CHITRADURGA NEWS | 21 November 2026
ಹಿರಿಯೂರು: ಸಾರ್ವಜನಿಕರಿಗೆ ಖಾತೆ ಮಾಡಿಕೊಡಲು ಅಧಿಕಾರಿಯೊಬ್ಬರು ಲಂಚ ಕೇಳಿರುವುದು ನಿಜವೆಂದು ಸಾಬೀತಾದರೆ ಅಂತಹ ಅಧಿಕಾರಿಯನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇದನ್ನೂ ಓದಿ: ಅಧಿಕಾರವೆಂಬುದು ಸ್ವಂತಕ್ಕಲ್ಲ, ಜನಸೇವೆಗಾಗಿ | ಶಾಸಕ ಡಾ.ಎಂ.ಚಂದ್ರಪ್ಪ
ತಾಲ್ಲೂಕಿನ ಕೆ.ಎಂ. ಕೊಟ್ಟಿಗೆ ಎಕೆ ಕಾಲೋನಿಯ ಕೆ. ಚಂದ್ರು ಎಂಬುವರು ಪ್ರಜಾಸೇವಾ ಕಾರ್ಯಕ್ರಮದಲ್ಲಿ ಖಾತೆ ಮಾಡಿಕೊಡಲು ಅಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಸಿಎಂ ಈ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದೇ ಈ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಲಂಚ ಕೇಳಿರುವುದು ನಿಜವೆಂದು ತಿಳಿದುಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಇಂತಹವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದರು.
ಹಿರಿಯೂರಿನಲ್ಲಿ ಶನಿವಾರ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಖಾತೆ ಸಮಸ್ಯೆ, ಜಮೀನಿಗೆ ದಾರಿ, ಹೈಟೆನ್ಷನ್ ವಿದ್ಯುತ್ ಮಾರ್ಗ, ಬಸ್ ನಿಲುಗಡೆ, ಶಾಲಾ ಕಟ್ಟಡ, ವಸತಿ ಸೇರಿದಂತೆ ಜನಸಾಮಾನ್ಯರ ಹತ್ತಾರು ಸಮಸ್ಯೆಗಳು ಕಾರ್ಯಕ್ರಮದಲ್ಲಿ ಅನಾವರಣಗೊಂಡವು.
ಇದನ್ನೂ ಓದಿ: ಹಿರಿಯೂರು ಅಭಿವೃದ್ಧಿಗೆ ₹2 ಸಾವಿರ ಕೋಟಿಗೂ ಅಧಿಕ ಅನುದಾನ | ಸಿಎಂ ಡಿ.ಕೆ. ಶಿವಕುಮಾರ್
ತಾಯಿ, ಟೆನ್ಷನ್ ಮಾಡಿಕೊಳ್ಳಬೇಡಿ; ನಾನಿದ್ದೇನೆ
ಯರಿಚಿಕ್ಕನಹಳ್ಳಿಯ ಮಾನಸ ಮತ್ತು ರವಿ ಎಂಬುವರು ತಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದುಹೋಗುವುದರಿಂದ ಅಡಿಕೆ ತೋಟಗಳಿಗೆ ತೊಂದರೆಯಾಗುತ್ತಿದೆ. ತಾಲ್ಲೂಕಿನ 22 ಗ್ರಾಮಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಎದುರಾಗಿದ್ದು, ಜಮೀನು ಕಳೆದುಕೊಳ್ಳುವ ಆತಂಕವಿದೆ ಎಂದು ಮುಖ್ಯಮಂತ್ರಿಗಳ ಮುಂದೆ ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಸಿಎಂ, ‘ತಾಯಿ, ಹೈಟೆನ್ಷನ್ ವಿದ್ಯುತ್ ಮಾರ್ಗದ ವಿಚಾರವಾಗಿ ಟೆನ್ಷನ್ ಮಾಡಿಕೊಳ್ಳಬೇಡಿ. ನಾನು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು. ಎರಡು ಮೂರು ದಿನಗಳೊಳಗೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯ ವಾಸ್ತವಾಂಶ ತಿಳಿದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸಲ್ಲ?
ಕೆಎಸ್ಆರ್ಟಿಸಿ ಬಸ್ಗಳು ಹಿರಿಯೂರು ಪಟ್ಟಣದ ಒಳಗೆ ಬಾರದೆ ಬೈಪಾಸ್ನಲ್ಲಿ ನಿಲ್ಲಿಸುತ್ತಿರುವುದರಿಂದ ಮಹಿಳೆಯರು, ಗರ್ಭಿಣಿಯರು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರಿಕಾ ವಿತರಕ ಏಕಾಂತಪ್ಪ ಮುಖ್ಯಮಂತ್ರಿಗಳ ಗಮನ ಸೆಳೆದರು. ಪಟ್ಟಣದೊಳಗೆ ಬಸ್ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್…..
ಇದರಿಂದ ಅಸಮಾಧಾನಗೊಂಡ ಸಿಎಂ, ‘ಗರ್ಭಿಣಿಯರಿದ್ದರೂ ಬಸ್ ಏಕೆ ನಿಲ್ಲಿಸುವುದಿಲ್ಲ? ಮಾನವೀಯತೆ ಇಲ್ಲವೇ? ಕೂಡಲೇ ಈ ಸಮಸ್ಯೆ ಬಗೆಹರಿಸಿ ನನಗೆ ಮಾಹಿತಿ ನೀಡಬೇಕು. ಇಂತಹ ಸಮಸ್ಯೆ ಮತ್ತೆ ಮತ್ತೆ ಪುನರಾವರ್ತನೆಯಾಗಬಾರದು’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗೆ ತಾಕೀತು ಮಾಡಿದರು.
85 ವರ್ಷದ ಅಜ್ಜಿಗೆ ಭೂಮಿ ಮಂಜೂರು ಭರವಸೆ
ಕಸವನಹಳ್ಳಿಯ 85 ವರ್ಷದ ಲಕ್ಷ್ಮಮ್ಮ ಅವರು ತಮಗೆ ಸ್ವಂತ ಜಮೀನಿಲ್ಲ. ಜೀವನ ನಿರ್ವಹಣೆಗೆ ಸ್ವಲ್ಪ ಭೂಮಿ ಮಂಜೂರು ಮಾಡಿಕೊಡಿ ಎಂದು ಮುಖ್ಯಮಂತ್ರಿಗಳ ಕೈಹಿಡಿದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ, ‘ಅಜ್ಜಿ, ನಿಮಗೆ ಭೂಮಿ ಮಂಜೂರು ಮಾಡಿಸಿಕೊಡುತ್ತೇವೆ. ಉಳುವವನಿಗೆ ಭೂಮಿ ನೀಡಿದ ಪಕ್ಷ ನಮ್ಮದು’ ಎಂದು ಭರವಸೆ ನೀಡಿದರು. ಇದರಿಂದ ಲಕ್ಷ್ಮಮ್ಮ ಅವರ ಮುಖದಲ್ಲಿ ಸಂತಸ ಮೂಡಿತು.
15 ಹೊಲಗಳಿಗೆ ಹೋಗಲು ದಾರಿಯೇ ಇಲ್ಲ
ತಹಶೀಲ್ದಾರ್ ಅವರಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಸುಮಾರು 10ರಿಂದ 15 ಹೊಲಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ ಎಂದು ರೈತರು ಅಹವಾಲು ಸಲ್ಲಿಸಿದರು. ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಭದ್ರಾ ಜಲಾಶಯದಿಂದ 2 TMC ನೀರು ಹರಿಸಿ | ಸಚಿವ ಟಿ.ರಘುಮೂರ್ತಿ ಮನವಿ
ಶಾಲೆಗೆ ಕಟ್ಟಡವಿಲ್ಲ, ಎಲ್ಕೆಜಿಗೂ ಅವಕಾಶವಿಲ್ಲ
ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕೊರತೆಯಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಕೆಜಿ ಆರಂಭಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರಸನ್ನ ಎಂಬುವರು ಮನವಿ ಮಾಡಿದರು. ಈ ಕುರಿತು ಡಿಡಿಪಿಐ ಎರಡು ಬಾರಿ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ತಕ್ಷಣ ಸ್ಪಂದಿಸಿದ ಸಿಎಂ, ಡಿಡಿಪಿಐ ಅವರನ್ನು ಕರೆಸಿ ಅರ್ಜಿ ಪಡೆದು ಮೊದಲು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ವಕೀಲರ ಭವನಕ್ಕೆ ₹3 ಕೋಟಿ ಅನುದಾನಕ್ಕೆ ಮನವಿ
ಹಿರಿಯೂರಿನಲ್ಲಿ ಸುಮಾರು 250ಕ್ಕೂ ಹೆಚ್ಚು ವಕೀಲರಿದ್ದು, ವಕೀಲರ ಭವನ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಭವನ ನಿರ್ಮಾಣಕ್ಕಾಗಿ ₹3 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡಬೇಕು ಎಂದು ವಕೀಲರ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮಹಿಳೆಯರಿಗೆ ಉದ್ಯಾನವನ, ಸಾರ್ವಜನಿಕರಿಗೆ ಶೌಚಾಲಯ
ಧರ್ಮಪುರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಹಾಗೂ ಹಿರಿಯೂರಿನಲ್ಲಿ ಇಂದಿರಾ ಗಾಂಧಿ ಉದ್ಯಾನವನ ಅಭಿವೃದ್ಧಿಪಡಿಸಿ ಮಹಿಳೆಯರಿಗೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಮನೆ ನಿರ್ಮಾಣದ ಬಿಲ್ ಬಾಕಿ
ಮನೆ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳಿಗೆ ಬಿಲ್ ಪಾವತಿಯಾಗದೆ ಬಾಕಿ ಉಳಿದಿರುವುದನ್ನು ಕೆಲವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅರ್ಜಿ ಸಲ್ಲಿಸುವಲ್ಲಿ ಲೋಪವಾಗಿದ್ದರೆ ಸಂಬಂಧಪಟ್ಟವರಿಂದ ಅರ್ಜಿ ಪಡೆದು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಕುರಿ, ಮೇಕೆ ಸಾಕಾಣಿಕೆಯಲ್ಲಿ ಆಸಕ್ತ ರೈತರಿಗೆ ಎರಡು ದಿನಗಳ ತರಬೇತಿ
ಅರ್ಜಿದಾರನೊಂದಿಗೆ ಸಿಎಂ ಸೆಲ್ಫಿ
ಅಲೆಮಾರಿ ಸಮುದಾಯದವರಿಗೆ ಮನೆಗಳಿಲ್ಲದೆ ವಾಸಿಸಲು ಸೂರಿಲ್ಲ ಎಂದು ಯುವಕನೊಬ್ಬ ಅರ್ಜಿ ಹಿಡಿದು ಮುಖ್ಯಮಂತ್ರಿಗಳ ಬಳಿ ಬಂದಿದ್ದ. ಆತನ ಅಹವಾಲು ಆಲಿಸಿದ ಶಿವಕುಮಾರ್, ‘ಆಯ್ತು ಬಿಡಪ್ಪ, ಮನೆ ಕೊಡಿಸೋಣ. ನಾನಿದ್ದೇನೆ, ಯಾವುದೇ ಚಿಂತೆ ಮಾಡಬೇಡ’ ಎಂದು ಧೈರ್ಯ ತುಂಬಿದರು. ಬಳಿಕ ಯುವಕನ ಮೊಬೈಲ್ ಪಡೆದು ಆತನೊಂದಿಗೆ ತಾವೇ ಸೆಲ್ಫಿ ತೆಗೆದುಕೊಂಡರು. ಮುಖ್ಯಮಂತ್ರಿಗಳೇ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರಿಂದ ಯುವಕನ ಮುಖದಲ್ಲಿ ಮಂದಹಾಸ ಮೂಡಿತು.
ಹೊಸ ಎಳನಾಡಿನ ಮಾಜಿ ಸೈನಿಕ ವೆಂಕಟೇಶ್ ಅವರು ದೇಶಸೇವೆ ಸಲ್ಲಿಸಿರುವ ತಮಗೆ ನಿವೇಶನ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು. ಈಶ್ವರಗೆರೆಯ ಸುರೇಶ್ ಅವರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಿಎಂ, ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು.
ಇದೇ ವೇಳೆ ಕ್ಲೌಡ್ ಕಿಚನ್ ಯೋಜನೆ ಕೈಬಿಟ್ಟು ಬಿಸಿಯೂಟ ನೌಕರರನ್ನು ರಕ್ಷಿಸಬೇಕು ಎಂದು ನಿಂಗಮ್ಮ ಮನವಿ ಸಲ್ಲಿಸಿದರು. ಜಿ.ಎನ್. ಕೋಟೆ ಕೆರೆಗೆ ಭದ್ರಾ ನೀರು ಹರಿಸುವಂತೆ ರೈತ ಸಂಘದ ಮಂಜುನಾಥ್, ಪಾಯಯ್ಯ ಹಾಗೂ ಶಿವಕುಮಾರ್ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಬೆಸ್ಕಾಂ ನಿರ್ವಹಣಾ ಕಾರ್ಯ | ಚಿತ್ರದುರ್ಗ ಸುತ್ತಮುತ್ತ ವಿದ್ಯುತ್ ಕಡಿತ
ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

