
CHITRADURGA NEWS | 24 OCTOBER 2025
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತೀಕ ಮಾಸದ ಅಂಗವಾಗಿ 33 ದಿನಗಳ ಕಾಲ ಆಯೋಜಿಸಿರುವ ವಚನ ಕಾರ್ತೀಕ ಎಂಬ ಅರ್ಥಪೂರ್ಣ ಕಾರ್ಯಕ್ರಮವು ಶ್ರೀಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಆರಂಭಗೊಂಡಿತು.
ಇದನ್ನೂ ಓದಿ: ವಿವಿಧ ಯೋಜನೆ | ಕ್ರಿಶ್ಚಿಯನ್ ಸಮುದಾಯದಿಂದ ಅರ್ಜಿ ಅಹ್ವಾನ
ಮುಂಚೂಣಿಯಲ್ಲಿಲ್ಲದ ಸುಮಾರು 66 ವಚನಕಾರರ ವಚನಗಳು, ಅವರ ವ್ಯಕ್ತಿತ್ವ ಕುರಿತಾದ ಪಥದರ್ಶನ ಕಾರ್ಯಕ್ರಮದಲ್ಲಿ ಮೊದಲದಿನ ಶಿವಶರಣರಾದ ಹೊಡೆಹುಲ್ಲ ಬಂಕಣ್ಣ ಹಾಗೂ ಗೋರಕ್ಷ/ಗೋರಖನಾಥರ ಬಗೆಗೆ ವಿಷಯಾವಲೋಕನ ನಡೆಯಿತು.
ಆರಂಭಕ್ಕೆ ಆ ಶರಣರ ವಚನಪಠಣವನ್ನು ಶ್ರೀಮಠದ ವಿದ್ಯಾರ್ಥಿ ನಂದನ್ ಹಾಗೂ ಭುವನ್ ವಾಚಿಸಿದರು. ಈ ಎರಡು ವಚನಗಳನ್ನು ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಗಾಯನ ನಡೆಸಿಕೊಟ್ಟರು.
ಹೊಡೆಹುಲ್ಲ ಬಂಕಣ್ಣ ಅವರ ಬಗ್ಗೆ ಮಾತನಾಡಿದ ಕಡ್ಲೆಗುದ್ದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ.ಮಹೇಶ್, ಬಂಕಣ್ಣ ಅವರು 12ನೇ ಶತಮಾನದಲ್ಲಿ ಮಹಾಮನೆ ಮತ್ತು ಅನುಭವ ಮಂಟಪದಲ್ಲಿ ಹುಲ್ಲು ಮಾರುವ ಕಾಯಕ ಮಾಡಿಕೊಂಡಿದ್ದು ಚರ್ಚೆ ಸಂವಾದ ಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದ ಇವರು ಜಗನ್ನಾಥ ಸಾಕ್ಷಿಯಾಗಿ ಕುಂಭೇಶ್ವರಲಿಂಗ ಅಂಕಿತದ 10 ವಚನಗಳು ಲಭ್ಯವಾಗಿವೆ.
ಇದನ್ನೂ ಓದಿ: ಸಮುದಾಯ ಭವನ ಎಲ್ಲರಿಗೂ ಉಪಯೋಗವಾಗಲಿ | ಶಾಸಕ ಎಂ.ಚಂದ್ರಪ್ಪ
ಇವರ ವಚನಗಳು ಹೆಚ್ಚಾಗಿ ತತ್ವ ನಿರೂಪಣಾ ಶೈಲಿಯಲ್ಲಿದ್ದು ನಾವು ಯಾವುದೇ ಕೆಲಸವನ್ನು ಮಾಡುವುದಿದ್ದರೆ ನಿಷ್ಠೆ, ಭಾವಶುದ್ಧಿ, ದೈವಸೇವೆಯೆಂದು ಮಾಡಿ ಫಲವನ್ನು ಪ್ರಸಾದವೆಂದು ಕಾಣುವವರೇ ನಿಜವಾದ ಶರಣನ ಸೇವೆ, ಕಾಯಕವೇ ಕಳಸ, ಕಾಯಕವೇ ಪೂಜೆ ಎಂದು ಪರಿಭಾವಿಸಿದ್ದರು ಬಂಕಣ್ಣ ಎಂದು ಹೇಳಿದರು.
ನಗರದ ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಸಜ್ಜನ್ ಅವರು ಗೋರಕ್ಷ/ಗೋರಖನಾಥ ಶರಣರ ಬಗ್ಗೆ ಮಾತನಾಡಿ, ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗ ಅಂಕಿತದಲ್ಲಿ 10 ವಚನಗಳು ಲಭ್ಯವಿದ್ದು, ಅಲ್ಲಮಪ್ರಭುಗಳ ಸಂದರ್ಶನಕ್ಕಿಂತ ಮುಂಚೆ ಯೋಗಸಿದ್ಧಿಯಿಂದ ದೇಹದ ಮೇಲೆ ಪ್ರಭುತ್ವ ಹೊಂದಿದ್ದರೆಂದು, ಇವರು ಶ್ರೀಶೈಲದಲ್ಲಿದ್ದ ಬಗ್ಗೆ ಐತಿಹ್ಯವಿದೆ. ಅಲ್ಲಮರ ಸಂಗದಿಂದ ಅನುಭವ ಮಂಟಪಕ್ಕೆ ತೆರಳಿ ಶಿವಯೋಗಾನುಸಂಧಾನದಿಂದ ಆದ ಅನುಭವ ವಚನಗಳಲ್ಲಿ ಉಲ್ಲೇಖವಾಗಿದೆ ಎಂದ ಅವರು ಒಂದು ವಚನಕ್ಕೆ ಅರ್ಥಸಹಿತ ವಿವರಣೆ ನೀಡಿದರು.
ಮನುಷ್ಯ ಬಾಹ್ಯ ಜೀವನಕ್ಕೆ ಅಥವಾ ರೂಪಕ್ಕೆ ಅಂಟಿಕೊಳ್ಳದೆ ಮನಸ್ಸಿನ ಶುದ್ಧತೆ, ನೈಜತೆ, ಸತ್ಯಭಾವ ಮತ್ತು ಸೇವಾಭಾವ ಬೆಳೆಸಿಕೊಂಡರೆ ಅದು ನಾವು ಗುರುವಿಗೆ ಕೊಡುವ ನಿಜಗೌರವ. ಅದರಂತೆ ಗೋರಕ್ಷನಾಥರ ತತ್ವ ಪ್ರತಿಪಾದನೆಯ ಮೂಲದ್ರವ್ಯ ಅರಿವೇ ದೇವರು, ಅದುವೇ ಪೂಜೆ. ಅರಿವೇ ಸೇವೆ ಎನ್ನುವುದು ದಿಟವೆಂದು ಪ್ರತಿಪಾದಿಸಿದ್ದಾರೆಂದು ವಿಶ್ಲೇಷಿಸಿದರು.
ಇದನ್ನೂ ಓದಿ: ನಗರಸಭೆ ಸದಸ್ಯರ ಪ್ರವಾಸ | ಅಕ್ರಮ ಮತ್ತು ಮೋಜು ಮಸ್ತಿಗಾಗಿ | ಮಹೇಶ್ ಸಿ ನಗರಂಗೆರೆ
ಸಾನ್ನಿಧ್ಯ ವಹಿಸಿದ್ದ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಮಠವು ಶೂನ್ಯಪೀಠ ಪರಂಪರೆಯ ಮಠವಾಗಿದ್ದು, ಶರಣಸಂಸ್ಕೃತಿ ಮತ್ತು ಬಸವತತ್ವ ಪ್ರತಿಪಾದನೆಯ ಮೇಲೆ ಅನುಷ್ಠಾನ ಅದರ ಪ್ರಸಾರ ಹಾಗೂ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.
ನಮಗೆ ಬಸವಣ್ಣ, ಅಲ್ಲಮರು, ಅಕ್ಕಮಹಾದೇವಿ, ಸಿದ್ಧರಾಮ ಹೀಗೆ ಮುಂಚೂಣಿಯಲ್ಲಿರುವ ಶರಣರಷ್ಟೇ ಗೊತ್ತು. ನೂರಾರು ಅಲಕ್ಷಿತ ಶೋಷಿತ ಸಮುದಾಯಗಳನ್ನು ಪ್ರತಿನಿಧಿಸುವ ವಚನಕಾರರು ಗೊತ್ತಿಲ್ಲ. ಅವರ ವ್ಯಕ್ತಿತ್ವ ಸಾಧನೆ ಮತ್ತು ಅವರ ರಚನೆಯ ವಚನಗಳನ್ನು ಅರ್ಥೈಸುವ ಕೆಲಸ ಆಗಬೇಕಿದೆ ಎಂದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಬಸವಮುರುಘೇಂದ್ರ ಸ್ವಾಮೀಜಿ ಅವರು ಮಾತನಾಡುತ್ತ, ಇಬ್ಬರು ವಚನಕಾರರ ಪ್ರಮುಖ ಅಂಶಗಳನ್ನು ಉದಾಹರಣೆ ಸಹಿತ ಜೀವನದ ಪ್ರಮುಖ ಘಟ್ಟಗಳನ್ನು ಉದಾಹರಿಸಿದರು.
ಕಾರ್ಯಕ್ರಮವು ನಿರಂತರವಾಗಿ 33 ದಿನಗಳ ಕಾಲ ಸರಿಯಾದ ನಿಗದಿತ ವೇಳೆಗೆ ಆರಂಭವಾಗಲಿದ್ದು, ಇಲ್ಲಿ ವಿಚಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಸಾರ್ವಜನಿಕರು ನಮ್ಮ ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿಯವರು ಅಮೂಲ್ಯ ಚಿಂತನ ವಿಷಯಗಳನ್ನು ಬಂದು ಕೇಳಿ ಮನನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 24| ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಸಮಾರಂಭದ ವೇದಿಕೆಯಲ್ಲಿ ಯೋಗವನ ಬೆಟ್ಟದ ಬೆಂಗಳೂರು ಶಾಖೆಯ ಶಾಮಣ್ಣ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಆರತಿ ಶಿವಮೂರ್ತಿ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಡಾ.ಪಿ.ಬಿ. ಭರತ್, ಹಿರಿಯ ನಾಗರಿಕರಾದ ಪ್ರೊ.ಬಿ.ಹೆಚ್. ಹರೀಶ್, ರುದ್ರಮುನಿ, ಆನಂದ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಎಸ್.ಜೆ.ಎಂ. ಶಾಲಾಕಾಲೇಜುಗಳ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರ್ತೃಗದ್ದುಗೆಯಲ್ಲಿ ಗುಮಾಸ್ತ ಕಾಲೋನಿಯ ಟಿ.ನಿರಂಜನ ಮತ್ತು ಮಕ್ಕಳು ಈ ದಿನದ ವಚನ ಕಾರ್ತೀಕ ಪೂಜೆ ನೆರವೇರಿಸಿದರು.
ಸಮಾರಂಭದ ನಿರ್ವಹಣೆ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆಯಿತು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಮಾಡಿದರು. ಡಾ. ಚೇತನ್ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಆರ್.ಎಸ್. ಜಯದೇವ್ ಮಾಡಿದರೆ, ಎಂ.ಪಲ್ಲವಿ ಶರಣುಸಮರ್ಪಣೆ ಮಾಡಿದರು.
ಇದನ್ನೂ ಓದಿ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ | ನಾನು ಸಹಾ ಆಕಾಂಕ್ಷಿ | ವಸಂತಕುಮಾರ್
2ನೇ ದಿನದ ಕಾರ್ಯಕ್ರಮ : ಶಿವಶರಣರಾದ ಘಟ್ಟಿವಾಳಯ್ಯ ಮತ್ತು ಹೆಂಡದ ಮಾರಯ್ಯನವರ ಸ್ಮರಣೆ ವಚನ ಪಠಣ ಹಾಗೂ ಅರ್ಥ ವಿವರಣೆ.
ಘಟ್ಟಿವಾಳಯ್ಯ : ಆರ್. ಜೆ.ವಿನಾಯಕ, ಚುಟುಕು ಸಾಹಿತಿ, ಚಿತ್ರದುರ್ಗ. ಹೆಂಡದ ಮಾರಯ್ಯ : ಡಾ.ಬಿ.ಟಿ. ಲೋಲಾಕ್ಷಮ್ಮ, ಸರ್ಕಾರಿ ನೌಕರರ ಸಂಘ, ಚಿತ್ರದುರ್ಗ ಘಟಕ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
