
CHITRADURGA NEWS | 10 JANUARY 2026
ಚಿತ್ರದುರ್ಗ: ಮನೆ, ಮಕ್ಕಳು, ಸಂಸಾರ ಎಂದು ಬಿಡುವಿಲ್ಲದ ಕೆಲಸದ ನಡುವೆ ಮಹಿಳೆ ಒತ್ತಡದ ಬದುಕನ್ನು ನಿಭಾಯಿಸುತ್ತಿದ್ದಾಳೆ. ಈ ನಡುವೆ ತನ್ನ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ. ಆದರೆ, ದಿನಕ್ಕೆ ಒಂದು ಗಂಟೆಯಾದರೂ ತನ್ನ ಆರೋಗ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಜ್ಯೋತಿ ಶರತ್‌ಕುಮಾರ್ ಸಲಹೆ ನೀಡಿದರು.
ಇದನ್ನೂ ಓದಿ: ತ್ರೈಮಾಸಿಕ KDP ಪ್ರಗತಿ ಪರಿಶೀಲನಾ ಸಭೆ ಜನವರಿ 19ಕ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಬರಗೇರಮ್ಮ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಶನಿವಾರ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದ ಮತ್ತು ಮಧ್ಯೆ ವಯಸ್ಸಿನ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಆಧುನಿಕ ಜೀವನ ಶೈಲಿಗೆ ಮರುಳಾಗಿ ಹಳೆಯ ಬದುಕನ್ನೇ ಮರೆತಿದ್ದೇವೆ. ಎಲ್ಲದಕ್ಕೂ ಯಂತ್ರಗಳ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದಾಗಿ ದೈಹಿಕ ಶ್ರಮ ಇಲ್ಲವಾಗಿದೆ. ದೇಹ ಜಡ್ಡುಗಟ್ಟಿ ಊಟಕ್ಕಿಂತ ಮಾತ್ರೆಗಳೇ ಹೆಚ್ಚು ಸೇವಿಸುವಂತಾಗಿದೆ ಎಂದು ಹೇಳಿದರು.
ಮನೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮನೆ, ಸಂಸಾರ, ಗಂಡ ಎಲ್ಲರನ್ನೂ ನೋಡಿಕೊಳ್ಳಬೇಕಾದ ಅಗತ್ಯವಿದೆ. ಬಹುತೇಕ ಮಹಿಳೆಯರು ಸಂಜೆ ವೇಳೆ ಟಿ.ವಿ ಅಥವಾ ಮೊಬೈಲ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳ ಬಗ್ಗೆ ನಿಗಾವಹಿಸುತ್ತಿಲ್ಲ. ಇದರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 10 | ಹತ್ತಿ ರೇಟ್ ಎಷ್ಟಿದೆ?
ನಮ್ಮ ಆಚಾರ, ವಿಚಾರ ಸಂಸ್ಕೃತಿಯನ್ನು ಬೇರೆ ಬೇರೆ ದೇಶಗಳಲ್ಲಿ ಅನುಸರಿಸುತ್ತಿದ್ದಾರೆ. ಅವರ ಸಂಸ್ಕೃತಿಯನ್ನು ನಾವು ಅನುಸರಿಸುತ್ತಿದ್ದೇವೆ. ನಾವು ಮಕ್ಕಳಿಗೆ ಧ್ಯಾನ, ವ್ಯಾಯಾಮ ಹೇಳಿಕೊಡಬೇಕು. ಟಿವಿ, ಮೊಬೈಲ್‌ನಿಂದ ದೂರವಿಡಬೇಕು. ಇಂತಹ ಉತ್ತಮ ಅಭ್ಯಾಸಗಳಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಮಾತನಾಡಿ, ಹಿಂದೆ ಬೆಳಗಿನಿಂದ ಸಂಜೆವರೆಗೆ ಕೆಲಸ ಮಾಡಿಕೊಂಡಿರುತ್ತಿದ್ದರು. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತಿತ್ತು. ಆದರೆ, ಇಂದು ಬಹುತೇಕ ಮಹಿಳೆಯರು ಮನ ಕೆಲಸಗಳಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಇದು ದೇಹಾಲಸ್ಯ, ಸೋಮಾರಿತನ ಬೆಳೆಯುತ್ತಿದೆ. ಹೆಚ್ಚು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುವುದರಿಂದ ಮನೆಯ ಆಗು-ಹೋಗುಗಳು ಅರಿವಿಗೆ ಬಾರದಂತಾಗುತ್ತವೆ. ಮಕ್ಕಳು ದಾರಿ ತಪ್ಪುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 6.30 ಲಕ್ಷ ಸ್ವಸಹಾಯ ಸಂಘ ಗಳಿದ್ದು, 50 ಲಕ್ಷ ಸದಸ್ಯರಿದ್ದಾರೆ. ಇವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಪ್ರಗತಿಗೆ ನೆರವಾಗುತ್ತಿದೆ. ವಿದ್ಯಾರ್ಥಿ, ನಿರ್ಗತಿಕರಿಗೆ, ಹಿರಿಯರಿಗೆ ನೆರವಾಗುತ್ತಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಡಿಪ್ಲೋಮ ಇನ್ ಮ್ಯಾನೇಜ್‍ಮೆಂಟ್ ಅಂಡ್ ರಿಸರ್ಚ್ ಪ್ರೋಗ್ರಾಂ ವ್ಯಾಸಂಗಕ್ಕಾಗಿ ಅರ್ಜಿ ಅಹ್ವಾನ
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷೆ ರೂಪ ಜನಾರ್ಧನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿಗಳಾದ ಚಂದ್ರಹಾಸ, ಶಿವಕುಮಾರ್ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
