ಮುಖ್ಯ ಸುದ್ದಿ
ವಿದ್ಯಾರ್ಥಿನಿಲಯಕ್ಕೆ ಸಚಿವ, ಶಾಸಕರ ದಿಢೀರ್ ಭೇಟಿ | ವಾರ್ಡನ್‌ಗೆ ಕ್ಲಾಸ್

CHITRADURGA NEWS | 24 MAY 2024
ಚಿತ್ರದುರ್ಗ: ಊಟದ ಸಮಸ್ಯೆ, ಸ್ವಚ್ಛತೆ ಬಗ್ಗೆ ವಿದ್ಯಾರ್ಥಿನಿಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರದ ಅಲ್ಪಸಂಖ್ಯಾತರ ಮೆಟ್ರಿಕಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ರಾತ್ರಿ 9 ಗಂಟೆ ವೇಳೆಗೆ ದಿಢೀರ್ ಆಗಮಿಸಿ ವಿದ್ಯಾರ್ಥಿನಿಯರನ್ನು ಪರಿಚಯಿಸಿಕೊಂಡರು. ಧೈರ್ಯವಾಗಿ ನಿಮ್ಮ ಸಮಸ್ಯೆ ಹೇಳಿ..ಇಲ್ಲಿ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾವಿದ್ದೇವೆ ಎಂದು ಸಚಿವರು, ಶಾಸಕರು ಹೇಳುತ್ತಿದ್ದಂತೆ ವಿದ್ಯಾರ್ಥಿನಿಯರು ಸಮಸ್ಯೆಗಳ ಪಟ್ಟಿಯನ್ನು ತೆರೆದಿಟ್ಟರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೂ ಬಂತು ಡ್ರೋನ್ | ಔಷಧ ಸಿಂಪರಣೆಗೆ ರೈತರಿಗೆ ನೆರವು


ಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಸಮಸ್ಯೆ ತಿಳಿಸಿದ ವಿದ್ಯಾರ್ಥಿನಿಯರು
ಈವರೆಗೂ ನಾವು ಮೆನು ಚಾರ್ಟ್ ನೋಡಿಲ್ಲ, ವಾರಕ್ಕೆ ಒಂದು ದಿನ ಮಾತ್ರ ಮೊಟ್ಟೆ ನೀಡುತ್ತಾರೆ. ಒಂದೇ ಥರಾ ಅಡುಗೆ ಮಾಡುತ್ತಾರೆ. ಇಲ್ಲಿನ ಕೆಲಸದವರು ವಾರ್ಡನ್ ಮನೆ ಕೆಲಸಕ್ಕೆ ಹೋಗುತ್ತಾರೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು. ಈ ವೇಳೆ ವಾರ್ಡನ್ ಮಧ್ಯ ಪ್ರವೇಶಿಸುತ್ತಿದ್ದಂತೆ ಮಕ್ಕಳು ಏಕೆ ಸುಳ್ಳು ಹೇಳ್ತಾರೆ ಎಂದು ಸಚಿವರು ಗರಂ ಆದರು.
ಬಳಿಕ 20 ನಿಮಿಷಕ್ಕೂ ಹೆಚ್ಚು ಸಮಯ ವಿದ್ಯಾರ್ಥಿ ನಿಲಯವನ್ನು ಪರಿಶೀಲಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ‘ನೀವು ಚೆನ್ನಾಗಿ ಓದಿ. ಎಲ್ಲ ವ್ಯವಸ್ಥೆ ಸರಿಯಾಗುತ್ತದೆ. ಈ ವಾರ್ಡನ್ ಅಮಾನತು ಮಾಡಿ ಹೊಸಬರನ್ನು ಕಳಿಸುತ್ತೇವೆ. ನಿಮಗೆ ಯಾರದರು ಬೆದರಿಕೆ ಹಾಕಿದರೆ ಶಾಸಕರ ಇಲ್ಲವೇ ನನ್ನ ಗಮನಕ್ಕೆ ತನ್ನಿ. ನಮ್ಮ ಆಪ್ತ ಸಹಾಯಕರ ಫೋನ್ ನಂಬರ್‌ಗೆ ಕರೆ ಮಾಡಿ ತಿಳಿಸಿ. ನಾವಿದ್ದೇವೆ’ ಎಂದು ಹೇಳಿ ಸ್ಥಳದಿಂದ ತೆರಳಿದರು.


ವಿದ್ಯಾರ್ಥಿ ನಿಲಯಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ
ಗುರುವಾರ ಬೆಳಿಗ್ಗೆ ಶಾಸಕ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿನಿಲಯ ಇಬ್ಬರು ವಿದ್ಯಾರ್ಥಿನಿಯರು ಶಾಸಕರಿಗೆ ವಿದ್ಯಾರ್ಥಿನಿಲಯದ ಸಮಸ್ಯೆ ತಿಳಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರು ಸಂಜೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರನ್ನು ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಿ ಬಂದಿದ್ದಾರೆ.
