ಕ್ರೈಂ ಸುದ್ದಿ
Swamiji Arrest: ಹೊಸಪೇಟೆಯಲ್ಲಿ ಚಿತ್ರದುರ್ಗದ ಸ್ವಾಮೀಜಿ ಬಂಧನ | ಬರೋಬ್ಬರಿ ₹35 ಲಕ್ಷ ವಶ

CHITRADURGA NEWS | 09 SEPTEMBER 2024
ಚಿತ್ರದುರ್ಗ: ಪೂಜೆ ಸಲ್ಲಿಸಿ ಹಣ ದುಪ್ಪಟ್ಟು ಮಾಡುವುದಾಗಿ ಜನರಿಗೆ ವಂಚನೆ ಮಾಡುತ್ತಿದ್ದ ಸ್ವಾಮೀಜಿ ಹಾಗೂ ಆತನ ಸಹಚರರನ್ನು ಹೊಸಪೇಟೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ, ಚಿತ್ರದುರ್ಗದ ವಾಸಿ ಜಿತೇಂದ್ರ ಸಿಂಗ್ (25), ಹೊಸಪೇಟೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ (29) ಮತ್ತು ಶಂಕು ನಾಯ್ಕ (30) ಬಂಧಿತ ಆರೋಪಿಗಳು. ಬಂಧಿತರಿಂದ ₹35.14 ಲಕ್ಷ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಿತೇಂದ್ರ ಸಿಂಗ್ ನಕಲಿ ಸ್ವಾಮೀಜಿ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಜಿತೇಂದ್ರ ಸಿಂಗ್ ಪೂಜೆ ಮಾಡಿ ಹಣ ದ್ವಿಗುಣ ಮಾಡುತ್ತಾರೆಂದು ಕಲ್ಲಹಳ್ಳಿಯ ಕುಮಾರ ನಾಯ್ಕ ಅವರಿಗೆ ಅದೇ ಗ್ರಾಮದ ತುಕ್ಯಾ ನಾಯ್ಕ ಹಾಗೂ ಶಂಕು ನಾಯ್ಕ ನಂಬಿಸಿದ್ದರು. ಸೆ.4ರಂದು ಜಿತೇಂದ್ರ ಸಿಂಗ್‌ನನ್ನು ಪರಿಚಯಿಸಿದ್ದರು. ಪೂಜೆಗೆ ₹7.5 ಲಕ್ಷ ಇಟ್ಟರೆ ₹80 ಲಕ್ಷ ಮಾಡಿಕೊಡುವುದಾಗಿ ಹೇಳಿ, ಪೆಟ್ಟಿಗೆಯಲ್ಲಿ ಇಟ್ಟಂತೆ ಮಾಡಿದ್ದರು. 170 ದಿನದ ಬಳಿಕ ತೆರೆದು ನೋಡುವಂತೆ ತಿಳಿಸಿದ್ದರು.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 09 | ಮೌಲ್ಯದ ವಸ್ತು ಖರೀದಿ, ಸಹೋದರರಿಂದ ಶುಭ ಸುದ್ದಿ
ಸೆ.7ರಂದು ಅದೇ ಗ್ರಾಮದ ರಾಜ ನಾಯ್ಕ ಎಂಬುವವರ ಮನೆಯಲ್ಲೂ ಪೂಜೆ ಮಾಡಲು ಮೂವರು ಆರೋಪಿಗಳು ಹೋದಾಗ ಇದು ಸುಳ್ಳೆಂದು ಕುಮಾರ ನಾಯ್ಕ ಅವರಿಗೆ ತಿಳಿದು ಬಂದಿದೆ. ತಮ್ಮ ಮನೆಯಲ್ಲಿದ್ದ ಪೆಟ್ಟಿಗೆ ತೆರೆದಾಗ ಹಣದ ಬದಲು, ಅಗರಬತ್ತಿ, ಉಸುಕಿನ ಚೀಲ ಹಾಗೂ 3 ಟವೆಲ್‌ಗಳು ಇದ್ದವು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿತ್ತು. ₹35,14,740 ನಗದು ಹಾಗೂ ನೋಟು ಎಣಿಸುವ ಯಂತ್ರ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಹಲವರು ಮೋಸ ಹೋಗಿರುವ ಸಾಧ್ಯತೆ ಇದ್ದು, ಅಂತಹವರು ದೂರು ನೀಡಬೇಕು. ಆಗ ತನಿಖೆಗೂ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಬಿ.ಎಲ್.ಶ್ರೀಹರಿಬಾಬು ತಿಳಿಸಿದ್ದಾರೆ.
ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿ ಟಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ಗುರುರಾಜ್ ಆರ್.ಕಟ್ಟಿಮನಿ, ಪಿಎಸ್‌ಐಗಳಾದ ಎಚ್.ನಾಗರತ್ನ, ಜಯುಲಕ್ಷ್ಮಿ, ಸಿಬ್ಬಂದಿ ಕೀಮ್ಯಾ ನಾಯ್ಕ್, ಮೋತಿ ನಾಯ್ಕ್. ಆರ್.ವೆಂಕಟೇಶ, ಪರಮೇಶ್ವರಪ್ಪ, ಪಿ.ಮಂಜುನಾಥ ಮೇಟಿ, ವಿ.ರಾಘವೇಂದ್ರ, ಹೊನ್ನೂರಪ್ಪ, ಸಣ್ಣ ಗಾಳೆಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
