CHITRADURGA NEWS | 06 OCTOBER 2026
ಚಿತ್ರದುರ್ಗ: ಸಿರಿಗೆರೆಯ ಹೈಸ್ಕೂಲು ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ವೈಚಾರಿಕತೆ, ಬಂಡಾಯದ ಮನೋಭಾವ ಮತ್ತು ಪ್ರಶ್ನಿಸುವ ಧೈರ್ಯವನ್ನು ಬೆಳೆಸಿಕೊಂಡು ಬಂದಿರುವ ಡಾ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಬಸವ ತತ್ವ, ವಚನ ಸಾಹಿತ್ಯ, ಕಲೆ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ ಎಂದು ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 06 | ಹತ್ತಿ ರೇಟ್ ಎಷ್ಟಿದೆ?
ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದಲ್ಲಿ 1976ರಲ್ಲಿ ಸ್ವರ್ಣ ಪದಕ ಪಡೆದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಅಧ್ಯಾತ್ಮಕ್ಕೆ ಸೀಮಿತವಾಗದೆ ಬಸವಣ್ಣನವರ ವಚನಗಳ ತತ್ವಶಾಸ್ತ್ರವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಜನಪರ ಚಳವಳಿಗಳಿಗೆ ಬೆಂಬಲವಾಗಿ ನಿಂತಿರುವ ಅವರು ತಮ್ಮ ವೈಚಾರಿಕ ಹಾಗೂ ನೈತಿಕ ನಿಲುವುಗಳಿಂದ ಗಮನ ಸೆಳೆದಿದ್ದಾರೆ.
ಸಾಹಿತ್ಯ ಕ್ಷೇತ್ರದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಕೀರಂ ನಾಗರಾಜು, ತೇಜಸ್ವಿ, ಜಿ.ಎಚ್. ನಾಯಕ ಸೇರಿದಂತೆ ಹಲವು ಗಣ್ಯ ಸಾಹಿತಿಗಳು ಹಾಗೂ ರಾಜಕಾರಣಿಗಳೊಂದಿಗೆ ಅವರು ಒಡನಾಟ ಹೊಂದಿದ್ದು, ತಮ್ಮ ಬೌದ್ಧಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಸಾಣೇಹಳ್ಳಿ ರಂಗಭೂಮಿಯ ಪ್ರಮುಖ ಕೇಂದ್ರ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಇಂದು ಕಲೆ, ಸಾಹಿತ್ಯ ಹಾಗೂ ರಂಗಭೂಮಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾಣೇಹಳ್ಳಿ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ನಾಡಿನಾದ್ಯಂತ ಮಾದರಿಯಾಗಿವೆ. ಸುಸಜ್ಜಿತ ಬಯಲು ರಂಗಮಂದಿರ ಹಾಗೂ ಒಳಾಂಗಣ ರಂಗಮಂದಿರ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಇದನ್ನೂ ಓದಿ: ನಾಗಪುರ ದೀಕ್ಷಾಭೂಮಿ ಯಾತ್ರೆ | ಅರ್ಜಿ ಸಲ್ಲಿಸಲು ಅ.09 ಕೊನೆಯ ದಿನ
ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅವರ ಪ್ರಭಾವದಿಂದ ಆರಂಭವಾದ ಕಲಾ ಸಂಘದ ಮೂಲಕ ನೂರಾರು ಕಲಾವಿದರು ರೂಪುಗೊಂಡಿದ್ದು, ಈ ತಂಡವನ್ನು ‘ರಂಗಜಂಗಮ’ ಎಂದು ಕರೆಯಲಾಗುತ್ತದೆ. ನೀನಾಸಮ್ ಮಾದರಿಯಲ್ಲಿ ರೂಪುಗೊಂಡ ‘ಶಿವಸಂಚಾರ’ ರೆಪರ್ಟರಿಯು ಶರಣರ ವಚನ ಸಾಹಿತ್ಯ ಹಾಗೂ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ನಾಟಕಗಳನ್ನು ರಾಜ್ಯದ ವಿವಿಧೆಡೆ ಹಾಗೂ ವಿದೇಶಗಳಲ್ಲಿಯೂ ಪ್ರದರ್ಶಿಸುತ್ತಿದೆ. ಪ್ರತಿವರ್ಷ ನವೆಂಬರ್ನಲ್ಲಿ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವವೂ ನಡೆಯುತ್ತಿದೆ.
ಅ.9ರಂದು ಅಮೃತ ಮಹೋತ್ಸವ
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಮೃತ ಮಹೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಅ.9ರಂದು ಬೆಳಿಗ್ಗೆ 11.30ಕ್ಕೆ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ಮಠಾಧೀಶರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಗದ್ಗುರು ಶ್ರೀ ಶಾಂತವೀರ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಸಮುದಾಯಗಳ ಸಹಭಾಗಿತ್ವದಲ್ಲಿ ಮದಕರಿನಾಯಕ ಜಯಂತಿ ಆಚರಣೆಗೆ ನಿರ್ಧಾರ
ಸಮಾಜದಲ್ಲಿ ವೈಚಾರಿಕತೆ, ಬಸವ ತತ್ವ, ಕಲೆ, ಸಾಹಿತ್ಯ ಹಾಗೂ ರಂಗಭೂಮಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿರುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸೇವೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

