಗಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿರುವುದು ದುರಾದೃಷ್ಟಕರ ಎಂದು ಪ್ರಾಚಾರ್ಯರು, ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮರಣ ಶಯ್ಯೆಯಲ್ಲಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಸುಪುತ್ರ ಮಧುಬಂಗಾರಪ್ಪ ಇಲಾಖೆಯ ಸಚಿವರಾಗಿದ್ದೂ ಕೂಡ ಇಲಾಖೆಯ ಶವ ಪೆಟ್ಟಿಗೆಗೆ ಮೊಳೆ ಹೊಡೆಯುತ್ತಿರುವುದು ವಿಷಾಧಕರ ಎಂದರು.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ ವಿಭಾಗವನ್ನು ಹಿಂತೆಗೆದು ಪುನಃ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿತಪ್ಪಿರುವ ಸಮನ್ವಯವನ್ನು ಮರುಸ್ಥಾಪಿಸಬೇಕು. ಅಲ್ಲದೆ, ಕುಸಿಯುತ್ತಿರುವ ಪರೀಕ್ಷಾ ಮೌಲ್ಯ, ಪಾವಿತ್ರತೆಯನ್ನು ಎತ್ತಿಹಿಡಿಬೇಕು.
ಸರ್ಕಾರವು ಯಾವುದೇ ಶಿಕ್ಷಕರ ಸಂಘಟನೆಗಳ ಜೊತೆಗಾಗಲಿ, ಶಿಕ್ಷಣ ತಜ್ಞರ ಜೊತೆಗಾಗಲಿ ಸಾಧಕ- ಬಾಧಕಗಳನ್ನು ಕುರಿತು ಚರ್ಚೆ, ಸಮಾಲೋಚನೆಗಳನ್ನು ನಡೆಸದೆ ಏಕಾಏಕಿ ಪಿಯು ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ.
ಇದನ್ನೂ ಓದಿ: ಯೂಟ್ಯೂಬ್, ವೆಬ್‍ಸೈಟ್, ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸರ್ಕಾರದ ಸಹಾಯಧನ
ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಕುಸಿಯುವುದು ಮಾತ್ರವಲ್ಲ; ಓದಿನ ಬಗೆಗೆ ತಾತ್ಸಾರವನ್ನು ಬೆಳೆಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ಪದ್ಧತಿಯಿಂದ ನೈಜ ಮೌಲ್ಯಮಾಪನ ಸಾಧ್ಯವಾಗುವುದಿಲ್ಲ. ಈ ವಿಧಾನದಿಂದ ಪ್ರಮಾಣಾತ್ಮಕ ಫಲಿತಾಂಶ ದೊರಕುತ್ತದೆಯೇ ವಿನಃ ಗುಣಾತ್ಮಕ ಫಲಿತಾಂಶವಲ್ಲ! ಜೊತೆಗೆ ಉಪನ್ಯಾಸಕರು ಶೈಕ್ಷಣಿಕ ವರ್ಷಾರಂಭದ ಕೆಲವು ತಿಂಗಳು ನೂತನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಬಿಟ್ಟು, ಹಳೆಯ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ.

ಇಷ್ಟೇ ಅಲ್ಲದೆ, ಸಂಪೂರ್ಣ ಬೇಸಿಗೆ ರಜೆಯನ್ನು ಉಪನ್ಯಾಸಕರು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪಪೂಶಿ ಇಲಾಖೆಯನ್ನು ರಜೆರಹಿತ ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವಿಚಾರವಾಗಿ ಸರ್ಕಾರ ಸಕಾಲದಲ್ಲಿ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು ಬೋಧಕೇತರ ಸಂಘಗಳ ಒಕ್ಕೂಟವು ಮುಂಬರುವ ಡಿಸೆಂಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯ ನೇತ್ರತ್ವವನ್ನು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಲ್.ರಂಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ನಾಗರಾಜಪ್ಪ, ಕೋಶಾಧ್ಯಕ್ಷರು ಎಂ.ರವೀಶ್, ಜಿ.ಪ.ಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ.ಆರ್.ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜ್, ಉಪಾಧ್ಯಕ್ಷರು ಪಿ.ಕಾಂತರಾಜು, ಕಾರ್ಯಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಕೋಶಾಧ್ಯಕ್ಷ ಎನ್.ಕೆಂಚವೀರಪ್ಪ, ಜಿ.ಪ.ಪೂ ಕಾಲೇಜುಗಳ ಬೋಧಕೇತರ ಸಂಘದ ಅಧ್ಯಕ್ಷ ಟಿ.ದುರುಗೇಶಪ್ಪ, ಪ್ರಧಾನ ಕಾರ್ಯದರ್ಶಿ ಎ.ಎಚ್.ಆನಂದ, ಕೋಶಾಧ್ಯಕ್ಷ ಬಿ.ಹೆಚ್.ಸತೀಶ, ಗೌರವಾಧ್ಯಕ್ಷ ಬಸವಯ್ಯ ಸೇರಿದಂತೆ ಉಪನ್ಯಾಸಕರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
