CHITRADURGA NEWS | 06 OCTOBER 2026
ಚಿತ್ರದುರ್ಗ: ಜಿಲ್ಲೆಯ ವಸತಿ ರಹಿತರಿಗೆ ನಿವೇಶನ ನೀಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಲಾಯಿತು.
ಇದನ್ನೂ ಓದಿ: ಸಾಣೇಹಳ್ಳಿ ಶ್ರೀಗಳ ಅಮೃತ ಮಹೋತ್ಸವ | ಪುಸ್ತಕ ಬಿಡುಗಡೆ
ದಾವಣಗೆರೆ ರಸ್ತೆಯ ಯೂನಿಯನ್ ಪಾರ್ಕ್ನಿಂದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವೃತ್ತಕ್ಕೆ ಆಗಮಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸತ್ಯಾಗ್ರಹವನ್ನುದ್ದೇಶಿಸಿ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಮಾತನಾಡಿ, ವಸತಿ ರಹಿತರಿಗೆ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಅಗತ್ಯ ಹಣವನ್ನು ಸರ್ಕಾರ ಮಂಜೂರು ಮಾಡದಿದ್ದರೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳನ್ನು ಸೋಲಿಸುವ ಪ್ರತಿಜ್ಞೆ ಮಾಡಬೇಕಾಗುತ್ತದೆ ಎಂದು ಕರೆ ನೀಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಸತಿ ರಹಿತರ ಹೋರಾಟ ಆರಂಭಗೊಂಡಿದ್ದು, ಮನೆಯಿಲ್ಲದವರೆಲ್ಲರೂ ಸಂಘಟಿತರಾದರೆ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಶಕ್ತಿ ಇದೆ. ರಾಜ್ಯದಲ್ಲಿ ಸುಮಾರು 37 ಲಕ್ಷ ಕುಟುಂಬಗಳಿಗೆ ಸ್ವಂತ ಸೂರಿಲ್ಲ. ಹಲವು ವರ್ಷಗಳಿಂದ ನಿವೇಶನ ಹಾಗೂ ಮನೆಗಳಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ಬಡವರಿಗೆ ಇನ್ನೂ ಸ್ವಂತ ಮನೆ ದೊರೆತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಳಪೆ ಹಂಪ್ಸ್ ತೆರವುಗೊಳಿಸಿ ಗುಣಮಟ್ಟದ ಹಂಪ್ಸ್ ಅಳವಡಿಸಿ | ಕರುನಾಡ ವಿಜಯಸೇನೆ
ಜಿಲ್ಲೆಯಲ್ಲಿ 2,500 ಎಕರೆ ಕಂದಾಯ ಭೂಮಿಯನ್ನು ಗುರುತಿಸಿ 50 ಸಾವಿರ ನಿವೇಶನಗಳನ್ನು ವಿತರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ₹6 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ₹8 ಲಕ್ಷ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು. ಕೇವಲ ₹1.20 ಲಕ್ಷದಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.
ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಹೆಚ್.ಎಂ. ಸಂತೋಷ್ ಮಾತನಾಡಿ, ಜಿಲ್ಲೆಯ ನಿವೇಶನ ಹಾಗೂ ಮನೆಗಳಿಲ್ಲದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಮೊದಲು ಕಂದಾಯ ಭೂಮಿಯನ್ನು ಗುರುತಿಸಬೇಕು. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಆಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ. ಹೀಗಾಗಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ ಎಂದರು.
ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ. ಜಿ.ಸಿ. ಸುರೇಶ್ಬಾಬು ಮಾತನಾಡಿ, ಜಿಲ್ಲೆಯಲ್ಲಿ ಒಂದು ಲಕ್ಷ ಮೂರು ಸಾವಿರಕ್ಕೂ ಹೆಚ್ಚು ವಸತಿ ರಹಿತರಿದ್ದಾರೆ. ನಿವೇಶನ ಮತ್ತು ಮನೆಗಳಿಗಾಗಿ ಹಲವು ಬಾರಿ ಹೋರಾಟ ನಡೆಸಲಾಗಿದೆ. ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುವುದು ಬಡವರಿಗೆ ದುಸ್ತರವಾಗಿದ್ದು, ಸರ್ಕಾರ ಕೂಡಲೇ ಕಂದಾಯ ಭೂಮಿಯನ್ನು ಗುರುತಿಸಿ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು. ಬೇಡಿಕೆ ಈಡೇರುವವರೆಗೂ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಐಟಿಐ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಅಪ್ರೆಂಟಿಸ್ಶಿಪ್, ಉದ್ಯೋಗಾವಕಾಶ | ಡಿಸಿ ಎಸ್.ರಮ್ಯ
ಕಾಂ. ಟಿ.ಆರ್. ಉಮಾಪತಿ, ಕಾಂ. ಜಾಫರ್ ಷರೀಫ್ ಸೇರಿದಂತೆ ಹಲವರು ಮಾತನಾಡಿದರು. ಕಾಂ. ಹನುಮಂತಪ್ಪ, ಕಾಂ. ಸತ್ಯಕೀರ್ತಿ, ಕಾಂ. ಪೆನ್ನಯ್ಯ, ಕಾಂ. ತಿಪ್ಪಮ್ಮ, ಕಾಂ. ಎನ್.ಸಿ. ಕುಮಾರಸ್ವಾಮಿ, ಕಾಂ. ಅಮೀನಾಭಿ, ಕಾಂ. ಗಿರೀಶ್, ಲೇಪಾಕ್ಷಿ, ರಜಿಯಾ, ಗಿರಿಜಮ್ಮ, ಪರ್ವಿನ್ಭಾನು ಸೇರಿದಂತೆ ನೂರಾರು ಮಹಿಳೆಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

