
ಚಿತ್ರದುರ್ಗ ನ್ಯೂಸ್.ಕಾಂ: ದೇವಸ್ಥಾನಗಳ ಹುಂಡಿಗೆ ಬೀಳುವ ಹಣ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಆದರೆ, ಮಸೀದಿ, ಚರ್ಚ್‍ಗಳಲ್ಲಿ ಬರುವ ಹಣ ಎಲ್ಲಿ ಹೋಗುತ್ತದೆ ಎಂದು ವಿಎಚ್‍ಪಿ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸ್ಥಾಣುಮಾಲಾಯನ್ ಪ್ರಶ್ನಿಸಿದರು.
ನಗರದ ಬಿ.ಡಿ.ರಸ್ತೆಯಲ್ಲಿರುವ ಜೈನಧಾಮದಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್ತಿಗೆ ಷಷ್ಠಿಪೂರ್ತಿ ಅಂಗವಾಗಿ ಬಜರಂಗದಳದಿಂದ ಹಮ್ಮಿಕೊಂಡಿದ್ದ ಶೌರ್ಯ ಜಾಗರಣಾ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ವಿಶ್ವಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ | ಬಜರಂಗದಳ ಶೌರ್ಯ ಜಾಗರಣಾ ರಥಯಾತ್ರೆಗೆ ದುರ್ಗದಲ್ಲಿ ಚಾಲನೆ

ಚರ್ಚ್-ಮಸೀದಿಗಳಲ್ಲಿ ಬರುವ ಹಣವನ್ನು ನಮ್ಮ ಸರ್ಕಾರಗಳು ಪ್ರಶ್ನೆ ಮಾಡುವುದಿಲ್ಲ. ರೈಲ್ವೇಗೆ ಇರುವಷ್ಟು ಆಸ್ತಿ ವಕ್ಫ್ ಬೋರ್ಡ್ ಹೊಂದಿದೆ. ದೇಶದಲ್ಲಿ ದಿನೇ ದಿನೇ ಚರ್ಚ್, ಮಸೀದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸುಮಾರು ಹತ್ತು ಸಾವಿರ ದೇವಸ್ಥಾನಗಳನ್ನು ಕೆಡವಲಾಗಿದೆ. ಪ್ರಶ್ನೆ ಮಾಡಿದರೆ ಇದು ಜಾತ್ಯಾತೀತ ದೇಶ ಎನ್ನಲಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲೂ ಅಲ್ಲಿ ದೇವಸ್ಥಾನವಿತ್ತು. ಆದರೆ, 1947ರ ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳು ಆ ಜಾಗವನ್ನು ಸರ್ಕಾರಿ ಜಾಗ ಎಂದು ಭಾವಿಸುವುದು ಯಾವ ನ್ಯಾಯ ಎಂದರು.
ದೇಶದಲ್ಲಿ ಇಂತಹ ಅನೇಕ ಅನಾಹುತಕಾರಿ ಘಟನೆಗಳು ನಡೆಯುತ್ತಿವೆ. ಇವುಗಳನ್ನು ಪ್ರಶ್ನೆ ಮಾಡುತ್ತಾ, ಹಿಂದುಗಳನ್ನು ಜಾಗೃತಿ ಮಾಡುವ ಕೆಲಸವನ್ನು ಕಳೆದ 60 ವರ್ಷಗಳಿಂದ ವಿಶ್ವಹಿಂದೂ ಪರಿಷತ್ ಮಾಡುತ್ತಾ ಬಂದಿದೆ. ಆದರೂ, ನಮ್ಮ ಸಮಾಜ ಮಲಗಿದೆ. ಅದನ್ನು ಎಚ್ಚರಿಸುವ ಕೆಲಸವನ್ನು ಬಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ಶ್ರೀಕೃಷ್ಣನ ನೀತಿಗಳು ಜಗತ್ತಿನ ಎಲ್ಲ ಧರ್ಮಗಳನ್ನು ಉಳಿಸಬಲ್ಲವು. ಇಲ್ಲದಿದ್ದರೆ ಮುಂದೊಂದು ದಿನ ಎಲ್ಲರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇಂದು ವಿಶ್ವಹಿಂದೂ ಪರಿಷತ್ ಜಗತ್ತಿನ ಅತೀ ದೊಡ್ಡ ಹಿಂದೂ ಸಂಘಟನೆಯಾಗಿ ಬೆಳೆದು ನಿಂತಿದೆ. ಜಗತ್ತಿನ ಎಲ್ಲ ದೇಶಗಳಲ್ಲಿ ವಿಎಚ್‍ಪಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಹಿಂದೂ ಎದ್ದರೆ ವಿಶ್ವವೇ ಎದ್ದಂತೆ ಎನ್ನುವ ಮಾತಿದೆ. ಲೋಕೋ ಸಮಸ್ತಾ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂದು ಹಿಂದುಗಳು ಮಾತ್ರ ಹೇಳುತ್ತೇವೆ. ಭಾರತ ಅಮೃತ ಕಾಲದಲ್ಲಿದೆ. ಭಾರತ ಬೆಳೆದರೆ ಇಡೀ ಜಗತ್ತು ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತ, ಹಿಂದೂ ಸಮಾಜ ಋಷಿ ಪರಂಪರೆ ಹೊಂದಿದೆ. ಆದರೆ, ಹಿಂದೂಗಳು ಮಲಗಿದ್ದಾರೆ. ಅವರ ಜಾಗೃತಿಗಾಗಿ ಈ ಜಾಗರಣಾ ಯಾತ್ರೆ. ರಾಮಾಯಣದಲ್ಲಿ ಹನುಮಂತನಿಗೆ ಜಾಂಬವಂತ ಜಾಗೃತಿ ಮೂಡಿಸಿದಂತೆ, ಇಂದು ವಿಶ್ವಹಿಂದೂ ಪರಿಷತ್, ಬಜರಂಗದಳ ಜಾಗರಣ ಮಾಡುತ್ತಿದೆ ಎಂದರು.
ಆರೆಸ್ಸೆಸ್ಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ಶೌರ್ಯಕ್ಕೆ ಹೆಸರಾದ ಚಿತ್ರದುರ್ಗದಲ್ಲಿ ಆರಂಭವಾಗುತ್ತಿರುವ ರಥಯಾತ್ರೆ ಧರ್ಮಕ್ಕೆ ಹೆಸರಾದ ಉಡುಪಿಯಲ್ಲಿ ಸಮಾರೋಪಗೊಳ್ಳುತ್ತಿದೆ. ಇದು ಉದ್ದೇಶಪೂರ್ವಕವಾಗಿ ಆಗುತ್ತಿರುವ ವಿಷವಲ್ಲ. ಧರ್ಮ-ಕರ್ಮ ಸಂಯೋಗ ಎಂದು ಬಣ್ಣಿಸಿದರು.
ಶಾಂತಿಯ ಅಡಿಪಾಯ ಶೌರ್ಯ. ಶಾಂತಿ ಮತ್ತು ಶೌರ್ಯ ಪರಸ್ಪರ ಅವಲಂಬಿತ. ಒಂದನ್ನು ಬಿಟ್ಟು ಒಂದಿಲ್ಲ. ಶೌರ್ಯ ಇದ್ದರೆ ಶಾಂತಿಯೂ ಇರುತ್ತದೆ. ಶಾಂತಿ ಇದ್ದರೆ ಶೌರ್ಯವೂ ಇರುತ್ತದೆ. ನಮ್ಮ ಸಮಾಜ ಮೊದಲಿನಿಂದಲೂ ಶೌರ್ಯದ ಆರಾಧನೆ ಮಾಡಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಶೌರ್ಯ ಜಾಗೃತಿ ಮಾಡುವ ಕೆಲಸಕ್ಕೆ ಬಜರಂಗದಳ ಕೈ ಹಾಕಿದೆ ಎಂದರು.
ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಮಾತನಾಡಿ, ರಾಷ್ಟ್ರ ವಿರೋಧಿಗಳು ಡ್ರಗ್ಸ್ ಜಿಹಾದ್ ಮಾಡುತ್ತಿದ್ದಾರೆ. ಪಾಕಿಸ್ಥಾನ, ಬಾಂಗ್ಲಾ ದೇಶಗಳಿಂದ ಡ್ರಗ್ಸ್ ಸರಬರಾಜಾಗುತ್ತಿದೆ. ದೇಶದ ಯುವ ಪೀಳಿಗೆಯನ್ನು ಹಾಳು ಮಾಡಲು ಈ ಜಾಲ ವಿಸ್ತರಿಸಿದೆ. ಯುವಕರು ದಿಕ್ಕು ತಪ್ಪಿದರೆ ದೇಶ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಅಯೋಗ್ಯರು, ಅವಿವೇಕಿಗಳು ಹಿಂದೂ ಧರ್ಮದ ಬಗ್ಗೆ ಅಧ್ಯಯನ ಇಲ್ಲದೆ ಹಿಂದು ಧರ್ಮ ನಾಶ ಮಾಡುವ ಹೇಳಿಕೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಕೆಲ ವಿಶ್ವವಿದ್ಯಾಲಯಗಳು ನಮ್ಮದೇ ಯುವಕರನ್ನು ರಾಷ್ಟ್ರದ್ರೋಹಿಗಳನ್ನಾಗಿ ಮಾಡುತ್ತಿವೆ. ಕನ್ನಯ್ಯ ಕುಮಾರ್ ಅವರಂತಹ ಯುವಕರನ್ನು ರಾಷ್ಟ್ರದ್ರೋಹಿಗಳನ್ನಾಗಿ ಮಾಡುವ ಕೆಲಸವನ್ನು ಕೆಲ ಪ್ರೊಫೆಸರ್‍ಗಳು ಮಾಡುತ್ತಿದ್ದಾರೆ ಎಂದರು.
ಪಕ್ಷದ ವಿಚಾರ ಬಂದಾಗ ಅದು ನಿಮ್ಮ ವೈಯಕ್ತಿಕ. ಸೂಕ್ತ ವ್ಯಕ್ತಿಗೆ ಮತ ಹಾಕಿ. ಆದರೆ, ಹಿಂದೂ ಎಂದು ಬಂದಾಗ ದೇಶದ ಹಿತ, ಹಿಂದುಗಳ ಹಿತವನ್ನು ಕಾಯುವ ಕೆಲಸ ಮಾಡಿ ಎಂದು ಸೂರ್ಯನಾರಾಯಣ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸೇವಾಲಾಲ್ ಸ್ವಾಮೀಜಿ, ವಿಎಚ್‍ಪಿ ರಾಜ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್, ಸಹ ಸಂಯೋಜಕ ಪ್ರಭಂಜನ್, ಶೌರ್ಯ ಜಾಗರಣಾ ಯಾತ್ರೆ ರಾಜ್ಯ ಸಮಿತಿ ಸದಸ್ಯ ಟಿ.ಬದರೀನಾಥ್, ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಇತರರಿದ್ದರು.
ಮತಾಂತರ ಇಂದು ದಲಿತ ಅಥವಾ ಹಿಂದುಳಿದವರಿಗೆ ಸೀಮಿತವಾಗಿಲ್ಲ. ಲಿಂಗಾಯತರು ಸೇರಿದಂತೆ ಎಲ್ಲ ವರ್ಗದವರು ಮತಾಂತರ ಆಗುತಿರುವುದು ಆತಂಕದ ಸಂಗತಿ. ಮತಾಂತರಕ್ಕೆ ಕಾರಣ ಅಸಮಾನತೆ, ಜಾತಿಯತೆ, ದೇವಸ್ಥಾನಗಳ ಪ್ರವೇಶ ನಿರಾಕರಣೆಯಾಗಿದೆ. ಈ ನಿಟ್ಟಿನಲ್ಲಿ ಸಮಾಜ ಬದಲಾಗಬೇಕು. ಸದ್ಯದ ಬೆಳವಣಿಗೆ ಉತ್ತಮವಾಗಿದೆ. ಸಾಕಷ್ಟು ಬದಲಾಗುತ್ತಿದೆ. ಆದರೆ, ಬಜರಂಗದಳ ನಡೆಸುತ್ತಿರುವ ಶೌರ್ಯ ಜಾಗರಣಾ ರಥಯಾತ್ರೆ ಸಂದರ್ಭದಲ್ಲಿ ಇದು ಮತ್ತಷ್ಟು ವ್ಯಾಪಕವಾಗಿ ಆಗಬೇಕು. ಸಮಾಜದಲ್ಲಿ ಸಾಮರಸ್ಯದ ಸಂದೇಶವನ್ನು ಈ ಯಾತ್ರೆ ಬಿತ್ತಬೇಕು.
| ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ,


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
